ಮಾನ್ಯರೆ, ಕೊರೊನಾ ಎಂಬ ಮಹಾಮಾರಿ ದೇಶದೆಲ್ಲೆಡೆ ವ್ಯಾಪಕವಾಗಿ 2ನೇ ಅಲೆಯಾಗಿ ಹರಡುತ್ತಿದೆ ಎಂಬ ವಿಷಯ ಎಲ್ಲರಿಗೂ ತಿಳಿದಿರುವ ವಿಷಯ. ಜೀವಕ್ಕಿಂತ ಯಾವುದೂ ಹೆಚ್ಚಲ್ಲ ಅಲ್ಲವೇ? ಹೀಗಿರುವಾಗ ಕೆಲವರಲ್ಲಿ ಹಠಮಾರಿತನ ಏಕೆ? ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಮತ್ತು ಸಾಮಾಜಿಕ ಕಾರ್ಯಕರ್ತರೆಲ್ಲರೂ ಜನಹಿತಕ್ಕಾಗಿ ಹಗಲೂ - ರಾತ್ರಿ ಎನ್ನದೇ ಕಾರ್ಯನಿರ್ವಹಿಸುತ್ತಿದ್ದಾರೆಂಬುವುದನ್ನು ನಾವೆಲ್ಲರೂ ತಿಳಿದುಕೊಳ್ಳಬೇಕು. ಎಲ್ಲಕ್ಕಿಂತ ಮಿಗಿಲಾಗಿ ಸರಕಾರವು ಮುನ್ನೆಚ್ಚರಿಕೆಗಾಗಿ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಅದನ್ನೆಲ್ಲಾ ನಾವು ಚಾಚುತಪ್ಪದೇ ಪಾಲಿಸಬೇಕು. ಹಬ್ಬ-ಹರಿದಿನಗಳು, ಜಾತ್ರೆ - ಮದುವೆ ಮುಂತಾದ ಸಮಾರಂಭಗಳನ್ನು ನಮ್ಮ ಪವಿತ್ರವಾದ ಜೀವವೊಂದಿದ್ದರೆ ಇವತ್ತಲ್ಲಾ ನಾಳೆ ಆಚರಿಸಬಹುದು. ಆದರೆ ಅದನ್ನು ಮರೆತು ಉದ್ಧಟತನ ತೋರಿ ಜೀವವನ್ನೇ ಕಳೆದುಕೊಂಡರೆ ಏನು ಸಾಧಿಸಲು ಸಾಧ್ಯ? ಇತ್ತೀಚಿನ ದಿನಪತ್ರಿಕೆಗಳಲ್ಲಿ ಬೆಂಗಳೂರಿನಂತ ಮಹಾನಗರಗಳಿಗೆ ಹಿಂದೆ ಕೆಲಸವನ್ನು ಹರಸಿ ಹೋಗಿದ್ದವರು ಎಲ್ಲರೂ ಅವರವರ ಸ್ವಂತ ಊರುಗಳಿಗೆ ವಾಪಸಾಗುತ್ತಿರುವುದಾಗಿ ಪ್ರಸಾರವಾಗುತ್ತಿರುವುದನ್ನು ಎಲ್ಲರೂ ಗಮನಿಸಬೇಕಾದ ವಿಷಯ. ಅದರಲ್ಲೂ ಜಿಲ್ಲಾ ಗಡಿಗಳಲ್ಲಿ ತಪಾಸಣೆಯೂ ಇಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹೊರಗಡೆಯಿಂದ ಅವರವರ ಸ್ವಂತ ಜಿಲ್ಲೆಗೆ ಆಗಮಿಸುತ್ತಿರುವ ಪ್ರತಿಯೊಬ್ಬರೂ ಕೆಲವು ದಿನಗಳ ಕಾಲ ತಮ್ಮ ಮನೆಗಳಲ್ಲಿ ಪ್ರತ್ಯೇಕವಾಗಿರಬೇಕು. ಹೊರಗಡೆ ಸುತ್ತಾಡಲು, ತಮ್ಮ ಸ್ನೇಹಿತರನ್ನು, ಸಂಬಂಧಿಕರನ್ನು ಮಾತನಾಡಿಸಲು