ಮಕ್ಕಳ ಸ್ಕೂಲ್ ಮನೇಲಲ್ವೇ ಎಂಬ ಮಾತು ನಿಜವಾಗುತ್ತಿದೆ. ತಾಯಿಯೇ ಮೊದಲ ಗುರು ಎಂಬುದು ಸಾಬೀತಾಗಿದೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ಮಾತನ್ನೇ ನಂಬುವುದಾದಲ್ಲಿ, ಭವಿಷ್ಯದ ಪ್ರಜೆಗಳ ಜೀವನವೇ ಅತಂತ್ರವಾಗಿದೆ. ಗೋಜಲು, ಗೊಂದಲವಾಗಿದೆ.

ಶೈಕ್ಷಣಿಕವಾಗಿ ವಿದ್ಯಾರ್ಥಿಗಳ ಶಿಕ್ಷಣದ ಅಡಿಪಾಯವೇ ಸರಿಯಾಗಿ ಇಲ್ಲದಿದ್ದರೆ ಯಾವುದೇ ದೇಶ ಮತ್ತು ಸಮಾಜ ಭವಿಷ್ಯದಲ್ಲಿ ಮಹಾ ದುರಂತವನ್ನೇ ಕಾಣಬೇಕಾಗುತ್ತದೆ.

ಕೊರೊನಾ ಸಂಕಷ್ಟದಿಂದಾಗಿ ಕಳೆದ 1 ವರ್ಷದಿಂದ ಮಕ್ಕಳು ಸರಿಯಾಗಿ ಶಾಲೆಗೇ ಹೋಗಿಲ್ಲ. ನಾಲ್ಕು ಗೋಡೆಗಳ ತರಗತಿ ಶಿಕ್ಷಣದ ಬದಲಿಗೆ ಒಂದು ಮೊಬೈಲ್‍ನ ಆನ್‍ಲೈನ್ ಶಿಕ್ಷಣ ವ್ಯವಸ್ಥೆಗೆ ವಿದ್ಯಾರ್ಥಿಗಳು ಅನಿವಾರ್ಯವಾಗಿ ಬೆಸೆದುಕೊಂಡಿದ್ದಾರೆ. ಸಾಂಪ್ರದಾಯಿಕ ಶಿಕ್ಷಣದ ಬದಲಿಗೆ ಡಿಜಿಟಲ್ ಶಿಕ್ಷಣಕ್ಕೆ ವಿದ್ಯಾರ್ಥಿಗಳು ಹೊಂದಿಕೊಳ್ಳಬೇಕಾಗಿದೆ. ಪರೀಕ್ಷೆಗಳೇ ಇಲ್ಲದ, ಶಿಕ್ಷಕರನ್ನೇ ಮುಖಾಮುಖಿಯಾಗಿ ಕಾಣದ, ಪಠ್ಯೇತರ ಚಟುವಟಿಕೆಗಳಿಂದ ದೂರವಾದ ಈ ವಿದ್ಯಾ ಪದ್ಧತಿಯೇ ವಿಚಿತ್ರ. ಅದರಲ್ಲಿಯೂ ಭಾರತದಂತಹ ಮಧ್ಯಮ ವರ್ಗದ ದೇಶದ ವಿದ್ಯಾರ್ಥಿಗಳು ಮಾತ್ರವಲ್ಲ ಶಿಕ್ಷಕರಿಗೂ ಆನ್‍ಲೈನ್ ಶಿಕ್ಷಣ ಪದ್ಧತಿ ಹೊಸತು.

ಯಾವ ಮಕ್ಕಳನ್ನು ಮೊಬೈಲ್ ನೋಡಿ ಹಾಳಾಗಬೇಡಿ ಎಂದು ಪೆÇೀಷಕರು, ಶಿಕ್ಷಕರು ಎಚ್ಚರಿಸು ತ್ತಿದ್ದರೋ ಅಂಥ ವಿದ್ಯಾರ್ಥಿಗಳಿಗೆ ಮೊಬೈಲ್ ನೋಡಿ ವಿದ್ಯೆ ಕಲಿಯಿರಿ ಎಂದು ಆದೇಶಿಸಬೇಕಾದ ಕಾಲಘಟ್ಟ ಇಂದಿನದು.

