ಮಡಿಕೇರಿ, ಮೇ ೪: ಕೇಂದ್ರ ಸರ್ಕಾರದ ಪಿಎಂಜಿಕೆಎವೈ ಯೋಜನೆಯಡಿ ಮೇ ಮತ್ತು ಜೂನ್ ತಿಂಗಳಲ್ಲಿ ಬಿಪಿಎಲ್ (ಆದ್ಯತಾ) ಪಡಿತರ ಚೀಟಿ ಕುಟುಂಬದ ಪ್ರತೀ ಸದಸ್ಯರಿಗೆ ೫ ಕೆ.ಜಿ ಹಾಗೂ ರಾಜ್ಯದ ಎನ್‌ಎಫ್‌ಎಸ್‌ಎ ಯೋಜನೆಯಡಿ ೫ ಕೆ.ಜಿ ಅಕ್ಕಿ ಒಟ್ಟು ೧೦ ಕೆ.ಜಿ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುವುದು. ಮತ್ತು ಪ್ರತೀ ಪಡಿತರ ಚೀಟಿಗೆ ೦೨ ಕೆ.ಜಿ ಗೋಧಿಯನ್ನು ಸಹ ಉಚಿತವಾಗಿ ವಿತರಿಸಲಾಗುವುದು ಎಂದು ಆಹಾರ ಇಲಾಖೆಯ ಉಪ ನಿರ್ದೇಶಕ ಗೌರವ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಎಎವೈ (ಆದ್ಯತಾ) ಪಡಿತರ ಚೀಟಿದಾರರಿಗೆ ಪಿಎಂಜಿಕೆಎವೈ ಯೋಜನೆಯಡಿ ಮೇ ಮತ್ತು ಜೂನ್-೨೦೨೧ ರ ಮಾಹೆಯಲ್ಲಿ ಪಡಿತರ ಚೀಟಿ ಕುಟುಂಬದ ಪ್ರತೀ ಸದಸ್ಯರಿಗೆ ೫ ಕೆ.ಜಿ ಹಾಗೂ ರಾಜ್ಯದ ಎನ್‌ಎಫ್‌ಎಸ್‌ಎ ಯೋಜನೆಯಡಿ ಪ್ರತೀ ಪಡಿತರ ಚೀಟಿಗೆ ೩೫ ಕೆ.ಜಿ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ದತ್ತಾಂಶದಲ್ಲಿ ಪಡಿತರ ಪಡೆಯಲು ನೋಂದಾಯಿಸಿಕೊAಡAತಹ ಎಪಿಎಲ್ ಪಡಿತರ ಚೀಟಿದಾರರ ಒಬ್ಬ ಸದಸ್ಯರುಳ್ಳ ಪಡಿತರ ಚೀಟಿದಾರರಿಗೆ ೫ ಕೆ.ಜಿ ಹಾಗೂ ಒಂದಕ್ಕಿAತ ಹೆಚ್ಚಿನ ಸದಸ್ಯರುಳ್ಳ ಪಡಿತರ ಚೀಟಿದಾರರಿಗೆ ೧೦ ಕೆ.ಜಿ ಅಕ್ಕಿಯನ್ನು ಪ್ರತೀ ಕೆ.ಜಿಗೆ ರೂ ೧೫ ರಂತೆ ಪಡೆದು ವಿತರಿಸಲಾಗುವುದು.

ಕೋವಿಡ್-೧೯ ವೈರಸ್ ಹರಡುವ ಭೀತಿ ಇರುವುದರಿಂದ ಜಿಲ್ಲೆಯ ಆದ್ಯತಾ (ಬಿಪಿಎಲ್ ಮತ್ತು ಎಎವೈ) ಪಡಿತರ ಚೀಟಿಗಳ ಕುಟುಂಬದ ಸದಸ್ಯರುಗಳು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗೆ ತೆರಳಿ ಕೋವಿಡ್ ಮಾರ್ಗಸೂಚಿಯಂತೆ ನಿಗಧಿತ ಅವಧಿಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ನೂಕು ನುಗ್ಗಲಿಗೆ ಅವಕಾಶ ನೀಡದೆ ಪಡಿತರ ಆಹಾರ ಧಾನ್ಯಗಳನ್ನು ಪಡೆದುಕೊಳ್ಳುವಂತೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪ ನಿರ್ದೇಶಕರು ಕೋರಿದ್ದಾರೆ.