ವೀರಾಜಪೇಟೆ, ಮೇ 9: ಅಕ್ರಮವಾಗಿ ಮರಳು ಸಾಗಾಟ ಮಾಡಲು ಯತ್ನಿಸಿದ ವಾಹನವನ್ನು ನಗರ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿತರು ತಲೆಮರೆಸಿಕೊಂಡಿದ್ದಾರೆ.

ಪೆರುಂಬಾಡಿ ಗ್ರಾಮದ ನಿವಾಸಿಗಳಾದ ಉಪೇಂದ್ರ ಮತ್ತು ಉಮೇಶ್ ಎಂಬವವರು ಪೆರುಂಬಾಡಿ ಗ್ರಾಮದ ಹೊಳೆಯಿಂದ ಮಹೇಂದ್ರ ಪಿಕ್‍ಅಪ್ (ಕೆಎ-12ಎ-6144) ವಾಹನಕ್ಕೆ ಮರಳು ತುಂಬಿಸಿ ಸಾಗಾಟಕ್ಕೆ ಯತ್ನಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿ ವಾಹನ ಹಾಗೂ ಮರಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ದಾಳಿ ವೇಳೆ ಸ್ಥಳದಲ್ಲಿದ್ದ ಆರೋಪಿಗಳಿಬ್ಬರು ವಾಹನ ಬಿಟ್ಟು ಪರಾರಿಯಾಗಿದ್ದಾರೆ. ಪೊಲೀಸರು ಅಂದಾಜು 5 ಸಾವಿರ ರೂ ಮೌಲ್ಯದ ಮರಳು ಸೇರಿದಂತೆ ಸುಮಾರು 2 ಲಕ್ಷ ರೂ ಮೌಲ್ಯದ ಪಿಕ್‍ಅಪ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಅರೋಪಿತರ ಮೇಲೆ ಸರ್ಕಾರದ ಪರವಾನಿಗೆ ಇಲ್ಲದೆ ಅಕ್ರಮ ಮರಳು ಸಾಗಟ ಮಾಡಿದ ಆರೋಪದಡಿ ಪ್ರಕರಣ ದಾಖಲಿಸಿ, ಆರೋಪಿತರ ಪತ್ತೆಗೆ ಬಲೆ ಬೀಸಿದ್ದಾರೆ.

ವೀರಾಜಪೇಟೆ ಉಪವಿಭಾಗ ಡಿವೈಎಸ್ಪಿ ಸಿ.ಟಿ.ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ವೀರಾಜಪೇಟೆ ವೃತ್ತ ನಿರೀಕ್ಷಕ ಬಿ.ಎಸ್.ಶ್ರೀಧರ್ ನಿರ್ದೇಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಗರ ಠಾಣಾಧಿಕಾರಿ ಜಗದೀಶ್ ಧೂಳ್ ಶೆಟ್ಟಿ, ನಗರ ಅಪರಾದ ವಿಭಾಗದ ಪಿ.ಎಸ್.ಐ. ಹೆಚ್.ಎಸ್.ಬೋಜಪ್ಪ, ಸಿಬ್ಬಂದಿಗಳಾz ಮಧು, ಮುಸ್ತಾಫ, ಗಿರೀಶ್, ಸಂತೋಷ್ ಮತ್ತು ಚಾಲಕರಾದ ಪೂವಯ್ಯ ಭಾಗವಹಿಸಿದ್ದರು.

-ಕೆ.ಕೆ.ಎಸ್ ವಿರಾಜಪೇಟೆ