ಮಡಿಕೇರಿ, ಮೇ 14: ನಗರಸಭೆ ಚುನಾವಣೆಯಲ್ಲಿ ಸೋಲು ಸೇರಿದಂತೆ ನಿರೀಕ್ಷೆಗೆ ತಕ್ಕಂತೆ ಪಕ್ಷ ಸಂಘಟನೆ ಮಾಡಲು ಸಾಧ್ಯವಾಗದ ಕಾರಣ, ನೈತಿಕ ಹೊಣೆ ಹೊತ್ತು ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್‍ಕುಮಾರ್ ತಿಳಿಸಿದ್ದಾರೆ.

ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ಕಳೆದ ಒಂದು ವಾರದ ಹಿಂದೆಯೇ ತಾನು ರಾಜೀನಾಮೆಯನ್ನು ವರಿಷ್ಠರಿಗೆ ಸಲ್ಲಿಸಿದ್ದೇನೆ. ಆದರೆ, ರಾಜೀನಾಮೆ ಇನ್ನೂ ಆಂಗೀಕಾರವಾಗಿಲ್ಲ ಎಂದರು. ಪಕ್ಷ ಯಾವ ರೀತಿ ನಿರ್ಧಾರ ಕೈಗೊಳ್ಳುತ್ತದೋ ಅದಕ್ಕೆ ತಾನು ಬದ್ಧನಾಗಿರುತ್ತೇನೆ ಎಂದರು.

ನಗರಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿರುವುದು ಬೇಸರ ತರಿಸಿದೆ. ಅಂದುಕೊಂಡ ರೀತಿ ಪಕ್ಷ ಸಂಘಟನೆಯಾಗಿಲ್ಲ ಎಂಬ ನೋವು ಕೂಡ ತನಗಿದೆ. ತಾನು ಜಿಲ್ಲಾಧ್ಯಕ್ಷನಾಗಿದ್ದ 3 ವರ್ಷ 9 ತಿಂಗಳು ಕಾರ್ಯಕರ್ತರು ಪಕ್ಷ ಕಟ್ಟಲು ಪೂರಕ ಬೆಂಬಲ ನೀಡಿದರು. ಆದರೆ, ಬೂತ್ ಮಟ್ಟದ ನಾಯಕರಿಂದ ಸೂಕ್ತವಾದ ಸ್ಪಂದನ ದೊರೆತಿಲ್ಲ ಜಾತ್ಯತೀತ ಪಕ್ಷವಾಗಿರುವ ಕಾಂಗ್ರೆಸ್‍ಗೆ ನಗರಸಭೆ ಚುನಾವಣೆಯಲ್ಲಿ ಸೋಲು ಕಾಣಲು ಕಾರಣದ ಬಗ್ಗೆ ಆತ್ಮಾವಲೋಕನ ಮಾಡಿಕೊಂಡಿದ್ದೇನೆ ಎಂದರು.

ಪಕ್ಷದೊಳಗೆ ತನ್ನ ಮೇಲೆ ಅಸಮಾಧಾನ ಇದೆ. ಯಾರೇ ಜಿಲ್ಲಾಧ್ಯಕ್ಷರಾದರು ಅಸಮಾಧಾನವನ್ನು ಎದುರಿಸಲೆಬೇಕು. ತಾನು ಕೂಡ ಅದನ್ನು ಎದುರಿಸಿದ್ದೇನೆ. ಆದರೆ, ಅದರಿಂದ ನೊಂದು ಹೊರಬಂದಿಲ್ಲ. ಸಂಘಟನೆ ನಿರೀಕ್ಷೆಗೆ ತಕ್ಕಂತೆ ಆಗಿಲ್ಲ ಎಂಬ ನೋವಿಂದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದೇನೆ ಹೊರತು ಭಯದಿಂದಲ್ಲ ಎಂದು ವಿವರಿಸಿದರು.