ಕಣಿವೆ, ಮೇ ೮: ಕಳೆದ ಏಪ್ರಿಲ್ ತಿಂಗಳಲ್ಲಿ ಸುರಿದ ಆಲಿಕಲ್ಲು ಮಳೆಯ ಪರಿಣಾಮ ಮಾವು ಫಸಲಿನ ಮೇಲೆ ದುಷ್ಪರಿಣಾಮ ಉಂಟು ಮಾಡಿದೆ. ಕಣಿವೆ ಗ್ರಾಮದ ಕೃಷಿಕ ಭಾರದ್ವಾಜ ಆನಂದತೀರ್ಥ ಅವರ ಮಾವಿನ ತೋಟದಲ್ಲಿನ ಮಾವು ಫಸಲು ಭಾಗಶಃ ಹಾನಿಯಾಗಿದೆ.
ಎರೆ ಮಣ್ಣು ಭೂಮಿಯ ಸುಮಾರು ಆರು ಎಕರೆ ಗದ್ದೆಯಲ್ಲಿ ಬೇರೆ ಬೇರೆ ಬೆಳೆಗಳು ಕೈಗೂಡುವಲ್ಲಿ ವಿಫಲವಾದಾಗ ಮಾವು ಕೃಷಿಗೆ ಮಾರು ಹೋಗಿದ್ದ ಈ ಕೃಷಿಕ ಭಾರದ್ವಾಜ ಹಾರಂಗಿಯ ತೋಟಗಾರಿಕಾ ಇಲಾಖೆಯಲ್ಲಿ ಸಿಕ್ಕ ಮಾವಿನ ಗಿಡಗಳನ್ನು ತಂದು ಕಳೆದ ಆರು ವರುಷಗಳ ಹಿಂದೆ ನಾಟಿ ಮಾಡಿದ್ದರು.
ಸುಮಾರು ಐದಾರು ತರಹೇವಾರು ತಳಿಯ ಈ ಮಾವಿನ ಗಿಡಗಳು ಈ ಬಾರಿ ಸ್ವಾದಿಷ್ಟಮಯವಾಗಿ ಬೆಳವಣಿಗೆ ಕಂಡಿದ್ದವು. ಆದರೆ ಅಕಾಲಿಕ ಮಳೆ ತಂದಿಟ್ಟ ಆಲಿ ಕಲ್ಲುಗಳ ಆಪತ್ತಿಗೆ ಮಾವು ಫಸಲಿನ ಮೇಲೆ ಮಾರಕ ಪರಿಣಾಮ ಉಂಟು ಮಾಡಿದೆ ಎನ್ನುತ್ತಾರೆ ಭಾರದ್ವಾಜ್.
ನಾನು ಮಾವು ಬೆಳೆದು ಲಾಭ ನೋಡುವುದು ಮುಖ್ಯವಲ್ಲ. ಮಾವಿನ ಕಾಲದಲ್ಲಿ ಮನೆಗೆ ಬರುವ ನೆಂಟರಿಷ್ಟರು ಹಾಗೂ ಸ್ನೇಹಿತರಿಗೆ ಒಂದಷ್ಟು ಕೊಟ್ಟು ಉಳಿದದ್ದನ್ನು ಪಕ್ಷಿಗಳು ತಿನ್ನಲು ಬಿಡುತ್ತಿದ್ದೆ.
ನಾನೇನು ಈ ಮಾವು ಫಸಲಿಗೆ ಅಂತಾ ಪ್ರತ್ಯೇಕವಾದ ಶ್ರಮವಾಗಲೀ, ಆರೈಕೆಯಾಗಲೀ, ನೀರು ಗೊಬ್ಬರ ಪೂರೈಸುವುದಾಗಲೀ ಮಾಡಲ್ಲ. ಎಲ್ಲವೂ ಸ್ವಾಭಾವಿಕ ಪ್ರಕ್ರಿಯೆ.
