(ವಿಶೇಷ ವರದಿ: ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಮೇ ೫: ಪೊನ್ನಂಪೇಟೆ ಶ್ರೀ ರಾಮಕೃಷ್ಣ ಆಶ್ರಮದಲ್ಲಿ ಕಳೆದ ೧೪ ವರ್ಷಗಳಿಂದ ಸುದೀರ್ಘ ಸೇವೆ ಸಲ್ಲಿಸಿ, ಪೊನ್ನಂಪೇಟೆಯಲ್ಲಿ ಶ್ರೀ ರಾಮಕೃಷ್ಣರ ಭವ್ಯಮಂದಿರ ನಿರ್ಮಾಣ ಕಾರ್ಯ ದಲ್ಲಿ ಕಾರಣಿಭೂತರಾದ ಪರಮ ಪೂಜ್ಯ ಶ್ರೀ ಜಗದಾತ್ಮನಂದಾಜೀ ಮಹಾರಾಜ್ ರವರಿಗೆ ಸಹಾಯಕ ರಾಗಿ ನಂತರ ಆಶ್ರಮದ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡ ಬೋಧಸ್ವರೂಪನಂದ ಸ್ವಾಮೀಜಿ ತಾ. ೧೪ ರಂದು ಪೊನ್ನಂಪೇಟೆ ಆಶ್ರಮದಿಂದ ವರ್ಗಾವಣೆಗೊಂಡು ತುರುವೆಕೆರೆ ತಾಲೂಕು ಮಾದಿಹಳ್ಳಿಯ ಬಿದಿರಿಕ ಆಶ್ರಮದ ರಾಮಕೃಷ್ಣ ಮಠದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವ ಹಲವು ಮಹತ್ವದ ಕಾರ್ಯಗಳನ್ನು ನಿರ್ವಹಿಸಿದ ಇವರು ‘ಸ್ನೇಹಜೀವಿ’ ಸ್ವಾಮೀಜಿ ಎಂದೇ ಜಿಲ್ಲೆಯಲ್ಲಿ ಖ್ಯಾತಿ ಪಡೆದಿದ್ದರು. ಕೊಲ್ಕತ್ತಾದ ಕೇಂದ್ರ ಸ್ಥಾನ ಶ್ರೀ ರಾಮಕೃಷ್ಣ ಆಶ್ರಮದಲ್ಲಿ ೧೭ ವರ್ಷಗಳ ಸೇವೆ ಸಲ್ಲಿಸಿದ್ದ ಇವರ ಸೇವಾ ಕಾರ್ಯವನ್ನು ಅತಿ ಸೂಕ್ಷö್ಮವಾಗಿ ಗಮನಿಸಿದ್ದ ಆಗಿನ ಪೊನ್ನಂಪೇಟೆ ಸ್ವಾಮೀಜಿ ಶ್ರೀ ಜಗದಾತ್ಮನಂದಾಜೀ ಮಹಾರಾಜ್‌ರವರು ತನಗೊಬ್ಬ ಉತ್ತಮ ಸಹಾಯಕ ಬೇಕೆಂದು ಕೇಂದ್ರ ಸ್ಥಾನದ ಸಹಾಯಕ ಹಿರಿಯ ಸ್ವಾಮೀಜಿಗಳಿಗೆ ತಿಳಿಸಿದ್ದರು.

ಇದರಿಂದಾಗಿ ಬೋಧಸ್ವರೂಪ ನಂದ ಸ್ವಾಮೀಜಿಯವರನ್ನು ೨೦೦೭ ಮಾರ್ಚ್ ೨೪ ರಂದು ಪೊನ್ನಂಪೇಟೆಯ ಆಶ್ರಮಕ್ಕೆ ಕೊಲ್ಕತ್ತಾದಿಂದ ಕಳುಹಿಸಿ ಕೊಟ್ಟರು. ಪೊನ್ನಂಪೇಟೆಗೆ ಆಗಮಿಸಿದ ಬೋಧಸ್ವರೂಪನಂದ ಸ್ವಾಮೀಜಿ ಯವರು ಇಲ್ಲಿನ ಹಿರಿಯ ಸ್ವಾಮೀಜಿ ಜಗದಾತ್ಮನಂದಜೀ ಮಹಾರಾಜ್ ಅವರೊಂದಿಗೆ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅಲ್ಲದೆ ಹಿರಿಯ ಸ್ವಾಮೀಜಿಯ ಮಾರ್ಗ ದರ್ಶನದಲ್ಲಿ ತಮ್ಮ ಸೇವಾ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಸ್ವಾಮೀಜಿಯ ಪ್ರಶಂಸೆಗೆ ಪಾತ್ರರಾದರು.

