ಶನಿವಾರಸಂತೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಅಧಿಕ ಸಂಖ್ಯೆಯ ಜನರು ಬೆಳಕು ಹರಿವ ಮುನ್ನವೇ ಅಗತ್ಯ ವಸ್ತುಗಳ ಖರೀದಿಗೆ ನಿಯಮ ಉಲ್ಲಂಘಿಸಿ ವಾಹನಗಳಲ್ಲಿ ಧಾವಿಸಿ ಬಂದಿದ್ದರು.
ದಿನಸಿ, ತರಕಾರಿ, ಹಸಿಮೀನು, ಕೋಳಿ-ಕುರಿ ಮಾಂಸ, ಇತ್ಯಾದಿ ಎಲ್ಲಾ ಸಾಮಗ್ರಿಗಳನ್ನು ಖರೀದಿಸಲು ವಾಹನಗಳಲ್ಲಿ ಬಂದ ಜನ ಲಾಕ್ಡೌನ್ ವಿಚಾರ ಮರೆತು, ಅಂತರ ಕಾಯ್ದುಕೊಳ್ಳದೆ ವ್ಯಾಪಾರದಲ್ಲಿ ಮಗ್ನರಾಗಿದ್ದರು.
ಪೊಲೀಸ್ ಜೀಪ್ನಲ್ಲಿ ಪಿಎಸ್ಐ ಎಚ್.ಈ. ದೇವರಾಜ್ ಹಾಗೂ ಸಿಬ್ಬಂದಿ ಧ್ವನಿವರ್ಧಕ ಮೂಲಕ ಎಚ್ಚರಿಸುತ್ತಾ ಬಂದರೂ ಕಾರು, ಜೀಪು, ಬೈಕ್, ಸ್ಕೂಟರ್ಗಳಲ್ಲಿ ಭಯವಿಲ್ಲದೆ ಸಂಚರಿಸುತ್ತಿದ್ದ ಸಾರ್ವಜನಿಕರನ್ನು ಲಾಠಿ ಬೀಸಿ ಹಿಂದಕ್ಕಟ್ಟಿದರು. ಆದರೂ ಪೊಲೀಸರ ಕಣ್ಣುತಪ್ಪಿಸಿ ವಾಹನ ಚಾಲಕರು ಮುಖ್ಯರಸ್ತೆ, ಬೈಪಾಸ್ ರಸ್ತೆ, ಹಾಗೂ ಕಾವೇರಿ ರಸ್ತೆಯಲ್ಲಿ ಅನಗತ್ಯವಾಗಿ ಸಂಚರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಗುಡುಗಳಲೆ ಜಂಕ್ಷನ್, ಕೆ.ಆರ್.ಸಿ. ವೃತ್ತದಲ್ಲಿ ಅನಗತ್ಯವಾಗಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು.
ನಿಯಮ ಅರಿತ ಕೆಲ ಸಾರ್ವಜನಿಕರು ಮಾತ್ರ ಕಾಲ್ನಡಿಗೆಯಲ್ಲೇ ಬಂದು ಅಗತ್ಯ ವಸ್ತುಗಳನ್ನು ಖರೀದಿಸಿ ಮನೆಯತ್ತ ಹೆಜ್ಜೆ ಹಾಕಿದರು. 12 ಗಂಟೆ ನಂತರ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟು, ವಾಹನಗಳ ಓಡಾಟ ಸ್ಥಗಿತಗೊಂಡಿತು.