ಕೂಡಿಗೆ, ಮೇ ೮: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ೧೦ ವರ್ಷಗಳಿಂದಲೂ ಕೂಲಿ ಕೆಲಸ ಮಾಡಿ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವ ನೂರಾರು ನಿವಾಸಿಗಳಿಗೆ ನಿವೇಶನ ಇಲ್ಲಾದಾಗಿದೆ. ಕಳೆದ ಹತ್ತು ವರ್ಷಗಳ ಹಿಂದೆ ಕಾದಿರಿಸಿದ ಜಾಗದಲ್ಲಿ ನಿವೇಶನ ರಹಿತರಿಗೆ ನಿವೇಶನವನ್ನು ನೀಡುವಂತೆ ನಿವೇಶನ ರಹಿತರು ದುಂಬಾಲು ಬಿದ್ದಿದ್ದಾರೆ.

ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಹತ್ತು ವರ್ಷಗಳಿಂದಲೂ ವರ್ಷಕ್ಕೆ ಎರಡೂ ಬಾರಿ ನಡೆಯುವ ಗ್ರಾಮ ಸಭೆಯಲ್ಲಿ ಮಾತ್ರ ನಿವೇಶನ ರಹಿತರ ಫಲಾನುಭವಿಗಳ ಆಯ್ಕೆ ಎಂಬ ಕಾರ್ಯಕ್ರಮ ಪಟ್ಟಿಯಲ್ಲಿ ಇರುತ್ತದೆ. ಗ್ರಾಮ ಸಭೆ ನಡೆಯುವ ಸಂದರ್ಭ ನಿವೇಶನ ರಹಿತರಿಂದ ಅರ್ಜಿಗಳನ್ನು ಸ್ವೀಕರಿಸುತ್ತಾರೆ. ಆದರೆ ಇದುವರೆಗೆ ಸ್ವೀಕರಿಸಿದ ಅರ್ಜಿಗಳು ಎಲ್ಲಿಗೆ ಹೋದವು ಎಂಬುದು ಮಾತ್ರ ಗೊತ್ತಾಗುತ್ತಿಲ್ಲ!

ರಾಜ್ಯ ಸರಕಾರ ಮತ್ತು ಕೇಂದ್ರ ಸರ್ಕಾರ ವರ್ಷಂಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ವಿವಿಧ ಯೋಜನೆಗಳಾದ ಆಶ್ರಯ ಯೋಜನೆ, ಅಂಬೇಡ್ಕರ್ ವಸತಿ ಯೋಜನೆ, ಬಸವ ಕಲ್ಯಾಣ ವಸತಿ ಯೋಜನೆ ಎಂಬ ವಿವಿಧ ಯೋಜನೆಯನ್ನು ಜಾರಿಗೆ ತಂದಿದೆ. ಅದರ ಮೂಲಕ ವರ್ಷಂಪ್ರತಿ ಆಯಾ ಗ್ರಾಮ ಪಂಚಾಯಿತಿಗಳಿಗೆ ನಿಗದಿತ ಮನೆಗಳು ಮಂಜೂರಾತಿ ಆಗುತ್ತಲೇ ಇವೆ. ನಿವೇಶನ ರಹಿತರಿಗೆ ಮಾತ್ರ ಮನೆಯ ಭಾಗ್ಯ ದೊರೆಯದಿರುವುದು ವಿಪರ್ಯಾಸವೇ ಸರಿ...!

ಸರಕಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಖಾಲಿ ಇರುವ ಕಂದಾಯ ಇಲಾಖೆಯ ಜಾಗವನ್ನು ಗುರುತಿಸಿ ತಾಲೂಕು ಕಾರ್ಯನಿರ್ವಾಣಾಧಿಕಾರಿ ಹೆಸರಿಗೆ ಖಾತೆಯನ್ನು ಮಾಡಿಸಿ ಅದರ ಮೂಲಕ ಆಯಾ ಗ್ರಾಮ ಪಂಚಾಯಿತಿ ನಿವೇಶನ ರಹಿತರಿಗೆ ನಿವೇಶನವನ್ನು ನೀಡುವ ಅಧಿಕಾರಿ ಇದ್ದರೂ ಕಳೆದ ಹತ್ತು ವರ್ಷಗಳಿಂದಲೂ ಈ ವ್ಯಾಪ್ತಿಯ ನಿವೇಶನ ರಹಿತರಿಗೆ ಇದರ ಪ್ರಯೋಜನ ದೊರೆತ್ತಿಲ್ಲ ಎಂದು ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತರ ಆರೋಪವಾಗಿದೆ.