೨೦೦೭ ಡಿಸೆಂಬರ್‌ನಲ್ಲಿ ಜಗದಾತ್ಮ ನಂದಾಜೀ ಮಹಾರಾಜ್‌ರವರು ಕ್ಯಾನ್ಸರ್ ಕಾಯಿಲೆಯಿಂದ ಆಸ್ಪತ್ರೆ ಸೇರಿದ ತರುವಾಯ ಇವರ ಸೇವೆಯಲ್ಲಿ ತೊಡಗಿಸಿಕೊಂಡರು. ದೇವಾಲಯ ಕನಸು ಕಂಡಿದ್ದ ಹಿರಿಯ ಸ್ವಾಮೀಜಿಯ ಕನಸು ನನಸು ಮಾಡಲು ತಯಾರಿ ನಡೆಸಿದರು.

ಸಾಧು, ಬ್ರಹ್ಮಚಾರಿಗಳ ಸಹಯೋಗದೊಂದಿಗೆ ದೇವಾಲಯ ನಿರ್ಮಾಣಕ್ಕೆ ಬೇಕಾದ ಮೂರು ಕೋಟಿ ಹಣವನ್ನು ಕ್ರೋಢೀಕರಿಸುವ ಮಹತ್ವದ ಪಾತ್ರವನ್ನು ನಿರ್ವಹಿಸಿದರು. ಹಿರಿಯ ಸ್ವಾಮೀಜಿಗಳ ಕನಸು ನನಸು ಮಾಡುವ ನಿಟ್ಟಿನಲ್ಲಿ ಹಗಲು ರಾತ್ರಿ ಎನ್ನದೆ ದುಡಿದರು. ೨೦ ತಿಂಗಳಿನಲ್ಲಿ ದೇವಾಲಯದ ಕೆಲಸ ಮುಗಿಸಿ, ಒಂದು ತಿಂಗಳು ಜಿಲ್ಲೆಯಾದ್ಯಂತ ಸಾಧು, ಬ್ರಹ್ಮಚಾರಿ ಸಹಯೋಗ ದೊಂದಿಗೆ ರಥಯಾತ್ರೆ ನಡೆಸಿ, ೨೦೦೯ ಅಕ್ಟೋಬರ್ ೨೭ ರಂದು ನೂರಾರು ಸ್ವಾಮೀಜಿಗಳ ಹಾಗೂ ಜಗದಾತ್ಮನಂದಾಜೀ ಮಹಾರಾಜ್ ನೇತೃತ್ವದಲ್ಲಿ ದೇವಾಲಯ ಉದ್ಘಾಟನೆ ಮಾಡುವಲ್ಲಿ ಯಶಸ್ವಿಯಾದರು.

೨೦೧೦ರಲ್ಲಿ ಜಗದಾತ್ಮನಂದಾಜೀ ಮಹಾರಾಜ್‌ರವರು ತಮ್ಮ ೮೦ನೇ ವಯಸ್ಸಿನಲ್ಲಿ ವಾರ್ಧಕ್ಯ ದೆಸೆಯಿಂದಾಗಿ ಆಶ್ರಮದ ಹುದ್ದೆಯಿಂದ ನಿವೃತ್ತಿ ಬಯಸಿದರು. ತೆರವಾದ ಸ್ಥಾನಕ್ಕೆ ಬೋಧಸ್ವರೂಪನಂದ ಸ್ವಾಮೀಜಿ ಯವರಿಗೆ ಬೇಲೂರು ಮಠದ ಹಿರಿಯ ಸ್ವಾಮೀಜಿಗಳು ಪೊನ್ನಂಪೇಟೆ ಆಶ್ರಮದ ಜವಾಬ್ದಾರಿ ನೀಡಿದರು. ೨೦೧೦ ಡಿಸೆಂಬರ್ ೨೭ ರಂದು ಶಾರದ ಮಾತೆಯ ಜನ್ಮದಿನದಂದು ಬೋಧ ಸ್ವರೂಪನಂದ ಸ್ವಾಮೀಜಿಯವರು ಇಲ್ಲಿನ ಜವಾಬ್ದಾರಿ ವಹಿಸಿಕೊಂಡರು. ಆಸ್ಪತ್ರೆಯ ನವೀಕರಣ, ಅಧುನಿಕ ಉಪಕರಣ, ಲ್ಯಾಬೋರೇಟರಿ, ಸ್ವಾಮಿ ವಿವೇಕಾನಂದರ ಸಾಂಸ್ಕೃತಿಕ ಕೇಂದ್ರ, ಅಧ್ಯಯನ ಕೊಠಡಿ, ಗ್ರಂಥಾಲಯ, ಕಂಪ್ಯೂಟರ್ ಕೇಂದ್ರ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯ ನಡೆಸಲು ಮುಂದಾದರು. ಕೋಟ್ಯಂತರ ಹಣವನ್ನು ದಾನಿಗಳಿಂದ ಕ್ರೋಢೀಕರಿಸಿ ಇವುಗಳ ಕಾರ್ಯ ನೆರವೇರಿಸಿ ಯಶಸ್ವಿಯಾದರು.

