ಮಡಿಕೇರಿ,ಮೇ ೫: ಪ್ರಸ್ತುತ ಕೋವಿಡ್೧೯ ಕರ್ಫ್ಯೂ ಜಾರಿಯಲ್ಲಿದ್ದು, ಈ ಅವಧಿಯಲ್ಲಿ ಅನೌಪಚಾರಿಕ ಹಣಕಾಸು ಸಂಸ್ಥೆಗಳು ಸಾರ್ವಜನಿಕರಿಂದ ಬಲವಂತವಾಗಿ ಸಾಲ ಮತ್ತು ಬಡ್ಡಿ ವಸೂಲಿ ಮಾಡುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳು ಸಹಕಾರ ಸಂಘಗಳ ಉಪನಿಬಂಧಕರಿಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೋವಿಡ್ ೧೯ ಕರ್ಫ್ಯೂ ಸಂದಿಗ್ಧ ಪರಿಸ್ಥಿತಿಯಲ್ಲಿ ಎಲ್ಲ ಅನೌಪಚಾರಿಕ ಹಣಕಾಸು ಸಂಸ್ಥೆಗಳು, ಲೇವಾದೇವಿ, ಗಿರವಿ, ಹಣಕಾಸು ಸಂಸ್ಥೆಗಳು ಸಾರ್ವಜನಿಕ ರಿಂದ ಬಲವಂತವಾಗಿ ಸಾಲ ಹಾಗೂ ಬಡ್ಡಿಯನ್ನು ವಸೂಲಿ ಮಾಡದಿರುವಂತೆ ಸಹಕಾರ ಸಂಘಗಳ ಉಪನಿಬಂಧಕರು ಸೂಚನೆ ನೀಡಿದ್ದಾರೆ. ಈ ಬಗ್ಗೆ ದೂರುಗಳು ಬಂದಲ್ಲಿ ನಿಯಮಾನು ಸಾರ ಕ್ರಮ ಕೈಗೊಳ್ಳುವದಾಗಿ ಎಚ್ಚರಿಕೆ ನೀಡಿದ್ದಾರೆ.