ಖಾಸಗಿ ಶಾಲೆಗಳ ವಿದ್ಯಾರ್ಥಿಗಳೇನೋ ಆನ್‍ಲೈನ್ ಮೂಲಕ ಅಷ್ಟಿಷ್ಟು ಕಲಿಯುತ್ತಿದ್ದಾರೆ. ಸರ್ಕಾರಿ ವಿದ್ಯಾರ್ಥಿಗಳ ಪಾಡು ಕೇಳುವುದೇ ಬೇಡ. ವಿದ್ಯಾಗಮ ಎಂಬ ಅವೈಜ್ಞಾನಿಕ ಪದ್ಧತಿಯಿಂದ ವಿದ್ಯಾರ್ಥಿಗಳು ಎಷ್ಟು ಕಲಿತರು ಎಂಬ ಪ್ರಶ್ನೆಗಿಂತ ಆ ವ್ಯವಸ್ಥೆ ಶಿಕ್ಷಕ, ಶಿಕ್ಷಕಿಯರನ್ನು ಎಷ್ಟು ಹೈರಾಣು ಮಾಡಿತ್ತು ಎಂಬುದು ಮುಖ್ಯವಾಗುತ್ತದೆ.

ಶಾಲಾ ತರಗತಿಯಲ್ಲಿ ಬಡವ - ಶ್ರೀಮಂತ ಎಂಬ ಬೇಧವಿಲ್ಲದೇ ಒಟ್ಟಿಗೆ ಕುಳಿತು ವಿದ್ಯೆ ಕಲಿಯುತ್ತಿದ್ದವರಿಗೆ ಮೊಬೈಲ್ ಶಿಕ್ಷಣ ಆರ್ಥಿಕ ಬೇಧವನ್ನು ತಂದಿದೆ. ಮೊಬೈಲ್ ನೋಡಿಕೊಂಡು ವಿದ್ಯೆ ಕಲಿಯುತ್ತಿರುವ ವಿದ್ಯಾರ್ಥಿ ಆನ್‍ಲೈನ್ ತರಗತಿ ಮುಗಿದ ಬಳಿಕ ಮೊಬೈಲ್‍ನ ದಾಸನಾಗಿದ್ದಾನೆ. ಯಾವ ಯಾವ ವಿಚಾರಗಳನ್ನು, ಯಾವ ಯಾವ ಸಂಗತಿಗಳನ್ನು ವೀಡಿಯೋದಲ್ಲಿ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಎಂಬ ಆತಂಕಕಾರಿ ಪ್ರಶ್ನೆ ಪೆÇೀಷಕರಿಗಿಂತ ಶಿಕ್ಷಕ ವರ್ಗದಲ್ಲಿ ಹೆಚ್ಚಾಗಿದೆ. ಮೊಬೈಲ್‍ನ ಪುಟ್ಟ ಪರದೆ ಪುಟ್ಟ ಮಕ್ಕಳಿಗೆ ತೋರಿಸಬಾರದ್ದನ್ನೆಲ್ಲಾ ತೋರಿಸುವ ಅಪಾಯ ಇದ್ದೇ ಇದೆ.