ಹೋಗದೆ ಸ್ವಯಂ ಲಾಕ್‍ಡೌನ್ ಮಾಡಿಕೊಂಡು ಸರಕಾರಕ್ಕೂ, ತಮ್ಮ ಕುಟುಂಬದವರಿಗೂ, ಪರಿಸರಕ್ಕೂ ಯಾವುದೇ ತೊಂದರೆಯಾಗದಂತೆ ಕೊರೊನಾ ನಿರ್ಗಮಿಸುವ ವ್ಯವಸ್ಥೆಯನ್ನು ಮಾಡಿದರೆ ಎಲ್ಲರೂ ಸುಖವಾಗಿ ಬಾಳಬಹುದಲ್ಲವೇ? ಕೈಲಾಗದವನು ಮೈ ಪರಚಿಕೊಂಡ ಎಂಬಂತೆ ಸರಕಾರವು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದ್ದರೂ ಸಹ ಸುಮ್ಮನೆ ಇಲ್ಲಸಲ್ಲದ ಅಪವಾದಗಳನ್ನು ಮಾಡುವುದು ಎಷ್ಟು ಸರಿ? ಅಪವಾದಗಳನ್ನು ಮಾಡದೇ ಆದಷ್ಟು ಸಲಹೆ ಸೂಚನೆಗಳನ್ನು ನೀಡಿ ಆಗುತ್ತಿರುವ ಅನಾಹುತಗಳನ್ನು ತಡೆಗಟ್ಟುವ ಪರಿಹಾರವನ್ನು ಕಂಡುಕೊಂಡರೆ ಒಳ್ಳೆಯದಲ್ಲವೇ? ಇನ್ನು ಸರಕಾರವು ಗಡಿಗಳಲ್ಲಿ ಚೆಕ್‍ಪೋಸ್ಟ್‍ಗಳಲ್ಲಿ ಬಿಗಿ ಕಾನೂನನ್ನು ತಂದು ಹಿಂದೆ ಯಾವ ರೀತಿ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಂಡಿತ್ತೋ, ಅದೇ ರೀತಿ ಪುನಃ ಕ್ರಮ ಕೈಗೊಂಡರೆ ಒಳ್ಳೆಯದೆಂದು ನಮ್ಮ ಭಾವನೆ.

ಇದ್ದುದರಲ್ಲಿ ತೃಪ್ತಿಪಟ್ಟುಕೊಂಡು ಈ ಕಠಿಣ ದಿನಗಳು ಆದಷ್ಟು ಶೀಘ್ರದಲ್ಲಿ ಪ್ರಪಂಚದಿಂದ ಮಾಯವಾಗಲಿ ಎಂದು ಎಲ್ಲರೂ ದೇವರಲ್ಲಿ ಬೇಡುತ್ತ ಜೀವನವನ್ನು ಸಾಗಿಸೋಣ. ಅನವಶ್ಯಕವಾಗಿ ಮನೆಬಿಟ್ಟು ಹೊರಗೆ ಬರುವುದು, ರಸ್ತೆಗಳಲ್ಲಿ ವಿನಃಕಾರಣ ತಿರುಗಾಡುವುದನ್ನು ನಿಲ್ಲಿಸೋಣ. ಅವಶ್ಯಕವಿದ್ದಾಗ ಹೊರ ಬಂದಲ್ಲೂ ಮಾಸ್ಕ್ ಧರಿಸಿ ಒಬ್ಬರಿಂದೊಬ್ಬರಿಗೆ ಅಂತರವನ್ನು ಕಾಯ್ದುಕೊಂಡು ಕೊರೊನಾ ರಹಿತವಾಗಿ ಮನೆ ಸೇರಿಕೊಳ್ಳೋಣ. ಸರಕಾರದ ಮಾರ್ಗಸೂಚಿಗಳನ್ನು ಕ್ರಮಬದ್ಧವಾಗಿ ಪಾಲಿಸೋಣ.

- ಎಸ್.ಬಿ. ದೊರೆ ಗಣಪತಿ, ನಿವೃತ್ತ ಪೊಲೀಸ್ ಎ.ಎಸ್.ಐ. ಕುಶಾಲನಗರ, ಬಿ.ವಿ. ಶಿವಪ್ಪ, ನಿವೃತ್ತ ಪೊಲೀಸ್ ಎ.ಎಸ್.ಐ. ಗುಮ್ಮನಕೊಲ್ಲಿ.