ನನ್ನ ೨೫ ಎಕರೆ ತೋಟದೊಳಗಿನ ಯಾವುದೇ ಗಿಡ, ಬಳ್ಳಿ ಹಾಗೂ ತೋಟಗಾರಿಕಾ ಮರಗಳು ಅವುಗಳಿಗೆ ಬೇಕಾದ ಗೊಬ್ಬರವನ್ನು ಅವುಗಳೇ ಉತ್ಪಾದಿಸಿಕೊಳ್ಳುತ್ತವೆ. ನೀರಿಗೆ ಏನೂ ಬರವಿಲ್ಲ. ಏಕೆಂದರೆ ಮಳೆಗಾಲದಲ್ಲಿನ ಮಳೆಯ ನೀರಿನ ಜೊತೆಗೆ ಹಾರಂಗಿ ಕಾಲುವೆಯಲ್ಲಿ ಆರು ತಿಂಗಳ ಕಾಲ ಹರಿಸುವ ನೀರು ನನ್ನ ತೋಟದೊಳಗೆ ಹರಿದೇ ಸಾಗುವ ಕಾರಣ ನೀರಿನ ಬರವಿಲ್ಲ.
ಹಾಗಿದ್ದೂ ಈ ಬಾರಿ ಗಿಡದ ತುಂಬೆಲ್ಲಾ ಕಾಣುವಷ್ಟು ಮಾವಿನ ಫಸಲು ಬಿಟ್ಟ ಖುಷಿ ಇತ್ತಾದರೂ ಕ್ರಮೇಣ ಆಲಿಕಲ್ಲು ಬಿದ್ದ ಜಾಗದಲ್ಲಿ ಫಸಲು ಕರಗುತ್ತಿದೆ ಎನ್ನುತ್ತಾರೆ ಭಾರದ್ವಾಜ್.
ಇವರ ತೋಟದಲ್ಲಿ ತೋಟಗಾರಿಕಾ ಇಲಾಖೆ ಪಟ್ಟಿಯಲ್ಲಿನ ಬಹುತೇಕ ಗಿಡ, ಮರಗಳಿವೆ. ತೋಟದ ಒಂದು ಭಾಗದ ಕಲ್ಲಿನ ಗುಡ್ಡದ ಮೇಲೆ ಗಿಡ ನೆಟ್ಟು ಬೇಸಗೆಯಲ್ಲಿ ನೀರು ಹೊತ್ತು ಸುರಿದು ಬೆಳೆಸಿದ ವಿವಿಧ ಗಿಡ ಮೂಲಿಕೆಗಳು ಇಲ್ಲಿ ಬೆಳೆದು ನಿಂತಿವೆ.
ಚಿನ್ನೇನಹಳ್ಳಿ ಅರಣ್ಯ ಭಾಗದಿಂದ ಬಾಯಾರಿಕೆ ತಡೆಯದೇ ಕಾವೇರಿ ನೀರನ್ನು ಅರಸಿ ಬರುವ ಹಿಂಡು ಹಿಂಡು ಕಾಡಾನೆಗಳ ತಂಡ ಕಣಿವೆಯ ಇವರ ಈ ತೋಟದಲ್ಲೇ ಒಂದಷ್ಟು ಕಾಲ ಆಶ್ರಯ ಪಡೆದು ಅರಣ್ಯಕ್ಕೆ ಮರಳುತ್ತವೆ.
ಹಾಗಾಗಿ ಸಾಹಿತಿ ಭಾರದ್ವಾಜ್ರ ಕೃಷಿ ತೋಟ ಅನೇಕ ಪ್ರಾಣಿ - ಪಕ್ಷಿಗಳ ಆಶ್ರಯತಾಣ ಎಂದರೆ ಅತಿಶಯೋಕ್ತಿಯಲ್ಲ.
- ಕೆ.ಎಸ್. ಮೂರ್ತಿ