ಗೋಣಿಕೊಪ್ಪಲು, ಮೇ 14: ಕೊರೊನಾ ಸೋಂಕಿನ ವ್ಯಕ್ತಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗುವ ಸಂದರ್ಭ ಅವರಿಗೆ ದಿನನಿತ್ಯದ ಊಟೋಪಾಚಾರಕ್ಕೆ ಬೇಕಾದ ಅಗತ್ಯ ವಸ್ತುಗಳಾದ ದಿನಸಿ, ತರಕಾರಿ ಹಾಗೂ ಇನ್ನಿತರ ವಸ್ತುಗಳನ್ನು ಉಚಿತವಾಗಿ ನೀಡಲು ಸಂಸ್ಥೆ ಮುಂದೆ ಬಂದಿದೆ.

ಗೋಣಿಕೊಪ್ಪಲು ಪುತ್ತರಿ ರೈತ ಉತ್ಪಾದಕರ ಸಂಸ್ಥೆ ಈ ಕಾರ್ಯ ಮಾಡಲು ಮುಂದೆ ಬಂದಿದೆ.

ಕೊಡಗಿನಲ್ಲಿ ಪ್ರಥಮ ಬಾರಿಗೆ ಗೋಣಿಕೊಪ್ಪ ಸಮೀಪದ ಅತ್ತೂರುವಿನಲ್ಲಿರುವ ಲೋಪಾಮುದ್ರ ಖಾಸಗಿ ಆಸ್ಪತ್ರೆಯಲ್ಲಿ ಕಾರುಣ್ಯ ಟ್ರಸ್ಟ್ ಮೂಲಕ ಕೋವಿಡ್ ಸೆಂಟರ್ ಇದೀಗ ಕಾರ್ಯರಂಭವಾಗಿದೆ. ಈ ಸೆಂಟರ್‍ನಲ್ಲಿ ಸಧ್ಯದ ಮಟ್ಟಿಗೆ 30 ಹಾಸಿಗೆಯ ವ್ಯವಸ್ಥೆ ಮಾಡಲಾಗಿದೆ. ಈ ಕೋವಿಡ್ ಸೆಂಟರ್‍ನಲ್ಲಿ ಇರುವ ಸೋಂಕಿತರಿಗೆ ಪ್ರತಿದಿನ ಬೇಕಾದ ಅಗತ್ಯ ಸಾಮಗ್ರಿಗಳನ್ನು ಉಚಿತವಾಗಿ ನೀಡಲು ಪುತ್ತರಿ ಸಂಸ್ಥೆ ತಯಾರಿ ನಡೆಸಿದೆ.

ಅಲ್ಲದೆ ಪುತ್ತರಿ ರೈತ ಉತ್ಪಾದಕರ ಸಂಸ್ಥೆಯ ವಾಹನವನ್ನು ಚಾಲಕರ ಸಹಿತ ದಿನದ 24 ಗಂಟೆ ಆಸ್ಪತ್ರೆಯ ಸೇವೆಗೆ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ಕೊರೊನಾ ಎರಡನೇ ಅಲೆಯು ಇತ್ತೀಚಿನ ದಿನಗಳಲ್ಲಿವ್ಯಾಪಕವಾಗಿ ಹರಡುತ್ತಿದೆ.

ಇಂತಹ ಸಂದರ್ಭದಲ್ಲಿ ಸಮಾಜಕ್ಕೆ ಸಹಾಯ ಸಹಕಾರ ನೀಡಲು ಪುತ್ತರಿ ಸಂಸ್ಥೆ ತಮ್ಮ ಆಡಳಿತ ಮಂಡಳಿಯ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಂಡಿದ್ದರು.

ನಮ್ಮ ಗ್ರಾಮದಲ್ಲಿ ಕೋವಿಡ್ ಕೇಂದ್ರ ಆರಂಭಗೊಂಡಿರುವುದರಿಂದ ಅಲ್ಲಿಗೆ ಆಗಮಿಸುವ ಕೋವಿಡ್ ಸೋಂಕಿತರಿಗೆ ಊಟೋಪಚಾರಕ್ಕೆ ತೊಂದರೆ ಎದುರಾಗಬಾರದು ಎಂಬ ನಿಟ್ಟಿನಲ್ಲಿ ಇವರಿಗೆ ದಿನನಿತ್ಯಕ್ಕೆ ಬೇಕಾದ ಆಹಾರ ಸಾಮಗ್ರಿಗಳನ್ನು ನೀಡಲು ಮುಂದೆ ಬಂದಿದೆ. ಇದರಿಂದಾಗಿ ಸಂಸ್ಥೆ ಸಮಾಜದ ಜವಾಬ್ದಾರಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಿದೆ.

ಕಳೆದ ಬಾರಿಯೂ ಕೋವಿಡ್ ಸಂಭವಿಸಿದ ಸಂದರ್ಭ ಪುತ್ತರಿ ಎಫ್‍ಪಿಸಿಎಲ್ ಕೊಡಗಿನ ವಿವಿಧ ಭಾಗಗಳಿಗೆ ತೆರಳಿ ಜನರಿಗೆ ಅಗತ್ಯ ಕಿಟ್ ನೀಡಿ ಸಹಾಯ ನೀಡುವಲ್ಲಿ ಯಶಸ್ವಿಯಾಗಿತ್ತು.