ಮನೆಯಲ್ಲಿಯೇ ಕಳೆದೊಂದು ವರ್ಷದಿಂದ ಶಾಲೆಗೆ ಹೋಗಲಾಗದ ಪರಿಸ್ಥಿತಿಯಲ್ಲಿ ಕುಳಿತು ಬಿಟ್ಟಿರುವ ವಿದ್ಯಾರ್ಥಿಗಳು ಪೆÇೀಷಕರಿಗೆ ಗೌರವ ಕೊಡುತ್ತಿಲ್ಲ. ಮಾನಸಿಕವಾಗಿ ರೇಗುವ ಮನಸ್ಥಿತಿ ಮಕ್ಕಳಲ್ಲಿ ಹೆಚ್ಚಾಗುತ್ತಿದೆ. ಮಕ್ಕಳು ಯಾಕೆ ಹೀಗೆ ಆದರು ಎಂಬ ಚಿಂತೆಗಳ ಕಂತೆಯೇ ಪೆÇೀಷಕರ ಮನದಲ್ಲಿ ದಿನನಿತ್ಯ ಕಾಡುತ್ತಿದೆ.

ಕೊರೊನಾದಿಂದಾಗಿ ಭಾರತದಲ್ಲಿ 3.50 ಕೋಟಿ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ತಪ್ಪಿ ಗ್ರಾಮೀಣ ಮಕ್ಕಳಿಗೆ ಪೌಪ್ಟಿಕಾಂಶದ ಕೊರತೆಯಾಗಿದೆ. ಅನೇಕ ಮಕ್ಕಳು ಕೂಲಿಕಾರ್ಮಿಕರಾಗಿ ದುಡಿಯತೊಡಗಿದ್ದರಿಂದ ಮಕ್ಕಳ ವೇತನವನ್ನೇ ಮುಂದೆ ಬಡ ಕಾರ್ಮಿಕರು ಅವಲಂಭಿಸಿ ಶಾಲೆಯಿಂದ ಸಾವಿರಾರು ಮಕ್ಕಳು ದೂರಸರಿಯುವ ಅಪಾಯ ತಲೆದೋರಿದೆ. ಮರಳಿ ಶಾಲೆಗೆ ಬನ್ನಿ ಎಂದು ಈವರೆಗೆ ಗಂಟೆ ಬಾರಿಸಿದ್ದು ವಿಫಲವಾಗಿದೆ. ಅನೇಕ ವಿದ್ಯಾರ್ಥಿನಿಯರಿಗೆ ಈಗಾಗಲೇ ಬಾಲ್ಯ ವಿವಾಹ ಅಥವಾ ಸಣ್ಣ ಪ್ರಾಯದಲ್ಲಿಯೇ ವಿವಾಹ ಮಾಡಿಸಿದ ಉದಾಹರಣೆಗಳಿದೆ.

ಇನ್ನೇನು ಭಾರತದಾದ್ಯಂತ ದೇಶದ ಶಿಕ್ಷಣ ವ್ಯವಸ್ಥೆಗೇ ಹೊಸ ಆಯಾಮ, ನವ ಭರವಸೆ ನೀಡುವ ನಿರೀಕ್ಷೆ ಮೂಡಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುವ ಸಂದರ್ಭವೇ ಕೊರೊನಾ ಎಂಬ ವೈರಾಣು ಎರಡನೇ ಅಲೆ ರೂಪದಲ್ಲಿ ತಲ್ಲಣ ಉಂಟು ಮಾಡಿದೆ.

ಶೈಕ್ಷಣಿಕ ವ್ಯವಸ್ಥೆಗೇ ದೇಶದಲ್ಲಿ ಶಿಕ್ಷಣ ಮುಂದೆ ಹೇಗೆ ಎಂಬುದು ಪ್ರಶ್ನೆಯಾಗಿರುವಾಗ, ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವೇ ದೊಡ್ಡದೊಂದು ಅಗ್ನಿಪರೀಕ್ಷೆಯಾಗಿರುವ ಈ ಸಂದರ್ಭ ಶಿಕ್ಷಣ ಮತ್ತು ವಿದ್ಯಾರ್ಥಿಗಳ ಮನಸ್ಥಿತಿ ಬಗ್ಗೆ ಕೊಡಗಿನ ಹಲವು ಶಿಕ್ಷಕರು ಈ ವಿಚಾರದಲ್ಲಿ ಚರ್ಚಿಸಿದ್ದಾರೆ.

(ಸಶೇಷ)