*ಗೋಣಿಕೊಪ್ಪ, ಮೇ ೩: ವೈದ್ಯರು ಚಿಕಿತ್ಸೆ ನೀಡಲು ವಿಳಂಬ ಮಾಡಿದರು ಎಂಬ ಕಾರಣಕ್ಕೆ ವೈದ್ಯರ ಮೇಲೆ ಮೂವರು ಯುವಕರು ಹಲ್ಲೆ ನಡೆಸಿದ ಘಟನೆ ತಿತಿಮತಿ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಹಲ್ಲೆ ಸಂದರ್ಭ ವೈದ್ಯ ಹೊಸಮನಿ(೭೦) ಅವರ ಕೈಗಳಿಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೋಮವಾರ ಮಧ್ಯಾಹ್ನ ತಿತಿಮತಿ ನಿವಾಸಿಗಳಾದ ಶಮೀರ್ (೨೬), ಸೈಯದ್ ಅಲಿ (೪೧), ಫೈರೋಜ್ (೨೪) ಇವರುಗಳು ತಮ್ಮ ಸಹೋದರಿ ಶಾಹಿರಾಬಾನು ಎಂಬವರನ್ನು ತಿತಿಮತಿ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕರೆದುಕೊಂಡು ಬಂದಿದ್ದರು. ಈ ಸಂದರ್ಭ ಶಾಹಿರಾಬಾನು ಅವರನ್ನು ವೈದ್ಯರು ಚಿಕಿತ್ಸೆ ನೀಡಲು ವಿಳಂಬ ಮಾಡಿದ್ದಾರೆ ಎಂದು ಶಾಹಿರಾಬಾನು ಅವರ ಸಹೋದರರಾದ ಶಮೀರ್, ಸೈಯದ್ ಅಲಿ, ಫೈರೋಜ್ ಇವರುಗಳು ಡಾ. ಹೊಸಮನಿ ಅವರನ್ನು ಪ್ರಶ್ನಿಸಿ ವೈದ್ಯರನ್ನು ವಿನಾ ಕಾರಣ ನಿಂದಿಸಿದರು.

ಈ ಘಟನೆ ಉದ್ವಿಗ್ನ ವಾತಾವರಣಕ್ಕೆ ಕಾರಣವಾಗಿ ಯುವಕರು ಮತ್ತು ಆರೋಗ್ಯ ಕೇಂದ್ರ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಸಂಯಮ ಕಳೆದುಕೊಂಡ ಯುವಕರು ವೈದ್ಯರನ್ನು ತಳ್ಳಿದ್ದಾರೆ. ವೈದ್ಯರು ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಪರಿಣಾಮ ಕೈ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದೆ. ಘಟನೆಯ ಬಗ್ಗೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಯುವಕರ ವಿರುದ್ಧ ದೂರು ದಾಖಲಾಗಿದೆ ಎಂದು ಠಾಣಾಧಿಕಾರಿ ಸುಬ್ಬಯ್ಯ ಅವರು ಮಾಹಿತಿ ನೀಡಿದ್ದಾರೆ. ಬಳಿಕ ಮೂವರು ಆರೋಪಿಗಳನ್ನು ಬಂಧಿಸಲಾಯಿತು.