ಬಹಳ ಹಳೆಯದಾದ ಈ ವಸತಿಗೃಹದಲ್ಲಿ ಬಹಳಷ್ಟುಮಂದಿ ಹಿರಿಯ ಅಧಿಕಾರಿಗಳು ವಾಸ ಮಾಡಿದ್ದಾರೆ. ಈ ಪೈಕಿ ಜಿಲ್ಲೆಯಲ್ಲಿ ಕಾರ್ಯನಿರ್ವಾಹಕ ಅಭಿಯಂತರರಾಗಿದ್ದ, ತಲಕಾವೇರಿ ಭಾಗಮಂಡಲ ಕ್ಷೇತ್ರ ಜೀರ್ಣೋದ್ಧಾರ ಕಾರ್ಯ ಸಂದರ್ಭ ತಾಂತ್ರಿಕ ಸಲಹೆಗಾರರಾಗಿದ್ದ ಟಿ.ಡಿ. ಮನಮೋಹನ್ ಅವರೂ ಕೂಡ ಒಬ್ಬರು. ಹಿರಿಯ ಅಧಿಕಾರಿಗಳೊಂದಿಗೆ ಮನಮೋಹನ್ ಅವರೂ ಕೂಡ ಈ ವಸತಿ ಗೃಹವನ್ನು ಹಾಳುಗೆಡಹದೆ, ಕೆಡವಿ ಹಾಕದೆ ಹಾಗೆಯೇ ಸ್ಮಾರಕವಾಗಿ ಉಳಿಸಿಕೊಳ್ಳಬೇಕೆಂದು ಒತ್ತಡ ಹೇರಿದ ಹಿನ್ನೆಲೆ ಸರಕಾರವೇ ಈ ನಿರ್ಧಾರಕ್ಕೆ ಬಂದಿದೆ. ಈ ಸಂಬಂಧ ಹಿರಿಯ ನಿವೃತ್ತ ಅಧಿಕಾರಿಗಳನ್ನೊಳಗೊಂಡ ತಾಂತ್ರಿಕ ಸಲಹಾ ಸಮಿತಿಯೊಂದನ್ನು ರಚಿಸಲಾಗಿದೆ. ನಿವೃತ್ತ ಮುಖ್ಯ ಅಭಿಯಂತರ ಜಯಪ್ರಸಾದ್ ನೇತೃತ್ವದ ಸಮಿತಿಯ ಮಾರ್ಗದರ್ಶನದಂತೆ ಈ ಸ್ಮಾರಕದ ಕಾಮಗಾರಿ ಹಾಗೂ ನಿರ್ವಹಣೆ ನಡೆಯಲಿದೆ.

ಈ ಹಿಂದೆ ವಸತಿ ಗೃಹವಾಗಿತ್ತಾದರೂ ಇದೀಗ ಕಟ್ಟಡವನ್ನು ಗೃಹ ಅಥವಾ ಕಚೇರಿ ಕೆಲಸಕ್ಕೆ ಬಳಸಿಕೊಳ್ಳದೆ ಇಲಾಖೆಗೆ ಸಂಬಂಧಿಸಿದ ಮಾಹಿತಿಯನ್ನೊಳಗೊಂಡು ಸ್ಮಾರಕವನ್ನಾಗಿ ಉಳಿಸಿಕೊಳ್ಳಬೇಕೆಂಬ ಒತ್ತಡ ಬಂದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.