ಮಾನ್ಯರೆ, ಕೊರೊನಾ ಆಘಾತದಿಂದ ದೇಶದ ಜನರು ಸಂಪೂರ್ಣವಾಗಿ ಜರ್ಜರಿತರಾಗಿದ್ದಾರೆ. ಅದರಲ್ಲೂ ಬಡಬಗ್ಗರ ಜೀವನ ಪರಿಸ್ಥಿತಿ ನೋಡಲು ಸಾಧ್ಯವಾಗದ ಸ್ಥಿತಿ ಎದುರಾಗಿರೂದಂತು ದುರಂತ ಸಂಗತಿ. ಸ್ವಾತಂತ್ರ್ಯ ಬಂದು 7 ವರ್ಷ ಕಳೆದು ಆಧುನಿಕ ಸಮಾಜದ ಭಾರತದಲ್ಲಿ ಆಸ್ಪತ್ರೆಗಳಲ್ಲಿ ಬೆಡ್ಗಳಿಲ್ಲದೇ, ವೈದ್ಯರಿಲ್ಲದೇ, ಆಕ್ಸಿಜನ್ ಇಲ್ಲದೇ, ಹಣವಿಲ್ಲದೇ ಬಡರೋಗಿಗಳು ನರಳಿ-ನರಳಿ ಸಾವಿಗೀಡಾಗುತ್ತಿರುವುದನ್ನು ನೋಡಿದಾಗ ನಮ್ಮನ್ನಾಳುತ್ತಿರುವ ಸರಕಾರಗಳು ಬಡವರ ಬಗೆಗಿನ ತಾತ್ಸಾರ ಧೋರಣೆಯನ್ನು ತೋರಿಸುತ್ತಿದೆ. ಕಳೆದ ವರ್ಷ ಕೊರೊನಾ ಆರಂಭವಾದಾಗ ಪೂರ್ಣ ಮಾಹಿತಿ ಇರಲಿಲ್ಲ. ದಿಢೀರನೆ ರೋಗ ವ್ಯಾಪಿಸಿದಾಗ ನಿಯಂತ್ರಣ ಮಾಡುವುದು ಸರಕಾರಕ್ಕೆ ಕಷ್ಟಸಾಧ್ಯವಾಗಿರುವುದು ಒಪ್ಪುವಂತಹ ವಿಚಾರ. ಆದರೆ ಅದಾಗಿ 1 ವರ್ಷದ ಅಂತರದಿಂದ ಮತ್ತೆ ರೋಗ ಉಲ್ಬಣಿಸಿದಾಗ ಸರಕಾರ ಮುಂದಾಲೋಚನೆಯ ಕ್ರಮಗಳನ್ನು ಕೈಗೊಂಡು, ಅಗತ್ಯ ವೈದ್ಯಕೀಯ ಆಸ್ಪತ್ರೆ, ಅಗತ್ಯ ವೈದ್ಯ ಸಿಬ್ಬಂದಿ, ಬೆಡ್, ಆಕ್ಸಿಜನ್ ವ್ಯವಸ್ಥೆಗಳನ್ನು ಅಗತ್ಯವಾಗಿ ಖರೀದಿಸಿ ತಯಾರಾಗಬೇಕಾಗಿತ್ತು. ಕಳೆದ ವರ್ಷ ಭಾರೀ ಪ್ರಮಾಣದಲ್ಲಿ ಸೋಂಕು ಏರಿಕೆಯಾದಾಗ ಉಂಟಾದ ಕೊರತೆ, ಅಭಾವಗಳನ್ನು ಕಂಡರೂ ಕಣ್ಣು ಮುಚ್ಚಿದ ಸರಕಾರ ಮತ್ತೆ ಸೋಂಕು ವಕ್ಕರಿಸಿದರೆ ನಿಭಾಯಿಸಲು ತೆಗೆದುಕೊಳ್ಳಬೇಕಾದ ಕ್ರಮ, ನಿರ್ಣಯಗಳಲ್ಲಿ ವಿಫಲವಾಗಿದ್ದೇ ಇಂದು ಮತ್ತೇ ಈ ಪರಿಯ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ. ಕೊರೊನಾ ನಿಯಂತ್ರಣ ಹೆಸರಿನಲ್ಲಿ ಬಡಬಗ್ಗರ ಮೇಲೆ ದರ್ಪ ತೋರುವ ಸರಕಾರ, ಬೆಡ್ಗಳಿಲ್ಲದೇ, ವೈದ್ಯರಿಲ್ಲದೇ, ಆಕ್ಸಿಜನ್ ಇಲ್ಲದೇ, ಹಣವಿಲ್ಲದೇ ಇರುವ ಬಡ ರೋಗಿಗಳನ್ನು ಆಸ್ಪತ್ರೆಗಳಿಂದ ಹೊರದಬ್ಬುವ ಸರಕಾರಿ, ಖಾಸಗಿ ಆಸ್ಪತ್ರೆಗಳ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ?
