ಗೋಣಿಕೊಪ್ಪಲು, ಮೇ 9: ಕೋವಿಡ್ ನಿಯಂತ್ರಿಸುವಲ್ಲಿ ವಿಫಲವಾಗಿರುವ ಬಿಜೆಪಿ ಸರ್ಕಾರದ ವಿರುದ್ಧ ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರೆ ಕೇಚಮಾಡ ಸರಿತಾ ಪೂಣಚ್ಚ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೂಡಲೇ ಸರ್ಕಾರವನ್ನು ವಜಾ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಕೋವಿಡ್ ಹೆಸರಿನಲ್ಲಿ ನಿರಂತರವಾಗಿ ಅಮಾಯಕ ಜೀವಗಳು ಬಲಿಯಾಗುತ್ತಿದ್ದು ಕುಟುಂಬಕ್ಕೆ ಆಧಾರ ವಾಗಿರುವ ಅದೆಷ್ಟೋ ಮಂದಿ ಪ್ರಾಣ ಕಳೆದುಕೊಂಡು ಕುಟುಂಬ ಸಂಕಷ್ಟಕ್ಕೊಳಗಾಗಿದೆ.
ಕೋವಿಡ್ಗೆ ಸಂಬಂಧಿಸಿದಂತೆ ಯಾವುದೇ ಮುಂಜಾಗ್ರತಾ ಕ್ರಮಕೈಗೊಳ್ಳದೆ ಅಸಹಾಯಕತೆ ತೋರಿದ ಹಿನ್ನೆಲೆ ಆಸ್ಪತ್ರೆಗಳಲ್ಲಿ ಸಕಾಲಕ್ಕೆ ಔಷಧಿಗಳು, ಆರೈಕೆ ಸಿಗದೆ ಆಮ್ಲಜನಕ ಕೊರತೆಯಿಂದ ರೋಗಿಗಳು ದಿನದಿಂದ ದಿನಕ್ಕೆ ಸಾವನ್ನಪ್ಪುತ್ತಿದ್ದಾರೆ.
ಜನಸೇವೆ ಮಾಡಬೇಕಾದ ಮಂತ್ರಿಗಳು ಕೊರೊನಾ ಎರಡನೇ ಅಲೆಯನ್ನು ಆರಂಭದಲ್ಲೇ ಗಂಭೀರವಾಗಿ ಪರಿಗಣಿಸದೆ ಕಡೆಗಣಿಸಿದ ಪರಿಣಾಮವೇ ಎಲ್ಲಾ ಜಿಲ್ಲೆಗಳಲ್ಲೂ ಸಾವು ನೋವುಗಳು ಸಂಭವಿಸುತ್ತಿವೆ ಎಂದು ಸರಿತಾ ಗಂಭೀರ ಆರೋಪ ಮಾಡಿದ್ದಾರೆ.
ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಹಲವರು ಮೃತಪಟ್ಟ ಘಟನೆ ರಾಜ್ಯವೇ ತಲೆತಗ್ಗಿಸುವಂತಾಗಿದೆ.
ಪ್ರಕರಣದ ಗಂಭೀರತೆಯನ್ನು ಪರಿಗಣಿಸದೆ. ಅಧಿಕಾರಿಗಳ ಮೇಲೆ ಗೂಬೆ ಕೂರಿಸುವ ಷಡ್ಯಂತ್ರ ನಡೆಯುತ್ತಿದ್ದು ತನಿಖೆ ಮೂಲಕ ಪ್ರಕರಣವನ್ನು ಮುಚ್ಚಿ ಹಾಕಲು ಮುಂದಾಗಿದ್ದಾರೆ.ಈ ಕಾರಣಕ್ಕಾಗಿಯೇ ಸಂಸದ ತೇಜಸ್ವಿ ಸೂರ್ಯ ಬೆಡ್ ಬ್ಲಾಕ್ ದಂಧೆÉ ಹೆಸರಿನಲ್ಲಿ ಒಂದು ವರ್ಗವನ್ನು ದೂಷಿಸುವ ಮೂಲಕ ಸ್ವಪಕ್ಷದ ಅಕ್ರಮವನ್ನು ಮುಚ್ಚಿ ಹಾಕಲು ಮುಂದಾಗಿದ್ದಾರೆ ಎಂದು ಅವರು ಆಪಾದಿಸಿದ್ದಾರೆ.