ಮಡಿಕೇರಿ, ಮೇ 9: ಕೊಡಗು ರಕ್ಷಣಾ ವೇದಿಕೆಯ ವತಿಯಿಂದ ನಮ್ಮವರಿಗಾಗಿ ನಾವು ಅಭಿಯಾನ ಹಮ್ಮಿಕೊಂಡಿದ್ದು, ಕೊರೊನಾ ಪರೀಕ್ಷೆಗೆ ಒಳಗಾಗುವವರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.

ಮಡಿಕೇರಿ ಕೋವಿಡ್ ಆಸ್ಪತ್ರೆಯ ಮುಂಭಾಗದಲ್ಲಿ ಕೊಡಗು ಜಿಲ್ಲೆಯ ವಿವಿಧ ಭಾಗಗಳಿಂದ ಕರೋನಾ ರೋಗಿಗಳನ್ನು ಕರೆದುಕೊಂಡು ಬರುವ ಅವರ ಸಂಬಂಧಿಕರಿಗೆ ಮತ್ತು ಕೊರೊನಾ ಪರೀಕ್ಷೆಗೆ ಒಳಗಾಗುವುವರಿಗೆ ಅಭಿಯಾನದ ಅಂಗವಾಗಿ ಮಧ್ಯಾಹ್ನದ ಊಟ ವಿತರಿಸಲಾಗುತ್ತದೆ. ಹೋಟೆಲ್ ಇಲ್ಲದೆ ರೋಗಿಗಳ ಸಂಬಂಧಿಕರು ಹಸಿವಿನಿಂದ ಬಳಲಬಾರದು ಎಂಬ ಸದುದ್ದೇಶದಿಂದ ಅಭಿಯಾನ ಪ್ರಾರಂಭಗೊಂಡಿದೆ ಎಂದು ಸಂಘಟನೆ ಅಧ್ಯಕ್ಷ ಪವನ್ ಪೆಮ್ಮಯ್ಯ ತಿಳಿಸಿದ್ದಾರೆ.