ಸರಿಯಾದ ವೈದ್ಯಕೀಯ ವ್ಯವಸ್ಥೆ ಮಾಡದ ಸರಕಾರ ಲಾಕ್ಡೌನ್ ಬ್ರಹ್ಮಾಸ್ತ್ರವನ್ನು ಹೇರಿದೆ. ಆದರೂ ದಿನನಿತ್ಯ ಸಾವಿರಾರು ಸಾವುಗಳು ದೇಶದಲ್ಲಿ ಸಂಭವಿಸುತ್ತಿದೆ. ಈ ಸಾವುಗಳ ನೈತಿಕ ಹೊಣೆಯನ್ನು ಸರಕಾರ ಹೊರಬೇಕಾಗುತ್ತದೆ. ವ್ಯವಸ್ಥೆಯ ವಿಫಲತೆಯನ್ನು ಏಕೆ ಒಪ್ಪಿಕೊಳ್ಳುತ್ತಿಲ್ಲ? ಯಾವುದೇ ವೈದ್ಯಕೀಯ ಕೊರತೆ ಇಲ್ಲವೆನ್ನುವ ಸರಕಾರ ವೈದ್ಯಕೀಯ ಕೊರತೆಯಿಂದಲೇ ಸಾವಿಗೀಡಾದ ಕುಟುಂಬದವ ಪ್ರಶ್ನೆಗಳಿಗೆ ಏಕೆ ಉತ್ತರಿಸುತ್ತಿಲ್ಲ? ಅದನ್ನು ಪ್ರಶ್ನಿಸಿ, ಪ್ರತಿಭಟಿಸಿದರೆ ಅಂತವರ ವಿರುದ್ಧ ಕೇಸ್ ದಾಖಲಿಸಿ, ಜೈಲಿಗೆ ತಳ್ಳಲಾಗುತ್ತಿದೆ. ಇಂತಹ ಪ್ರಕರಣಗಳು ದೇಶದ ಎಲ್ಲ ರಾಜ್ಯಗಳಲ್ಲಿ ನಡೆಯುತ್ತಿದೆ. ವಾಸ್ತವ ವ್ಯವಸ್ಥೆಯ ಭಾರತವೇ ಬೇರೆ, ಸರಕಾರಗಳು ಹೇಳುತ್ತಿರುವ ವ್ಯವಸ್ಥೆಯೇ ಬೇರೆಯಾಗಿದೆ. ಒಟ್ಟಿನಲ್ಲಿ ಅವ್ಯವಸ್ಥೆಯ ಸಮಾಜದಲ್ಲಿ ಬಲಿಯಾಗುತ್ತಿರುವವರು ಬಡಬಗ್ಗರು ಮಾತ್ರ.
- ಕುಡಿಯರ ಎಂ. ಕಾವೇರಪ್ಪ, ಯವಕಪಾಡಿ.