ಮಾನ್ಯರೆ, ಲಾಕ್ಡೌನ್ನಲ್ಲಿ ಅಗತ್ಯ ವಸ್ತುಗಳ ಖರೀದಿ ಮಾಡುವಾಗ ಆಗುತ್ತಿರುವ ಜನಜಂಗುಳಿ, ಗೊಂದಲಕ್ಕೆ ಮುಖ್ಯ ಕಾರಣ ವಾರಕ್ಕೆ ಎರಡು ದಿನ ಮಾತ್ರ ಅವಕಾಶ ನೀಡಿರುವುದು. ಯಾರೂ ಮೂಲಕಾರಣ ಬಗ್ಗೆ ಯೋಚಿಸಿದ ಹಾಗಿಲ್ಲ. ಕೇವಲ ಎರಡು ದಿನ ಅವಕಾಶ ನೀಡಿದ ಕಾರಣ ಹೆಚ್ಚಿನ ಜನ ಒಂದೇ ದಿನ ಹೊರ ಬರುತ್ತಿದ್ದಾರೆ. ಯಾವುದೇ ದಿನಸಿ, ತರಕಾರಿ, ಮಾಂಸ, ಮೀನಿನ ಅಂಗಡಿಗೆ ಜನ ಹೋದಾಗ ವ್ಯಾಪಾರ ಮಾಡುವವರು ಅಷ್ಟೇ ಜನ ಇರುತ್ತಾರೆ. ಅಂಗಡಿಯಲ್ಲಿರುವ ಒಬ್ಬಿಬ್ಬರೇ ಪ್ರತಿ ಒಬ್ಬ ಗಿರಾಕಿಗೆ ಸಾಮಾನು ತೂಗಿ, ಕಟ್ಟಿ ಕೊಟ್ಟು ಹಣ ಪಡೆಯಬೇಕಾಗುತ್ತದೆ. ಇಲ್ಲಿಯೇ ಬಹಳಷ್ಟು ಸಮಯ ವ್ಯರ್ಥವಾಗುತ್ತದೆ. ಹಾಗಾಗಿ ಒಂದೇ ಅಂಗಡಿಯಲ್ಲಿ ಒಬ್ಬ ಬಹಳಷ್ಟು ಜನಜಂಗಳಿಯಲ್ಲಿ ಕಾದು ಅದೇ ತರಹ ಇನ್ನೊಂದು ಅಂಗಡಿಗೆ ಹೋಗಿ ಕಾಯಬೇಕಾಗುತ್ತದೆ. ಈ ಸಮಯ ಹೊಂದಾಣಿಕೆ ಮಾಡಲು ಬಹುಶಃ ಒಂದೇ ಮನೆಯಿಂದ ಹೆಚ್ಚಿನ ಜನರು ಬೇರೆ ಬೇರೆ ಅಂಗಡಿಗೆ ಹೋಗಲು ಹೊರಬರುತ್ತಿರಬಹುದು. ಹಾಗಾಗಿ ಕೊಡಗಿನಲ್ಲಿ ಕೂಡ ರಾಜ್ಯ ಸರ್ಕಾರದ ಕಾನೂನು ಪಾಲನೆ ಮಾಡುವುದು ಸೂಕ್ತ. ಅಂದರೆ ಪ್ರತೀ ದಿನ ಬೆಳಿಗ್ಗೆ 6 ರಿಂದ 10 ರವರೆಗೆ ಅವಕಾಶ ಕಲ್ಪಿಸುವುದು. ಇದರಿಂದ ಖಂಡಿತವಾಗಿ ಜನಜಂಗುಳಿ ಕಡಿಮೆ ಆಗುವುದು. ನಿತ್ಯಾ ಜನಜಂಗುಳಿ ಹಂಚಿಹೋಗುವುದು. ಜಿಲ್ಲಾಡಳಿತ ಈ ಬಗ್ಗೆ ಸಮೀಕ್ಷೆ ನಡೆಸಬೇಕಾಗಿ ವಿನಂತಿ.
- ಕಾನೆಹಿತ್ಲು ಸತೀಶ್ ಕುಮಾರ್