ಮಡಿಕೇರಿ,ಮೇ 14: ದೇಶದೆಲ್ಲೆಡೆ ಕೋವಿಡ್ ಸೋಂಕು ಪ್ರಕರಣ ವ್ಯಾಪಕವಾಗಿ ಹರಡುತ್ತಿದ್ದು, ಕೊಡಗು ಜಿಲ್ಲೆಯಲ್ಲಿಯೂ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದೆ. ಇದೀಗ ಕೊಡಗಿನಲ್ಲಿ ಕಾಫಿ ತೋಟಗಳಲ್ಲಿ ಕೆಲಸದ ಸಮಯವಾಗಿರುವದರಿಂದ ಕಾರ್ಮಿಕರ ಅವಶ್ಯಕತೆಯಿರುತ್ತದೆ. ಹಾಗಾಗಿ ಹೊರ ಜಿಲ್ಲೆ, ಹಾಗೂ ರಾಜ್ಯಗಳಿಂದ ಕಾರ್ಮಿಕರನ್ನು ಕರೆಸಿಕೊಳ್ಳದಂತೆ ಶಾಸಕ ಕೆ.ಜಿ.ಬೋಪಯ್ಯ ಬೆಳೆಗಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹತೋಟಿಗೆ ತರಲು ಹೊರಜಿಲ್ಲೆ, ರಾಜ್ಯಗಳಿಂದ ಬರುವವರನ್ನು ತಡೆಯುವದು ಅನಿವಾರ್ಯವಾಗಿದೆ. ಸದ್ಯಕ್ಕೆ ಹೊರಗಿನಿಂದ ಕಾರ್ಮಿಕರನ್ನು ಕರೆತರದೆ ಕೋವಿಡ್ ಸೋಂಕು ಹತೋಟಿಗೆ ತರಲು ಸಹಕರಿಸುವಂತೆ ಜಿಲ್ಲೆಯ ಎಲ್ಲ ತೋಟ ಮಾಲೀಕರು, ಬೆಳೆಗಾರರಲ್ಲಿ ಶಾಸಕರು ಮನವಿ ಮಾಡಿಕೊಂಡಿದ್ದಾರೆ.