೨೦೧೧ ರಿಂದ ೨೦೧೪ ರವರೆಗೆ ಸ್ವಾಮಿ ವಿವೇಕಾನಂದರ ಜನ್ಮ ದಿನದ ಅಂಗವಾಗಿ, ಸಾಕಷ್ಟು ಸೇವಾ ಕಾರ್ಯವನ್ನು ಜಿಲ್ಲೆಯ ಉದ್ದಗಲಕ್ಕೂ ಮಾಡಿದರು. ಪ್ರಮುಖವಾಗಿ ಶಾಲಾ ಮಕ್ಕಳಿಗೆ ಉತ್ತಮ ತರಬೆೆÃತಿ, ಪೌಷ್ಟಿಕ ಆಹಾರ, ಹಾಲು, ಸಮವಸ್ತç, ಶೌಚಾಲಯ ನಿರ್ಮಾಣ, ಟೈಲರಿಂಗ್ ತರಬೆÉÃತಿ ಹಾಗೂ ಹೊಲಿಗೆ ಯಂತ್ರ ವಿತರಣೆ, ಶೌಚಾಲಯ ನಿರ್ಮಾಣಕ್ಕೆ ಪರಿಶಿಷ್ಟ ವರ್ಗದ ಜನಾಂಗಕ್ಕೆ ತಲಾ ೫೦೦೦ ಧನ ಸಹಾಯ, ಕೃಷ್ಣ ಕಾಲೋನಿ ದತ್ತು ಪಡೆದು ಅಲ್ಲಿನ ಕುಡಿಯುವ ನೀರು, ಶೌಚಾಲಯ ನಿರ್ಮಾಣ, ಗಡಿ ಪ್ರದೇಶ ಪ್ರಾಧಿಕಾರದ ಸಹಯೋಗದೊಂದಿಗೆ ರೇಷ್ಮೆಹಡ್ಲು ವಿನಲ್ಲಿ ೧೪ ಲಕ್ಷ ವಿನಿಯೋಗಿಸಿ ವಿವೇಕಾನಂದ ಸಾಂಸ್ಕೃತಿಕ ಭವನ ನಿರ್ಮಾಣ, ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಲೇಖನಿ ಸಾಮಾಗ್ರಿಗಳ ವಿತರಣೆ, ಸಾವಿರಾರು ಸಂಖ್ಯೆಯಲ್ಲಿ ಬಡವರಿಗೆ ಕಂಬಳಿ ವಿತರಣೆ, ಪ್ರಸ್ತುತ ವರ್ಷಗಳಲ್ಲಿ ೧೨೮ ವಿದ್ಯಾರ್ಥಿಗಳಿಗೆ ೩.೯೯ ಲಕ್ಷ ವಿದ್ಯಾರ್ಥಿ ವೇತನ ಸೇರಿದಂತೆ ಅನೇಕ ಬಹುಪಯೋಗಿ ಮಾಡುವ ಮೂಲಕ ಜನಮಾನಸದಲ್ಲಿ ಸ್ವಾಮೀಜಿ ಉಳಿದಿದ್ದಾರೆ.ಪ್ರಕೃತಿ ವಿಕೋಪದಲ್ಲಿ ಸಿಲುಕಿದ ಅದೆಷ್ಟೋ ಕುಟುಂಬಗಳು ಕಷ್ಟದಲ್ಲಿ ಸಿಲುಕಿದಾಗ ಅಂತಹ ಸಂದರ್ಭದಲ್ಲಿ ಆ ಕುಟುಂಬದ ಸಹಾಯಕ್ಕೆ ನಿಲ್ಲುವ ಮೂಲಕ ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ಸೂರ್ಲಬ್ಬಿ, ಮಾದಾಪುರ ಹಾಗೂ ಪೊನ್ನಂಪೇಟೆಗಳಲ್ಲಿ ಟೈಲರಿಂಗ್ ತರಬೇತಿ ನೀಡುವ ಮೂಲಕ ಅವರಿಗೆ ಹೊಲಿಗೆ ಯಂತ್ರಗಳನ್ನು ಒದಗಿಸಿದರು. ಅರಣ್ಯ ಕಾಲೇಜಿನ ಸಹಯೋಗದಲ್ಲಿ ಜೇನು ಪೆಟ್ಟಿಗೆ ವಿತರಣೆ ಮಾಡುವ ಮೂಲಕ ಅನೇಕ ಕುಟುಂಬಗಳನ್ನು ಸ್ವಾವಲಂಬನೆಯತ್ತ ಕೊಂಡೊಯ್ದರು. ಮಾದಾಪುರದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ೩೩ ಲಕ್ಷದ ವೆಚ್ಚದಲ್ಲಿ ಸ್ವಾಮಿ ವಿವೇಕಾನಂದರ ಸಾಂಸ್ಕೃತಿಕ ಸೇವಾ ಮಂದಿರ ನಿರ್ಮಾಣ ಮಾಡಲಾಗಿದೆ.