ಸೋಂಕು ಹರಡದಂತೆ, ಸೋಂಕಿತರ ಒಳಿತಿಗಾಗಿ ನಾವುಗಳು ಕೈಗೊಂಡಿರುವ ಕ್ರಮದ ಬಗ್ಗೆ ಕೆಲವರಿಂದ ನಿರಾಕರಣೆಯ ಧೋರಣೆಯೂ ಕಂಡುಬರುತ್ತಿದೆ. ಬಹುತೇಕ ಮಂದಿ ಕೇರ್ ಸೆಂಟರ್‍ಗೆ ದಾಖಲಾಗಲು ನಿರಾಕರಿಸುವದಲ್ಲದೆ, ತಾವು ಬಂದಿದ್ದ ಸ್ವಂತ ವಾಹನದಲ್ಲಿ ಯಾರಿಗೂ ತಿಳಿಸದೆ ಮನೆಗಳಿಗೆ ತೆರಳುವದೂ ಮಾಡುತ್ತಾರೆ. ಅಂತಹವರನ್ನು ಗುರುತಿಸಿ ಮತ್ತೆ ಕರೆತರುವ ವ್ಯವಸ್ಥೆಯನ್ನೂ ಕೂಡ ಮಾಡುತ್ತೇವೆ. ಇನ್ನೂ ಕೆಲವರು ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು, ಪ್ರಭಾವಿಗಳ ಮೂಲಕ ಒತ್ತಡ ತಂದು ಮನೆಗಳಿಗೆ ತೆರಳಲು ಪ್ರಯತ್ನಿಸುತ್ತಾರೆ. ಆದರೆ, ಅವರುಗಳ ಹಾಗೂ ಇತರ ಅಮಾಯಕರ ಸುರಕ್ಷತೆಯ ದೃಷ್ಟಿಯಿಂದ ಇದು ಉತ್ತಮ ಬೆಳವಣಿಗೆಯಲ್ಲ ಎಂದು ಲಕ್ಷ್ಮಿ ಹೇಳುತ್ತಾರೆ. ಇಷ್ಟೆ ಅಲ್ಲದೆ, ಮುಂದುವರಿದ ಇನ್ನೂ ಕೆಲವರು ತಾವೇ ಸ್ವತಃ ಹಾಗೂ ಇತರರ ಮೂಲಕ ಬೆದರಿಕೆ ಕೂಡ ಹಾಕುತ್ತಿರುವದಾಗಿ ಹೇಳಿದ ಅವರು; ತಾನು ಇಂತಹ ಯಾವದೇ ಬೆದರಿಕೆಗಳಿಗೆ ಜಗ್ಗುವದೂ ಇಲ್ಲ, ತನ್ನ ಕರ್ತವ್ಯ ನಿಭಾಯಿಸುವದಾಗಿ ದೃಢ ಮನಸಿನಿಂದ ಹೇಳುತ್ತಾರೆ.