ಟಾಸ್ಕ್‍ಫೋರ್ಸ್ ಸಭೆಯಲ್ಲಿ ನಿರ್ಧಾರ

ನಾಪೋಕ್ಲು, ಮೇ 9: ಲಾಕ್‍ಡೌನ್ ಹಿನ್ನೆಲೆಯಲ್ಲಿ ವಾರದಲ್ಲಿ ಎರಡು ದಿನಗಳ ಕಾಲ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದ್ದು ಆ ದಿನಗಳಲ್ಲಿ ವಿಪರೀತ ವಾಹನ ದಟ್ಟಣೆ ಹಾಗೂ ಜನದಟ್ಟಣೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಇಂದು ಗ್ರಾಮ ಪಂಚಾಯಿತಿಯಲ್ಲಿ ನಡೆದ ಟಾಸ್ಕ್ ಫೋರ್ಸ್ ಸಭೆಯಲ್ಲಿ ವಿವಿಧ ನಿರ್ಧಾರಗಳನ್ನು ಕೈಗೊಳ್ಳಲಾಯಿತು.

ಮಂಗಳವಾರ ಮತ್ತು ಶುಕ್ರವಾರ ನಗರಕ್ಕೆ ಬರುವ ವಾಹನಗಳ ನಿಲುಗಡೆಗೆ ಟಾಸ್ಕ್ ಫೋರ್ಸ್ ಸಭೆಯಲ್ಲಿ ಗ್ರಾಮ ಪಂಚಾಯಿತಿ ಮತ್ತು ಪೊಲೀಸ್ ಇಲಾಖೆ ನಿಲುಗಡೆಗೆ ಜಾಗವನ್ನು ನಿಗದಿಪಡಿಸಿದೆ.

ಕೊಟ್ಟಮುಡಿ ಕಡೆಯಿಂದ ಬರುವ ವಾಹನಗಳನ್ನು ಮಾರುಕಟ್ಟೆ ಮತ್ತು ಪ್ರೌಢ ಶಾಲಾ ಆವರಣದಲ್ಲಿ ನಿಲುಗಡೆ ಮಾಡಬೇಕು. ಹಳೆತಾಲೂಕಿನಿಂದ

ಬರುವ ವಾಹನಗಳು ಮಾದರಿ ಪ್ರಾಥಮಿಕ ಶಾಲಾ ಮೈದಾನ, ಬೇತು ಕಡೆಯಿಂದ ಬರುವ ವಾಹನಗಳು ಬೇತು ಸರ್ಕಾರಿ ಶಾಲೆಯ ಮೈದಾನದಲ್ಲಿ ತಮ್ಮ ತಮ್ಮ ವಾಹನಗಳನ್ನು ನಿಲ್ಲಿಸಿ. ನಡೆದುಕೊಂಡು ಅಂತರವನ್ನು ಕಾಪಾಡಿಕೊಂಡು ನಗರಕ್ಕೆ ಬರತಕ್ಕದ್ದು. ಆಟೋ ರಿಕ್ಷಾ ಹೊರತುಪಡಿಸಿ ನಗರಕ್ಕೆ

ಯಾವುದೇ ವಾಹನಗಳ ಪ್ರವೇಶ ಬೇಡ ಎಂಬ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಈ ಸಂದರ್ಭ ನಗರದಲ್ಲಿ ವಾಹನಗಳ ಸಂಚಾರ ಕಂಡು ಬಂದರೆ ವಾಹನಗಳನ್ನು ಮುಟ್ಟುಗೋಲು ಹಾಕಿ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಠಾಣಾಧಿಕಾರಿ ಕಿರಣ್ ತಿಳಿಸಿದ್ದಾರೆ.

ಸಭೆಯಲ್ಲಿ ಪಿಡಿಒ ಚೋಂದಕ್ಕಿ ಮಾತನಾಡಿ ಹಣ್ಣುಹಂಪಲು ದಿನಬಳಕೆ ವಸ್ತುಗಳನ್ನು ಮನೆಮನೆಗೆ ತಲುಪಿಸುವಲ್ಲಿ ಆಸಕ್ತಿ ಹೊಂದಿದವರು ಪಂಚಾಯಿತಿಯನ್ನು ಸಂಪರ್ಕಿಸಿದರೆ ಅನುಮತಿ ನೀಡಲಾಗುವುದು ಎಂದರು. ಗ್ರಾ.ಪಂ. ಅಧ್ಯಕ್ಷೆ ಪಾರ್ವತಿ, ಉಪಾಧ್ಯಕ್ಷ ಮಹಮದ್‍ಖುರೇಶಿ, ಸದಸ್ಯರಾದ ಅರುಣ್‍ಬೇಬ, ಅಶ್ರಫ್, ಇಸ್ಮಾಯಿಲ್, ಕಾಳೆಯಂಡ ಸಾಬ ತಿಮ್ಮಯ್ಯ, ವನಜಾಕ್ಷಿ, ಶಿವಚಾಳಿಯಂಡ ಜಗದೀಶ್, ಕನ್ನಂಬೀರ ಸುಧಿತಿಮ್ಮಯ್ಯ ಸಿಬ್ಬಂದಿಯವರು ಉಪಸ್ಥಿತರಿದ್ದರು.