ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ ಪ್ರಮಾಣವಚನ

ನವದೆಹಲಿ, ಮೇ ೫: ಇಂದು ಬೆಳಿಗ್ಗೆ ಕೋಲ್ಕತ್ತಾದ ರಾಜ ಭವನದಲ್ಲಿ ಸರಳವಾಗಿ ನಡೆದ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಮಮತಾ ಬ್ಯಾನರ್ಜಿಯವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಪಶ್ಚಿಮ ಬಂಗಾಳ ರಾಜ್ಯದ ಮುಖ್ಯಮಂತ್ರಿಯಾಗಿ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯವರು ಪ್ರಮಾಣ ವಚನ ಸ್ವೀಕಾರ ಮಾಡಿದ ಹಿನ್ನೆಲೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಭಾಶಯ ಕೋರಿದ್ದಾರೆ. ಸಾಮಾಜಿಕ ಜಾಲತಾಣ ಟ್ವೀಟರ್‌ನಲ್ಲಿ ಟ್ವೀಟ್ ಮಾಡಿರುವ ಅವರು, ಪಶ್ಚಿಮ ಬಂಗಾಳ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ಮಮತಾ ಬ್ಯಾನರ್ಜಿಯವರಿಗೆ ಶುಭಾಶಯಗಳ ಕೋರುತ್ತೇನೆಂದು ಹೇಳಿದ್ದಾರೆ.

ಜರಗನಹಳ್ಳಿ ಶಿವಶಂಕರ್ ವಿಧಿವಶ

ಬೆಂಗಳೂರು, ಮೇ ೫: ನಾಡಿನ ಖ್ಯಾತ ಕವಿ, ಶರಣ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಜರಗನಹಳ್ಳಿ ಶಿವಶಂಕರ್ ಅವರು ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ.

ಮೈಸೂರು ಕೆಆರ್ ಆಸ್ಪತ್ರೆಯಲ್ಲಿ ತಪ್ಪಿದ ಭಾರೀ ದುರಂತ

ಮೈಸೂರು, ಮೇ ೫: ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲಾಗಿರುವ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಕೃಷ್ಣರಾಜ ಆಸ್ಪತ್ರೆಯಲ್ಲಿ ಕಳೆದ ರಾತ್ರಿ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಸಂಭವಿಸಬಹುದಾದ ಭಾರೀ ದುರಂತ ತಪ್ಪಿದೆ. ಕೆಲ ತಾಂತ್ರಿಕ ತೊಂದರೆಯಿAದಾಗಿ ಆಮ್ಲಜನಕ ಟ್ಯಾಂಕ್ ಹೆಪ್ಪುಗಟ್ಟಿದ್ದರಿಂದ ಕೊಳವೆಗಳಲ್ಲಿ ಪೂರೈಕೆ ಸ್ಥಗಿತಗೊಂಡಿತ್ತು. ಇದನ್ನು ಗಮನಿಸಿದ ಆಸ್ಪತ್ರೆಯ ಸಿಬ್ಬಂದಿ ತಕ್ಷಣವೇ ಉನ್ನತ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅದರಂತೆ, ಅಗ್ನಿಶಾಮಕ ಮತ್ತು ತುರ್ತು ಸೇವಾ ವಿಭಾಗದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಕೊಳವೆಗಳು ಮತ್ತು ತೊಟ್ಟಿಯ ಮೇಲೆ ನೀರನ್ನು ಸಿಂಪಡಿಸಿ, ತಾಪಮಾನವನ್ನು ಸಾಮಾನ್ಯ ಸ್ಥಿತಿಗೆ ತಂದಿದ್ದಾರೆ. ಇದು ೬,೦೦೦ ಕಿಲೋ ಲೀಟರ್ ಸಾಮರ್ಥ್ಯದ ದ್ರವೀಕೃತ ಆಮ್ಲಜನಕ ಘಟಕವಾಗಿದ್ದು, ಅನಿಲವನ್ನು -೧೬ ರಿಂದ -೧೮ ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಆಸ್ಪತ್ರೆಯಲ್ಲಿ ೮೦೦ ಕೋವಿಡ್ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋವಿಡ್ - ಮುಖ್ಯಮಂತ್ರಿ ಸಭೆ

