ಯಶಸ್ಸಿನೊಂದಿಗೆ ಕೆಲವೆಡೆ ಅಸಮಾಧಾನ
ಮಡಿಕೇರಿ, ಮೇ 10: ಕೊರೊನಾ ಲಾಕ್ಡೌನ್ ನಡುವೆ ಅಗತ್ಯ ಸಾಮಗ್ರಿ ಖರೀದಿಸಲು ನೀಡಲಾಗಿರುವ ಅವಧಿಯಲ್ಲಿ ಎರಡು ದಿನಗಳ ಹಿಂದೆ ಜಿಲ್ಲೆಯಲ್ಲಿ ಕಂಡುಬಂದ ಜನಜಾತ್ರೆಯ ಅವಾಂತರವನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಇಂದು ಜಿಲ್ಲೆಯ ಕೆಲವೆಡೆ ಪಟ್ಟಣಗಳಿಗೆ ವಾಹನಗಳ ಆಗಮನವನ್ನು ನಿರ್ಬಂಧಿಸಿ; ಕಾಲ್ನಡಿಗೆಯ ಮೂಲಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿ ಜಿಲ್ಲಾಡಳಿತ ಪೊಲೀಸ್ ಇಲಾಖೆ ಮುಖಾಂತರ ಅನುಸರಿಸಿದ ವಿಧಾನ ಒಂದೆಡೆ ಯಶಸ್ವಿಯಾಗಿದ್ದು, ಮತ್ತೊಂದೆಡೆ ಅಸಮಾಧಾನ ವ್ಯಕ್ತಗೊಂಡಿದೆ. ಜಿಲ್ಲಾ ಕೇಂದ್ರ ಮಡಿಕೇರಿ, ಗೋಣಿಕೊಪ್ಪ, ಸಿದ್ದಾಪುರ, ಪೊನ್ನಂಪೇಟೆ, ವೀರಾಜಪೇಟೆಗಳಲ್ಲಿ ಇಂದು ಬೆಳಿಗ್ಗೆ 6ರಿಂದ ಮಧ್ಯಾಹ್ನ 12 ಗಂಟೆಯವರೆಗೂ ಪಟ್ಟಣದೊಳಕ್ಕೆ ಯಾವುದೇ ವಾಹನಗಳ ಪ್ರವೇಶಕ್ಕೆ ಅವಕಾಶವಿರಲಿಲ್ಲ. ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಆಗಮಿಸುವವರು ತಮ್ಮ ವಾಹನಗಳನ್ನು ಪೊಲೀಸ್ ಇಲಾಖೆ ನಿಗದಿಪಡಿಸಿದ್ದ ಸ್ಥಳಗಳಲ್ಲಿ ನಿಲ್ಲಿಸಿ ಕಾಲ್ನಡಿಗೆಯ ಮೂಲಕವೇ ಅಂಗಡಿ ಮಳಿಗೆಗಳಿಗೆ ತೆರಳಿ ಸಾಮಗ್ರಿಗಳನ್ನು ಖರೀದಿಸಬೇಕಾಯಿತು. ಇದರಿಂದಾಗಿ ಪಟ್ಟಣ ವ್ಯಾಪ್ತಿಯಲ್ಲಿ ಕಿಕ್ಕಿರಿದ ವಾತಾವರಣ ಕಂಡುಬರಲಿಲ್ಲ.
ಜಿಲ್ಲಾಡಳಿತದ ಈ ಕ್ರಮದಿಂದಾಗಿ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದಂತೆ ಜನತೆ ವರ್ತಿಸುವುದಕ್ಕೆ ಕಡಿವಾಣ ಬೀಳುವುದರೊಂದಿಗೆ ಈ ವಿಧಾನ ಯಶಸ್ವಿಯಾಯಿತಾದರೂ, ವಯೋವೃದ್ಧರು ಸೇರಿದಂತೆ, ಜನತೆ, ಸಣ್ಣ ವ್ಯಾಪಾರಿಗಳು ತಮಗೆ ಬೇಕಾದ ಸಾಮಗ್ರಿಗಳನ್ನು ಕಿಲೋಮೀಟರ್ಗಟ್ಟಲೆ ಹೊತ್ತು ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾದ ಬಗ್ಗೆ ಕೆಲವೆಡೆ ಅಸಮಾಧಾನವೂ ವ್ಯಕ್ತವಾಯಿತು. ಆದರೆ ಸೋಮವಾರಪೇಟೆಯಲ್ಲಿ ಮಾತ್ರ ಎಂದಿನಂತೆ ಜನಜಂಗುಳಿ ಕಂಡುಬಂದು, ನಿಯಮಗಳು ಉಲ್ಲಂಘಿಸಲ್ಪಟ್ಟವು.
