ವೀರಾಜಪೇಟೆ, ಮೇ ೬: ಕೋವಿಡ್ ಷರತ್ತುಗಳನ್ನು ಉಲ್ಲಂಘಿಸಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದ ೮ ಮಂದಿಯನ್ನು ಕೊರೊನಾ ಫೈಯಿಂಗ್ ಸ್ಕಾ÷್ವಡ್ ಪತ್ತೆ ಹಚ್ಚಿ ಇಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ ಕ್ರಮಕೈಗೊಂಡಿದೆ.

ವೀರಾಜಪೇಟೆ ಮೊಗರಗಲ್ಲಿ ಯಲ್ಲಿರುವ ಮಜೀದ್-ಎ-ಆಜಾಂ ಮಸೀದಿಯಲ್ಲಿ ನಿನ್ನೆ ದಿನ ರಾತ್ರಿ ೭.೧೫ರ ಸಮಯದಲ್ಲಿ ಕೊರೊನಾ ಕರ್ಫ್ಯೂ ನಿಯಮ ಉಲ್ಲಂಘಿಸಿದ್ದಲ್ಲದೆ ಮಸೀದಿಯೊಳಗೆ ಮಾಸ್ಕ್ ಧರಿಸದೆ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದ ಸ್ಥಳೀಯ ನಿವಾಸಿಗಳಾದ ಫೈರೋಜ್ ಖಾನ್, ಅಜಂದುಲ್ಲಾ, ಸಯ್ಯದ್ ಅಹಮ್ಮದ್, ಅಬ್ದುಲ್ ರಹೀಮ್ ಸಯ್ಯದ್ ಮಸೂದ್, ಅಬ್ದುಲ್ ಅಜೀಜ್, ಎಂ.ಎನ್. ಶಫಿಯುಲ್ಲಾ ಹಾಗೂ ಟಿ. ಮಹಮ್ಮದ್ ಸಲೀಂ ಇವರುಗಳ ವಿರುದ್ಧ ಇಲ್ಲಿನ ನಗರ ಪೊಲೀಸರು ವಿಪತ್ತು ನಿರ್ವಹಣಾ ಕಾಯಿದೆ ಅಡಿ ೫೧ (ಬಿ) ಕಲಂ ಪ್ರಕಾರ ಪ್ರಕರಣ ದಾಖಲಿಸಿ ಕ್ರಮಕೈಗೊಂಡಿದ್ದಾರೆ.

ನಿನ್ನೆ ದಿನ ರಾತ್ರಿ ವೀರಾಜಪೇಟೆ ತಾಲೂಕು ಕಚೇರಿಯ ಕೊರೊನಾ ಫೈಯಿಂಗ್ ಸ್ಕಾ÷್ವಡ್ ತಂಡದ ಅಧಿಕಾರಿ ಪ್ರದೀಪ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಬಿ.ಎಂ. ನಾಣಯ್ಯ, ವೀರಾಜಪೇಟೆ ನಗರ ಪೊಲೀಸ್ ಠಾಣೆಯ ಎ.ಎಸ್.ಐ. ಯು.ಟಿ. ಮಾದಯ್ಯ ಇವರುಗಳು ಸಾರ್ವಜನಿಕರ ಸುಳಿವಿನ ಮೇರೆ ಮಸೀದಿ ಮೇಲೆ ದಾಳಿ ಮಾಡಿದಾಗ ಸಾಮೂಹಿಕ ಪ್ರಾರ್ಥನೆ ಮಾಡುತ್ತಿರುವುದು ಕಂಡು ಬಂದಿತ್ತು.