ಬೆಂಗಳೂರು, ಮೇ ೫: ಮುಖ್ಯಮಂತ್ರಿ ಯಡಿಯೂರಪ್ಪ ಇಂದು ತಮ್ಮ ನಿವಾಸದಲ್ಲಿ ಸಚಿವರು ಹಾಗೂ ಅಧಿಕಾರಿಗಳ ಜೊತೆ ಕೋವಿಡ್ ನಿಯಂತ್ರಣದ ಕುರಿತು ಚರ್ಚೆ ನಡೆಸಿದರು. ಕೋವಿಡ್ ನಿಯಂತ್ರಿಸಲು ಸಚಿವರುಗಳಿಗೆ ನೀಡಿರುವ ಜವಾಬ್ದಾರಿಯ ಅನುಸಾರ ಎಲ್ಲಿಯೂ ಯಾವುದೇ ರೀತಿಯ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು. ಪ್ರಮುಖವಾಗಿ ಆಕ್ಸಿಜನ್ ಕೊರತೆ ನೀಗಿಸುವತ್ತ ಹೆಚ್ಚಿನ ಗಮನ ಹರಿಸುವುದು, ತುರ್ತು ಅಗತ್ಯವಿರುವ ರೋಗಿಗಳಿಗೆ ಬೆಡ್ ಹಂಚಿಕೆಗೆ ಕ್ರಮವಹಿಸುವುದು ಮತ್ತು ರೆಮಿಡಿಸಿವಿಯರ್ ಡ್ರಗ್ ಪೂರೈಕೆಯನ್ನು ಅಗತ್ಯತೆ ಗನುಸಾರವಾಗಿ ಸರಬರಾಜು ಮಾಡಲು ಕ್ರಮ ತೆಗೆದುಕೊಳ್ಳಲು ಸೂಚಿಸಿದರು. ಅಲ್ಲದೆ ಆಕ್ಸಿಜನ್, ರೆಮಿಡಿಸಿವಿಯರ್ ಹಾಗೂ ಬೆಡ್ ಸೇರಿದಂತೆ ಇತರ ವಿಷಯಗಳಲ್ಲಿ ಅಕ್ರಮ ಉಂಟಾದರೆ ಕೂಡಲೇ ಕ್ರಮಕೈಗೊಳ್ಳಲು ಆದೇಶಿಸಿದರು. ಪ್ರತಿದಿನ ಎಲ್ಲದರ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ರೈಲಿಗೆ ತಲೆಕೊಟ್ಟು ಪತ್ರಕರ್ತ ಆತ್ಮಹತ್ಯೆ

ದಾವಣಗೆರೆ, ಮೇ ೫: ಚಲಿಸುವ ರೈಲಿಗೆ ತಲೆ ಕೊಟ್ಟು ಪತ್ರಕರ್ತರೋರ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದ ಪತ್ರಕರ್ತ ಪರಮೇಶ್ (೪೬) ಅಮರಾವತಿ ಬಳಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲ ದಿನಗಳಿಂದ ಶೀತ, ಜ್ವರ, ಕೆಮ್ಮು ಕಾಣಿಸಿಕೊಂಡ ಹಿನ್ನೆಲೆ ಕೊರೊನಾ ಬಂದರೆ ಏನು ಮಾಡುವುದು ಎಂಬ ಆತಂಕ ಶುರುವಾಗಿತ್ತು. ಪರೀಕ್ಷೆ ಮಾಡಿಸಿಕೊಂಡು ಪಾಸಿಟಿವ್ ಬಂದರೆ ಎಲ್ಲಿ ಇರೋದು, ಬೆಡ್, ವೆಂಟಿಲೇಟರ್, ಆಕ್ಸಿಜನ್ ಸಿಗುತ್ತಿಲ್ಲ. ಮುಂದೆ ಏನು ಎಂಬ ಚಿಂತೆಯಲ್ಲಿ ಪರಮೇಶ್ ಇದ್ದರು ಎಂದು ಅವರ ಆಪ್ತರು ತಿಳಿಸಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಗೆ ಅರೆಕಾಲಿಕ ವರದಿಗಾರರಾಗಿ ಕೆಲಸ ಮಾಡುತ್ತಿದ್ದ ಪರಮೇಶ್ ಅವರಿಗೆ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳಿದ್ದರು.

