ಪಾಸಿಟಿವ್ ದೃಢಪಟ್ಟ ಬಳಿಕ ವೈದ್ಯರ ಶಿಫಾರಸ್ಸಿನಂತೆ ಕೋವಿಡ್ ಕೇರ್ ಸೆಂಟರ್ ಅಥವಾ ಮನೆಗೆ ಕಳುಹಿಸಬೇಕೆಂದು ತಿಳಿಸಲಾಗುತ್ತದೆ. ಆದರೆ, ಸೋಂಕಿತರಲ್ಲಿ ಕೆಲವರು ತಾವೂ ಮನೆಯಲ್ಲಿಯೇ ಇರುವದಾಗಿಯೂ, ಮನೆಯಲ್ಲಿ ಎಲ್ಲ ಸೌಲಭ್ಯಗಳಿರುವದಾಗಿಯೂ ಹೇಳಿಕೊಂಡು ತೆರಳುತ್ತಾರೆ. ಆದರೆ ಬಹುತೇಕರು ಈ ರೀತಿ ಸುಳ್ಳು ಹೇಳಿಕೊಂಡು ಹೋಗಿ ನಂತರದಲ್ಲಿ ಇತರರಿಗೂ ಸೋಂಕು ಹರಡುವಲ್ಲಿ ಕಾರಣಕರ್ತರಾಗಿರುವದು ಗಮನಕ್ಕೆ ಬಂದ ಬಳಿಕ ಈ ರೀತಿಯ ಕ್ರಮಕ್ಕೆ ಮುಂದಾಗಿದ್ದೇವೆ. ಜಿಲ್ಲಾಧಿಕಾರಿಗಳು ಕೂಡ ಈ ನಿಟ್ಟಿನಲ್ಲಿ ಎಲ್ಲ ರೀತಿಯ ಮಾರ್ಗಸೂಚಿಯೊಂದಿಗೆ ಸಹಕಾರ ನೀಡುತ್ತಿರುವದಾಗಿ ಲಕ್ಷ್ಮಿ ‘ಶಕ್ತಿ’ಗೆ ತಿಳಿಸಿದ್ದಾರೆ. ಈ ಬಗ್ಗೆ ಕ್ರಮ ವಹಿಸುವ ನಿಟ್ಟಿನಲ್ಲಿ ಗ್ರಾಮ ಮಟ್ಟದಿಂದಲೇ ನಿಗಾ ವಹಿಸಲಾಗುವದು. ಈಗಾಗಲೇ ಗ್ರಾಮ ಪಂಚಾಯಿತಿ ಟಾಸ್ಕ್ ಪೋರ್ಸ್ ಮತ್ತು ಗ್ರಾಮ ಟಾಸ್ಕ್ ಪೋರ್ಸ್‍ಗಳು ಯಶಸ್ವಿಯಾಗಿ ಕ್ರಮಕೈಗೊಳ್ಳುತ್ತಿವೆ. ಸೋಂಕಿತರು ಪತ್ತೆಯಾದ ಕೂಡಲೇ ಅವರುಗಳ ಪೂರ್ವಾಪರ ವಿಚಾರಿಸುವದರೊಂದಿಗೆ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಿ ಆಂಬ್ಯುಲೆನ್ಸ್ ಅಥವಾ ಲಭ್ಯವಿರುವ ಯಾವದಾದರೂ ವಾಹನಗಳಲ್ಲಿ ಅವರುಗಳನ್ನು ಆಸ್ಪತ್ರೆಗೆ ಕರೆತಂದು ದಾಖಲು ಮಾಡಲು ಎಲ್ಲ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಮೂರು ದಿನಗಳಿಂದ ಈ ಕ್ರಮ ಆಗುತ್ತಿದೆ. ಗೃಹ ಸಂಪರ್ಕ ತಡೆಯಲ್ಲಿರುವವರಿಗೆ ಸೀಲ್ ಹಾಕಿ ಹೊರ ಹೋಗದಂತೆ ನೀಗಾ ವಹಿಸಲಾಗುತ್ತದೆ. ಅಗತ್ಯವಿದ್ದಲ್ಲಿ ಕೇರ್ ಸೆಂಟರ್ ಹಾಗೂ ಹಾಸಿಗೆ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ಸಿದ್ಧವಿದೆ ಎಂದು ಅವರು ಮಾಹಿತಿ ನೀಡಿದರು.