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿಯೂ ಬೆಳಗ್ಗಿನಿಂದಲೇ ಮಡಿಕೇರಿ ನಗರದೊಳಕ್ಕೆ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿತ್ತು. ಅಧಿಕೃತ ಗುರುತಿನ ಚೀಟಿ ಹೊಂದಿದ ನೌಕರರು ಹಾಗೂ ಇಲಾಖೆಗಳ ವಾಹನಗಳನ್ನು ಹೊರತುಪಡಿಸಿ ಬೇರೆಲ್ಲಾ ವಾಹನಗಳನ್ನು ಪೊಲೀಸ್ ಇಲಾಖೆ ತಡೆಯುವುದರೊಂದಿಗೆ ‘ಪಾರ್ಕಿಂಗ್’ಗಾಗಿ ಗುರುತಿಸಲಾಗಿದ್ದ ಸ್ಥಳಗಳತ್ತ ಕಳುಹಿಸಿತು. ಇದರಿಂದಾಗಿ ನಗರ ವ್ಯಾಪ್ತಿಯಲ್ಲಿ ಅನಗತ್ಯ ವಾಹನಗಳ ಸಂಚಾರ ಇರಲಿಲ್ಲ. ವಾಹನಗಳ ಸಂಚಾರಕ್ಕೆ ನಗರ ವ್ಯಾಪ್ತಿಯಲ್ಲಿ ಅವಕಾಶ ಇಲ್ಲದ್ದರಿಂದ ವ್ಯಾಪಾರ ವಹಿವಾಟಿಗೆ ಆಗಮಿಸಿದ್ದ ಜನರ ಸಂಖ್ಯೆಯೂ ವಿರಳವಾಗಿತ್ತಲ್ಲದೆ, ವ್ಯಾಪಾರ ವಹಿವಾಟು ಕೂಡ ಕಳೆಗುಂದಿತ್ತು. ಪ್ರತಿಬಾರಿ ಜನ ಕಿಕ್ಕಿರಿದು ತುಂಬಿರುತ್ತಿದ್ದ ಸ್ಥಳಗಳಲ್ಲಿ ಇಂದು ಬೆರಳೆಣಿಕೆಯ ಮಂದಿ ಕಂಡುಬಂದರು. ಗ್ರಾಹಕರಿಗಿಂತ ಹೆಚ್ಚಾಗಿ ವ್ಯಾಪಾರಿಗಳ ಸಂಖ್ಯೆಯೇ ಅಧಿಕವಾಗಿತ್ತು. ಖರೀದಿಸಿದ ಸಾಮಗ್ರಿಗಳನ್ನು ವಾಹನಗಳಿಲ್ಲದ ಕಾರಣ ಜನತೆ ಹೊತ್ತೊಯ್ಯುತ್ತಿದ್ದುದು ಕಂಡುಬಂತು. ಪಟ್ಟಣದಿಂದ ಹೊರಭಾಗದ ಪ್ರದೇಶಗಳಲ್ಲಿ ಅಂಗಡಿಗಳನ್ನು ನಡೆಸುತ್ತಿರುವ ಮಂದಿ ತಮಗೆ ಮಾರಾಟಕ್ಕೆ ಅಗತ್ಯವಾದ ಸಾಮಗ್ರಿಗಳನ್ನು ಖರೀದಿಸಿ ಚೀಲಗಳಲ್ಲಿ ತುಂಬಿಕೊಂಡು ಸಾಗಿದರು. ಮಡಿಕೇರಿ ನಗರ ವ್ಯಾಪ್ತಿಯ ಬಹುತೇಕ ಮುಖ್ಯರಸ್ತೆಗಳಲ್ಲಿ ಬ್ಯಾರಿಕೇಡ್ಗಳನ್ನು ಇಟ್ಟು ಅನಗತ್ಯ ವಾಹನಗಳ ಆಗಮನಕ್ಕೆ ತಡೆಯೊಡ್ಡಲಾಗಿತ್ತು. ಪೊಲೀಸರು ಕೂಡ ಎಂದಿನಂತೆ ಕೊರೊನಾ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಶಾಂತರೀತಿಯಲ್ಲಿ ನಾಗರಿಕರೊಂದಿಗೆ ಜಿಲ್ಲಾಡಳಿತದ ಆದೇಶ ಪಾಲನೆ ಮಾಡಲು ಮಾರ್ಗದರ್ಶನ ನೀಡುತ್ತಿದ್ದುದು ಕಂಡುಬಂತು. ಮಧ್ಯಾಹ್ನ 12 ಗಂಟೆಯಾಗುತ್ತಿದ್ದಂತೆ ಎಲ್ಲವೂ ಬಂದ್ ಆಯಿತು.