ಸಿಎಂ ಬಿಎಸ್‌ವೈ ವಿರುದ್ಧ ಹೆಚ್. ವಿಶ್ವನಾಥ್ ವಾಗ್ದಾಳಿ

ಮೈಸೂರು, ಮೇ ೫: ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ಸೋತಿದೆ. ನಿಮಗೆ ಕಣ್ಣು ಕಾಣಲ್ಲ, ಕಿವಿ ಕೇಳಿಸಲ್ಲ, ಪ್ರಸೆನ್ಸ್ ಆಫ್ ಮೈಂಡ್ ಇಲ್ಲ. ನಿಮ್ಮನ್ನ ಕಟ್ಟಿಕೊಂಡು ನಾವೇನ್ ಮಾಡೋಣ.? ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಬಿಜೆಪಿ ಎಂಎಲ್‌ಸಿ ಹೆಚ್. ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ಇಂದು ಮಾತನಾಡಿದ ಅವರು, ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ಸೋತಿದೆ. ಮುಖ್ಯಮಂತ್ರಿಯೂ ಸರಿ ಇಲ್ಲ. ಮುಖ್ಯಮಂತ್ರಿ ಬಳಿ ಹೋಯ್ತು ಅಂದ್ರೆ ಆ ಖಾತೆ ಸತ್ತು ಹೋಯ್ತು ಅಂತ ಅರ್ಥ. ನೀವೇ ಬಿಬಿಎಂಪಿ ಸಚಿವರಾಗಿದ್ದೀರಿ. ರಾಜಧಾನಿ ಬೆಂಗಳೂರು ಕೋವಿಡ್‌ನಿಂದ ತತ್ತರಿಸಿ ಹೋಗುತ್ತಿದೆ. ನೀವು ಎಂದಾದರೂ ಆಚೆ ಬಂದು ನೋಡಿದ್ದೀರಾ.? ಬಿಬಿಎಂಪಿಗೆ ಹೋಗಿ ಸಭೆ ಮಾಡಿದ್ದೀರಾ? ಇಂಧನ ನಿಮ್ಮ ಬಳಿಯೇ ಇದೆ, ಡಿಪಿಆರ್ ನಿಮ್ಮ ಬಳಿಯೇ ಇದೆ. ಎಲ್ಲ ಖಾತೆಯನ್ನೂ ಇಟ್ಟುಕೊಂಡು ಏನು ಮಾಡುತ್ತಿದ್ದೀರಿ.? ಎಂದು ಪ್ರಶ್ನಿಸಿದರು. ಸರ್ಕಾರಿ ಆಸ್ಪತ್ರೆಯನ್ನ ಸರಿಯಾಗಿ ಬಳಕೆ ಮಾಡಿಕೊಂಡ್ರೆ. ಖಾಸಗಿ ಆಸ್ಪತ್ರೆಗೆ ಜನರು ಯಾಕೆ ಹೋಗ್ತಾರೆ.? ಜನರನ್ನ ತೆಗೆದುಕೊಂಡು ಹೋಗಿ ಬೇರೆ ಆಸ್ಪತ್ರೆಯಲ್ಲಿ ಮಲಗಿಸ್ತಾ ಇದ್ದಾರೆ.ಆರೋಗ್ಯ ಇಲಾಖೆ ಫೇಲ್ಯುರ್ ಅಲ್ಲ’ ಇಡೀ ಸರ್ಕಾರವೇ ಫೆಲ್ಯುರ್. ಮೊದಲು ಇಡೀ ದೇಶವನ್ನೇ ಲಾಕ್‌ಡೌನ್ ಮಾಡಬೇಕು. ಕನಿಷ್ಟ ಪಕ್ಷ ೧೫ ದಿನದ ಮಟ್ಟಿಗಾದ್ರು ಲಾಕ್‌ಡೌನ್ ಮಾಡಬೇಕು. ಶಾಸಕರ, ಸಚಿವರ ಗಾರ್ಮೆಂಟ್ಸ್ ಇದೆ. ಹಾಗಾಗಿ ಇವರು ಲಾಕ್‌ಡೌನ್ ಮಾಡೋದಕ್ಕೆ ಹಿಂದೇಟು ಹಾಕಿದ್ದಾರೆ. ಆದರೆ ಈಗ ಕೊರೊನಾ ದಂಧೆ ಆಗ್ತಿದೆ ಎಂದು ಸ್ವಪಕ್ಷದ ವಿರುದ್ಧವೇ ಹೆಚ್. ವಿಶ್ವನಾಥ್ ಆಕ್ರೋಶ ಹೊರಹಾಕಿದರು.

ರಾಜ್ಯದಲ್ಲಿ ೫೦,೧೧೨ ಮಂದಿಗೆ ಪಾಸಿಟಿವ್; ಬೆಂಗಳೂರಿನಲ್ಲಿ ೧೬೧ ಸೇರಿ ೩೪೬ ಮಂದಿ ಸಾವು

ಬೆಂಗಳೂರು, ಮೇ ೫: ರಾಜ್ಯದಲ್ಲಿ ಕೊರೊನಾ ಮರಣ ಮೃದಂಗ ಮುಂದುವರೆದಿದ್ದು, ಮಹಾಮಾರಿಗೆ ಬುಧವಾರ ಒಂದೇ ದಿನ ಬರೋಬ್ಬರಿ ೩೪೬ ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ ೧೬೮೮೪ಕ್ಕೆ ಏರಿಕೆಯಾಗಿದೆ. ಇನ್ನು ಕಳೆದ ೨೪ ಗಂಟೆಯಲ್ಲಿ ರಾಜ್ಯದಲ್ಲಿ ೫೦,೧೧೨ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ ೧೭,೪೧,೦೪೬ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಬೆಂಗಳೂರಿನಲ್ಲಿ ಇಂದು ೨೩,೧೦೬ ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ ೮.೬೩,೩೮೦ಕ್ಕೆ ಏರಿಕೆಯಾಗಿದೆ. ಇನ್ನು ನಗರದಲ್ಲಿ ಸೋಂಕಿಗೆ ೧೬೧ ಮಂದಿ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಇಂದು ೨೬೮೪೧ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿAದ ಚೇತರಿಸಿಕೊಂಡವರ ಸಂಖ್ಯೆ ೧೨,೩೬೮೫೪ಕ್ಕೆ ಏರಿಕೆಯಾಗಿದೆ. ಇನ್ನು ೪,೮೭,೨೮೮ ಸಕ್ರೀಯ ಪ್ರಕರಣಗಳಿವೆ.