24 ಗಂಟೆಯೂ ಚೆಕ್‍ಪೋಸ್ಟ್‍ನಲ್ಲಿ ಪೊಲೀಸರು

ಸೋಮವಾರಪೇಟೆ,ಮೇ 9: ಕೊಡಗು ಸೇರಿದಂತೆ ಹೊರಭಾಗದಲ್ಲೂ ಕೊರೊನಾ ಅಲೆ ಜೋರಾಗಿ ಹಬ್ಬುತ್ತಿರುವ ಹಿನ್ನೆಲೆ ಜಿಲ್ಲೆಗೆ ಹೊರಭಾಗದಿಂದ ಆಗಮಿಸುತ್ತಿರುವ ಮಂದಿಯ ಮೇಲೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ.

ಗಡಿಗಳಲ್ಲಿ ಚೆಕ್‍ಪೋಸ್ಟ್‍ಗಳನ್ನು ತೆರೆದು ದಿನದ 24 ಗಂಟೆಯೂ ಕಣ್ಗಾವಲಿಟ್ಟಿದ್ದು, ಹೊರಭಾಗದಿಂದ ಜಿಲ್ಲೆಗೆ ಆಗಮಿಸುವ ಮಂದಿಗೆ ಹೋಂ ಕ್ವಾರಂಟೈನ್ ಸೀಲ್ ಹಾಕಿ 14 ದಿನಗಳ ಕಾಲ ಮನೆಯಿಂದ ಹೊರಬರದಂತೆ ಎಚ್ಚರಿಕೆ ನೀಡಲಾಗುತ್ತಿದೆ.

ಉತ್ತರ ಕೊಡಗಿನ ಗಡಿಭಾಗವಾದ ಕೊಡ್ಲಿಪೇಟೆಯ ಶಾಂತಪುರ ಸರಕಾರಿ ಪ್ರಾಥಮಿಕ ಶಾಲೆಯ ಮುಂಭಾಗ ರಾಜ್ಯ ಹೆದ್ದಾರಿಯಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ. ದಿನದ 24 ಗಂಟೆಯೂ ಮೂರು ಪಾಳಿಗಳಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಹೊರ ಜಿಲ್ಲೆಗಳಿಂದ ಕೊಡಗಿಗೆ ಬರುವವರ ದಾಖಲಾತಿಗಳನ್ನು ಪರಿಶೀಲನೆ ನಡೆಸಿ, ಜಿಲ್ಲೆಗೆ ಭೇಟಿ ನೀಡುತ್ತಿರುವ ಉದ್ದೇಶ ಮತ್ತು ಅವರು ತಂಗುವ ಸ್ಥಳದ ಮಾಹಿತಿ, ಮೊಬ್ಯೆಲ್ ಸಂಖ್ಯೆ ಪಡೆದು ಕೈಗೆ ಸೀಲ್ ಹಾಕಿದ ಬಳಿಕವೇ ಜಿಲ್ಲೆಗೆ ಪ್ರವೇಶ ನೀಡಲಾಗುತ್ತಿದೆ.

ಶಾಂತಪುರದ ಚೆಕ್‍ಪೋಸ್ಟ್‍ನಲ್ಲಿ ಕೊಡ್ಲಿಪೇಟೆ ಉಪ ಠಾಣೆಯ ಎ.ಎಸ್.ಐ ಕೃಷ್ಣೇಗೌಡ, ಮುಖ್ಯ ಪೇದೆ ಡಿಂಪಲ್, ಸಿಬ್ಬಂದಿ ಪರಮೇಶ್, ಗೃಹ ರಕ್ಷಕದಳದ ಸಿದ್ದಲಿಂಗು, ಶಿಕ್ಷಕರಾದ ಅಬ್ದುಲ್ ರಬ್ಬ್, ರಂಗಸ್ವಾಮಿ, ರಾಘವೇಂದ್ರ, ಸೋಮಶೇಖರಪ್ಪ, ಬ್ಯಾಡಗೊಟ್ಟ ಗ್ರಾ.ಪಂ.ಕಾರ್ಯದರ್ಶಿ ದೇವರಾಜ್, ಕೊಡ್ಲಿಪೇಟೆ ಗ್ರಾ.ಪಂ ಸಿಬ್ಬಂದಿ ದೀಪು, ಆರೋಗ್ಯ ಇಲಾಖೆ ಮತ್ತು ಆಶಾ ಕಾರ್ಯಕರ್ತೆಯರಾದ ಕಲಾವತಿ, ಶಾಹಿದಾ, ಹೊನ್ನಮ್ಮ, ವಿಜಯಲಕ್ಷ್ಮೀ, ಪ್ರವೀಣ್, ಯಶೋದಾ, ತ್ರಿವೇಣಿ ಅವರುಗಳು ವಿವಿಧ ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಆಗಾಗ್ಗೆ ಮಳೆಯಾಗುತ್ತಿರುವ ಹಿನ್ನೆಲೆ ಕರ್ತವ್ಯ ನಿರ್ವಹಿಸಲು ಅನಾನುಕೂಲವಾಗುತ್ತಿರುವ ಬಗ್ಗೆ ಸಿಬ್ಬಂದಿಗಳು ತಾಲೂಕು ತಹಶಿಲ್ದಾರ್

ಗಮನ ಸೆಳೆದಿದ್ದರಿಂದ, ಕೊಡ್ಲಿಪೇಟೆ ಕಂದಾಯ ಪರಿವೀಕ್ಷಕ ಮನುಕುಮಾರ್ ಅವರು ಶಾಂತಪುರ ಚೆಕ್‍ಪೋಸ್ಟ್ ರಸ್ತೆ ಬದಿಯಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿಕೊಡಲು ಕ್ರಮಕೈಗೊಂಡಿದ್ದಾರೆ.

