ವೀರಾಜಪೇಟೆ: ಸರಕಾರದ ಮಾರ್ಗಸೂಚಿಯಂತೆ ವೀರಾಜಪೇಟೆಯಲ್ಲಿ ಇಂದು ಬೆಳಿಗ್ಗೆ 6 ರಿಂದ 10 ರವರೆಗೆ ಅಗತ್ಯವಸ್ತುಗಳನ್ನು ಖರೀದಿ ಮಾಡಲು ಅವಕಾಶ ಮಾಡಿಕೊಡಲಾಗಿತ್ತಾದರೂ ಗ್ರಾಹಕರು ವಿರಳವಾಗಿದ್ದರು.

ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಇಲ್ಲಿನ ಕಾರು ನಿಲ್ದಾಣ, ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿ ತರಕಾರಿ ಅಂಗಡಿ ತೆರೆಯಲಾಗಿತ್ತು. ಆದರೆ ಖರೀದಿಗೆ ಗ್ರಾಹಕರ ಕೊರತೆ ಎದ್ದು ಕಾಣುತ್ತಿತ್ತು. ಔಷಧಿ ಅಂಗಡಿಗಳನ್ನು ಹೊರತುಪಡಿಸಿ, ದಿನಸಿ ಸೇರಿದಂತೆ ಬಹುತೇಕ ಅಂಗಡಿಗಳಲ್ಲಿ ಜನದಟ್ಟಣೆ ಕಂಡು ಬರಲಿಲ್ಲ. ಆದರೆ ಕೆಲವು ಬ್ಯಾಂಕ್ ಹಾಗೂ ಎ.ಟಿ.ಎಂಗಳ ಮುಂಭಾಗದಲ್ಲಿ ಗ್ರಾಹಕರು ಸರತಿಸಾಲಿನಲ್ಲಿ ನಿಂತು ಕಾಯುತ್ತಿರುವುದು ಕಂಡುಬಂತು.

ವಾಹನದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಪೊಲೀಸರು ಇಂದು ಖಾಸಗಿ ವಾಹನಗಳು ಪಟ್ಟಣ ಪ್ರವೇಶಿಸುವುದಕ್ಕೆ ತಡೆಯೊಡ್ಡಿದರು. ಇದರಿಂದ ಪಟ್ಟಣದ ಮುಖ್ಯರಸ್ತೆಯಲ್ಲಿ ಖಾಸಗಿ ವಾಹನಗಳ ಸಂಚಾರವಿರಲಿಲ್ಲ.

ಆಟೋ ಚಾಲಕರಿಂದ ಮನವಿ: ಅಗತ್ಯ ವಸ್ತುಗಳ ಸಾಗಾಣಿಕೆಯ ಸಂದರ್ಭ ಸಾರ್ವಜನಿಕರಿಗೆ ಉಂಟಾಗುವ ಅನಾನುಕೂಲವನ್ನು ತಪ್ಪಿಸುವ ಸಲುವಾಗಿ ನಿರ್ಬಂಧ ಸಡಿಲಿಕೆಯ ಅವಧಿಯಲ್ಲಿ ಆಟೋ ರಿಕ್ಷಾಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಆಟೋ ಚಾಲಕರು ಡಿ.ವೈ.ಎಸ್ಪಿ ಜಯಕುಮಾರ್ ಅವರನ್ನು ಮನವಿ ಮಾಡಿಕೊಂಡರು.

ಇದೇ ಸಂದರ್ಭದಲ್ಲಿ ಡಿ.ವೈ.ಎಸ್ಪಿ ಜಯಕುಮಾರ್ ಅವರು ಮಾತನಾಡಿ, ಕೊರೊನಾ ಸೋಂಕು ಹರಡುವ ಭೀತಿಯ ಹಿನ್ನೆಲೆಯಲ್ಲಿ ಆಟೋ ರಿಕ್ಷಾಗಳ ಸಂಚಾರವನ್ನು ಸರಕಾರ ನಿರ್ಬಂಧಿಸಿದೆ. ಸರಕಾರದ ಆದೇಶವನ್ನು ಪಾಲಿಸುವುದು ನಮ್ಮ ಕರ್ತವ್ಯವಾಗಿದ್ದು, ಆದೇಶ ಮೀರಿ ಸಂಚಾರಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ. ಸೋಂಕನ್ನು ನಿಯಂತ್ರಿಸುವ ಸಲುವಾಗಿ ಕೆಲ ದಿನಗಳವರೆಗೆ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿಕೊಂಡರು.

ಈ ಸಂದರ್ಭ ಆಟೋ ಚಾಲಕರ ಸಂಘದ ಶಶಿಧರನ್, ಸಂಘಟನೆಯ ಪದಾಧಿಕಾರಿಗಳು ಮತ್ತಿತರರು ಇದ್ದರು.

ಬೆಳಗ್ಗಿನಿಂದಲೇ ಮುಖ್ಯರಸ್ತೆಯಲ್ಲಿ ರಂಜಾನ್ ಹಬ್ಬದ ಸಾಮಗ್ರಿ ಖರೀದಿಗಾಗಿ ಅಡ್ಡಾದಿಡ್ಡಿ ಸಂಚರಿಸುತ್ತಿದ್ದ ಸುಮಾರು 12 ಆಟೋ ರಿಕ್ಷಾಗಳನ್ನು ನಗರ ಪೊಲೀಸರು ವಶಪಡಿಸಿಕೊಂಡು ನಂತರ ಎಲ್ಲಾ ಚಾಲಕರಿಗೆ, ಸಂಘದ ಸಂಘಟಕರಿಗೆ ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಿದರು.

ಸೋಮವಾರಪೇಟೆ: ಕೊರೊನಾ ಹಿನ್ನೆಲೆ ಜನದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಜಿಲ್ಲಾಡಳಿತ ನೂತನವಾಗಿ ಜಾರಿಗೆ ತಂದಿರುವ ಮಾರ್ಗಸೂಚಿಗೆ ಸೋಮವಾರಪೇಟೆಯ ಜನತೆ ಹೊಂದಿಕೊಳ್ಳುತ್ತಿದ್ದಾರೆ.

ಸಂತೆ ದಿನವಾದ ಸೋಮವಾರದಂದು ಪಟ್ಟಣದಲ್ಲಿ ಹೆಚ್ಚಿನ ಜನದಟ್ಟಣೆ ಉಂಟಾಗಿತ್ತು. ಸಾಮಾಜಿಕ ಅಂತರ ಮಾಯವಾಗಿ ಅಂಗಡಿಗಳ ಎದುರು ಮುಗಿಬಿದ್ದು ಸಾಮಗ್ರಿಗಳನ್ನು ಖರೀದಿಸುತ್ತಿದ್ದರು. ಇಂದು ಬೆಳಗ್ಗಿನಿಂದ 10 ಗಂಟೆವರೆಗೆ ಎಂದಿನಂತೆ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದರೂ ಪಟ್ಟಣಕ್ಕೆ ಜನ ಆಗಮಿಸಲಿಲ್ಲ. ಕಳೆದ ಸೋಮವಾರವಷ್ಟೇ ಅಗತ್ಯ ಸಾಮಗ್ರಿಗಳನ್ನು ಖರೀದಿಸಿದ್ದರಿಂದ ಇಂದು ಜನಸಂಖ್ಯೆ ವಿರಳವಾಗಿತ್ತು. ಇಲ್ಲಿನ ಆಲೇಕಟ್ಟೆ ರಸ್ತೆಯಲ್ಲಿರುವ ಆರ್‍ಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ತರಕಾರಿ ಖರೀದಿಗೆ ಅಷ್ಟಾಗಿ ಜನ ಬರಲಿಲ್ಲ.

10 ಗಂಟೆಯಾಗುತ್ತಲೇ ಪೊಲೀಸ್ ಠಾಣಾಧಿಕಾರಿ ಶ್ರೀಧರ್ ಹಾಗೂ ಸಿಬ್ಬಂದಿಗಳು ಆಗಮಿಸಿದರು. ವರ್ತಕರು ಸ್ವಯಂಪ್ರೇರಣೆಯಿಂದ 9.50ಕ್ಕೆಲ್ಲಾ ಅಂಗಡಿಗಳನ್ನು ಬಂದ್ ಮಾಡಿ ಮನೆಗೆ ತೆರಳಿದರು.

ಪಟ್ಟಣದ ಅಂಗಡಿಗಳೂ ಸಹ 10 ಗಂಟೆಯ ವೇಳೆಗೆ ಬಂದ್ ಆದವು. ಆದರೆ ಮೆಡಿಕಲ್ ಮತ್ತು ಖಾಸಗಿ ಕ್ಲಿನಿಕ್‍ಗಳಲ್ಲಿ ಎಂದಿನಂತೆ ರೋಗಿಗಳು ಹಾಗೂ ಸಂಬಂಧಿಕರ ಸಾಲು ಕಂಡುಬಂದವು. ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇರುವುದು ಕ್ಲಿನಿಕ್‍ಗಳ ಎದುರಿನ ಸಾಲಿನಿಂದ ಸ್ಪಷ್ಟವಾಗುತಿತ್ತು.