ವೀರಾಜಪೇಟೆ, ಮೇ 9: ಗಾಂಧಿನಗರದ ಸಮಾಜ ಸೇವೆ ಸ್ನೇಹಿತರ ಬಳಗದಿಂದ ಕೊರೊನಾ ಸಂತ್ರಸ್ತರಿಗೆ ಅಪರಾಹ್ನದ ಊಟದ ವ್ಯವಸ್ಥೆ ಕೈಗೊಂಡಿದೆ.

ಕೊರೊನಾ ಲಾಕ್‍ಡೌನ್ ಬಂದ್‍ನಿಂದ ಹೊಟೇಲ್ ಇನ್ನಿತರ ಯಾವುದೇ ಆಶ್ರಯವಿಲ್ಲದೆ ಕಂಗಾಲಾಗಿರುವವರಿಗೆ ಕೊರೊನಾ ಸೋಂಕು, ಬಂದ್ ಪರಿಹಾರ

ಕಾಣುವ ತನಕ ಸಮಾಜಸೇವೆ ಸ್ನೇಹಿತರ ಬಳಗದಿಂದ ನಿರಂತರವಾಗಿ ಅಪರಾಹ್ನದ ಊಟ ವಿತರಿಸುವುದಾಗಿ ಸಂಘಟನೆಯ ಸ್ಥಾಪಕ ಅಧ್ಯಕ್ಷ ಪಿ.ಎ. ಮಂಜುನಾಥ್ ತಿಳಿಸಿದ್ದಾರೆ.

ಈಗ ಲಾಕ್‍ಡೌನ್ ಘೋಷಣೆಯಾದ ದಿನದಿಂದ ಉಚಿತ ಅನ್ನದಾನದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪ್ರತಿ ದಿನ 20 ರಿಂದ 30 ಮಂದಿ ಅಪರಾಹ್ನದ ಊಟದಲ್ಲಿ ಭಾಗಿಯಾಗುತ್ತಿದ್ದಾರೆ. ಕೊರೊನಾ ವಾರಿಯರ್ಸ್ ಹೋಮ್‍ಗಾಡ್ರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ 30 ಮಂದಿಗೆ ಇತರರೊಂದಿಗೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಈ ಊಟದ ವ್ಯವಸ್ಥೆ ಮಾಡಲಾಗಿದ್ದು, ಲಾಕ್‍ಡೌನ್ ಇನ್ನು 15 ದಿನಗಳ ಕಾಲ ಮುಂದುವರೆದಿರುವುದರಿಂದ ಅಲ್ಲಿಯತನಕ ಈ ಊಟದ ಕಾರ್ಯಕ್ರಮ ಮುಂದುವರೆಯುತ್ತದೆ.

ಸುಮಾರು 180 ಮಂದಿ ಸದಸ್ಯರುಗಳನ್ನು ಹೊಂದಿರುವ

ಸಮಾಜ ಸೇವೆಯ ಸ್ನೇಹಿತರ ಬಳಗ ಸಂತ್ರಸ್ತರ ಊಟಕ್ಕೆ ವೆಚ್ಚವಾಗುವ ಹಣವನ್ನು ಸದಸ್ಯರುಗಳೇ ಭರಿಸುತ್ತಿದ್ದು, ಬಳಗದ ಪ್ರಮುಖ ಕಾರ್ಯಕರ್ತರಾಗಿ ಶಾಜಿ, ನಿತೀನ್, ಕುಯ್ಮಂಡ ರಾಕೇಶ್ ಬಿದ್ದಪ್ಪ ಹಾಗೂ ಟಿ.ಆರ್. ಹರ್ಷ ಸೇವೆ ಸಲ್ಲಿಸುತ್ತಿದ್ದಾರೆ.

ಯಾವುದೇ ಆಶ್ರಯವಿಲ್ಲದೆ ಅಪರಾಹ್ನದ ಊಟದ ಅಗತ್ಯವಿರುವವರು 9483874810 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಸಂಘಟಕರು ತಿಳಿಸಿದ್ದಾರೆ.