ಅಂತೆಯೇ ನೆರೆಯ ಹಾಸನದ ಅರಕಲಗೂಡು, ಮಲ್ಲಿಪಟ್ಟಣದಿಂದ ಬರುವ ಸಾರ್ವಜನಿಕರ ಪರಿಶೀಲನೆಗೆ ಬೆಸೂರು ಪಂಚಾಯತ್ ವ್ಯಾಪ್ತಿಯ ನಿಲುವಾಗಿಲುನಲ್ಲಿರುವ ಚೆಕ್‍ಪೋಸ್ಟ್‍ನಲ್ಲಿ ಅಧಿಕಾರಿಗಳು ಕರ್ತವ್ಯದಲ್ಲಿದ್ದಾರೆ.

ತಾಲೂಕು ವ್ಯಾಪ್ತಿಯಲ್ಲಿ ತೆರೆಯಲಾಗಿರುವ ಚೆಕ್‍ಪೋಸ್ಟ್‍ಗಳಿಗೆ ತಹಶೀಲ್ದಾರ್ ಗೊವಿಂದರಾಜು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೊರಭಾಗದಿಂದ ಜಿಲ್ಲೆಗೆ ಆಗಮಿಸಿರುವವರ ಕೈಗಳಿಗೆ ಮೊಹರು ಹಾಕಿರುವ ಬಗ್ಗೆ ಕೊರೊನಾ ಕರ್ತವ್ಯಕ್ಕೆ ನಿಯೋಜಿತರಾಗಿರುವ ನೋಡಲ್ ಅಧಿಕಾರಿಗಳು ಮೇಲ್ವಿಚಾರಣೆ ನಡೆಸಲಿದ್ದಾರೆ. ಆದೇಶ ಉಲ್ಲಂಘನೆ ಮಾಡಿದವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಹಿಪ್ಲಿಗೇಟ್ ಚೆಕ್‍ಪೋಸ್ಟ್‍ನಲ್ಲೂ ಕಟ್ಟುನಿಟ್ಟಿನ ಕ್ರಮ

ಶನಿವಾರಸಂತೆ: ಸಮೀಪದ ಕೊಡಗು - ಹಾಸನ ಗಡಿಭಾಗ ಹಿಪ್ಪಿಗೇಟ್ ಚೆಕ್‍ಪೋಸ್ಟ್‍ನಲ್ಲಿ ಕೋವಿಡ್ ಲಾಕ್‍ಡೌನ್ ನಿಯಮ ಉಲ್ಲಂಘಿಸಿ ಸಂಚರಿಸುವ ವಾಹನಗಳ ತಪಾಸಣೆಗೆ ಶನಿವಾರಸಂತೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

ಭಾನುವಾರ ಹಾಸನ ಜಿಲ್ಲೆಯಿಂದ ಕೊಡಗಿನ ಶನಿವಾರಸಂತೆ ಪ್ರವೇಶಿಸುವ ವಾಹನಗಳನ್ನು ತಡೆದು ಪರಿಶೀಲನೆ ಮಾಡಿದರು. ಗೇಟ್ ಬಳಿ ಬ್ಯಾರಿಕೇಟ್ ನಿರ್ಮಿಸಲಾಗಿದೆ. ಹಾಸನ ಜಿಲ್ಲೆಯಿಂದ ಕೊಡಗು ಜಿಲ್ಲೆಯನ್ನು ಪ್ರವೇಶಿಸುವ ನಿಲುವಾಗಿಲು, ಶಾಂತಪುರ, ಕೊಡ್ಲಿಪೇಟೆ ಚೆಕ್‍ಪೋಸ್ಟ್‍ಗಳಲ್ಲಿ ಮುಂಜಾಗ್ರತೆ ಕ್ರಮವಾಗಿ ಪೊಲೀಸರು ವ್ಯವಸ್ಥೆ ಕೈಗೊಂಡಿದ್ದಾರೆ. ಹೊರ ಜಿಲ್ಲೆಯಿಂದ ಆಗಮಿಸುತ್ತಿರುವವರ ಕೈಗೆ ಸೀಲ್ ಹಾಕಿ, ಹೋಂ ಕ್ವಾರಂಟೈನ್‍ನಲ್ಲಿರುವಂತೆ ಸೂಚಿಸಲಾಗುತ್ತಿದೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಇಲಾಖೆಯ ರಜನಿಕಾಂತ್, ವೆಂಕಟೇಶ್, ನಿಡ್ತ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಜಿ.ಪಿ. ಕುಶಾಲಪ್ಪ, ಶಿಕ್ಷಣ ಇಲಾಖೆಯ ಸಿ. ದೇವರಾಜ್, ಆರೋಗ್ಯ ಇಲಾಖೆಯ ವಾರಿಯರ್ಸ್‍ಗಳಾದ ಆರ್.ಪಿ. ಆರತಿ ಹಾಗೂ ಲಕ್ಷ್ಮೀದೇವಿ ಹಾಜರಿದ್ದರು.