ಗ್ರಾಮ ಪಂಚಾಯಿತಿಗೆ ನಿಗದಿತ ಮನೆಗಳ ಮಂಜೂರಾತಿ ಪಡೆದು ಬಂದರೂ ಜಿಲ್ಲಾಮಟ್ಟದ ಅಧಿಕಾರಿಗಳು, ರಾಜಕಾರಣಿಗಳು ಅರ್ಹ ಫಲಾನುಭವಿಗಳಿಗೆ ನಿವೇಶನವನ್ನು ನೀಡಲು ಶಿಫಾರಸ್ಸು ಮಾಡಿದರೂ ಇದುವರೆಗೂ ಒಬ್ಬರಿಗೂ ನಿವೇಶನ ನೀಡಿಲ್ಲ ಎಂದು ನಿವೇಶನ ರಹಿತರಾದ ದೇವಕಿ, ಗೋಪಾಲ, ಲಲಿತಮ್ಮ, ಸಾವಿತ್ರಿ, ಸಣ್ಣಯ್ಯ, ಜವರಪ್ಪ ಸೇರಿದಂತೆ ಹಲವಾರು ಮಂದಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಹುದುಗೂರು ಮತ್ತು ಬ್ಯಾಡಗೊಟ್ಟ ಗ್ರಾಮದಲ್ಲಿ ೨೫ಕ್ಕೂ ಹೆಚ್ಚು ಎಕರೆಗಳಷ್ಟು ಪೃಸಾರಿ ಪ್ರದೇಶವಿದ್ದು, ಈಗಾಗಲೇ ನಿವೇಶನ ರಹಿತರಿಗೆ ಎಂದು ಗುರುತಿಸಿ ಐದು ವರ್ಷಗಳು ಕಳೆದರೂ ಇದರ ಬಗ್ಗೆ ಯಾವ ಜನಪ್ರತಿನಿಧಿಗಳು ಮುಂದಾಗುತ್ತಿಲ್ಲ ಎಂದು ನಿವೇಶನ ರಹಿತರು ಆರೋಪಿಸಿದ್ದಾರೆ.

ಕಳೆದ ಮೂರು ವರ್ಷಗಳ ಹಿಂದೆ ದಿಡ್ಡಳ್ಳಿ ಪುನರ್ವಸತಿ ಕೇಂದ್ರಕ್ಕೆ ನೀಡಿದ ಹಾಗೆ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ನಿವೇಶನ ರಹಿತರಿಗೆ ಅದರ ಪಕ್ಕದಲ್ಲಿ ಇರುವ ಜಾಗದಲ್ಲಿ ಮನೆ ನಿರ್ಮಿಸಲು ಯೋಜನೆಯನ್ನು ರೂಪಿಸಿ ಅರ್ಹ ನಿವೇಶನ ರಹಿತ ಫಲಾನುಭವಿಗಳಿಗೆ ನೀಡುವಂತೆ ಅವರುಗಳ ಆಗ್ರಹವಾಗಿದೆ.

ಇದಕ್ಕೆ ಸಂಬAಧಿಸಿದAತೆ ಕೂಡಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಯಿಷಾ ಅವರ ಪ್ರತಿಕ್ರಿಯೆ ಬಯಸಿದಾಗ ನೂತನವಾಗಿ ಅಧಿಕಾರ ವಹಿಸಿಕೊಂಡಿರುತ್ತೇನೆ. ಮುಂದಿನ ದಿನಗಳಲ್ಲಿ ಅರ್ಹ ಫಲಾನುಭವಿಗಳಿಗೆ ಗ್ರಾಮ ಪಂಚಾಯಿತಿ ಮಾಸಿಕ ಸಭೆಯಲ್ಲಿ ತೀರ್ಮಾನ ಕೈಗೊಂಡು ಸ್ಥಳ ಪರಿಶೀಲನೆ ನಡೆಸಿ ನಿವೇಶನ ನೀಡಲಾಗುವುದು ಎಂದು ತಿಳಿಸಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ.