ಗೋಣಿಕೊಪ್ಪಲು: ವಾಣಿಜ್ಯ ನಗರ ಗೋಣಿಕೊಪ್ಪಲುವಿನಲ್ಲಿ ಬುಧವಾರ ಜನರು ಹೆಚ್ಚಾಗಿ ರಸ್ತೆಗೆ ಇಳಿಯುವ ಪ್ರಯತ್ನ ಮಾಡಲಿಲ್ಲ. ಬೆಳಿಗ್ಗೆ 6 ಗಂಟೆಯಿಂದಲೇ ಆಯಕಟ್ಟಿನ ಜಾಗದಲ್ಲಿ ಪೆÇೀಲಿಸರು ಕಟ್ಟೆಚ್ಚರ ವಹಿಸಿದ್ದು, ಬ್ಯಾರಿಕೇಡ್ ಇಟ್ಟು ಜನರು ನಗರ ಪ್ರದೇಶಕ್ಕೆ ವಾಹನದಲ್ಲಿ ಬರುವುದನ್ನು ನಿಯಂತ್ರಣ ಮಾಡಿದರು. ಇದರಿಂದಾಗಿ ಬಹುತೇಕ ಜನರು ನಗರಕ್ಕೆ ಬರಲು ಹಿಂದೇಟು ಹಾಕಿದರು.

ಎಂದಿನಂತೆ ಉದ್ದುದ್ದ ಸಾಲುಗಳಲ್ಲಿ ನಿಂತು ಅಂಗಡಿ ಮಳಿಗೆಗಳಿಂದ ಸಾಮಗ್ರಿಗಳನ್ನು ಖರೀದಿಸುತ್ತಿದ್ದ ಜನರು ಪೆÇೀಲಿಸರ ಭಯದಿಂದ ಹೆಚ್ಚಾಗಿ ಆಗಮಿಸಲಿಲ್ಲ. ಇದರಿಂದಾಗಿ ಅಗತ್ಯ ಸಾಮಗ್ರಿಗಳನ್ನು ಪಡೆಯಲು ಎಲ್ಲಿಯೂ ಸರತಿ ಸಾಲು ಕಂಡುಬರಲಿಲ್ಲ.

ಪಡಿತರ ಸಾಮಗ್ರಿಗಳನ್ನು ಪಡೆಯಲು ನ್ಯಾಯಬೆಲೆ ಅಂಗಡಿಯ ಮುಂದೆ ಮಾತ್ರ ಸರತಿ ಸಾಲು ಬೆಳಿಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಒಂದೇ ಸಮನಾಗಿತ್ತು.

ತರಕಾರಿ ವ್ಯಾಪಾರಕ್ಕೆ ಬೈಪಾಸ್ ರಸ್ತೆ, ಶಾಲಾ ಮೈದಾನದಲ್ಲಿ ಹೆಚ್ಚುವರಿ ಸ್ಥಳಾವಕಾಶ ನೀಡಿದರಾದರೂ ಅಷ್ಟಾಗಿ ಜನರು ತೆರಳಲಿಲ್ಲ. ಇದರಿಂದಾಗಿ ವ್ಯಾಪಾರವಿಲ್ಲದೆ ವ್ಯಾಪಾರಸ್ಥರು ನಷ್ಟ ಅನುಭವಿಸಿದರು. ಬಿಸಿಲಿನಿಂದ ತರಕಾರಿ, ಸೊಪ್ಪುಗಳು ಬಾಡಿ ಮಾರಾಟಕ್ಕೆ ಯೋಗ್ಯವಿಲ್ಲದಂತಾಯಿತು.

ನಾಗರಿಕರು ನಡೆದುಕೊಂಡೇ ಹೋಗಬೇಕಾದ ಅನಿವಾರ್ಯತೆಯಿಂದಾಗಿ ಅಷ್ಟಾಗಿ ಜನರು ನಗರಕ್ಕೆ ಬರುವ ಪ್ರಯತ್ನ ಮಾಡಲಿಲ್ಲ. ನಗರದ ಜನರು ಹೊರತುಪಡಿಸಿ ಬೇರೆ ಯಾವುದೇ ಪ್ರದೇಶದಿಂದ ಜನರು ಆಗಮಿಸಲಿಲ್ಲ. ಎಲ್ಲಾ ಪ್ರಮುಖ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನಗಳು ನಗರಕ್ಕೆ ತೆರಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು.

ಸೂಪರ್ ಮಾರ್ಕೆಟ್‍ಗಳು ಖಾಲಿ ಖಾಲಿಯಾಗಿದ್ದವು. ಪಟ್ಟಣದಲ್ಲಿ ವಾಹನ ಓಡಾಟಕ್ಕೆ ಸಂಪೂರ್ಣ ಕಡಿವಾಣ ಹಾಕಲಾಗಿತ್ತು.