ಸೋಮವಾರಪೇಟೆ, ಮೇ ೩: ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಓರ್ವ ವೈದ್ಯರೂ ಸೇರಿದಂತೆ ಒಟ್ಟು ೬ ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಪರೀಕ್ಷೆ ವೇಳೆ ದೃಢಪಟ್ಟಿದೆ.

ಕೊರೊನಾ ವಾರಿಯರ್ಸ್ಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ, ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಆರೋಗ್ಯ ಇಲಾಖಾ ಸಿಬ್ಬಂದಿಗಳಿಗೂ ಸೋಂಕು ತಗುಲಿರು ವುದು ಆತಂಕಕ್ಕೆ ಕಾರಣವಾಗಿದೆ.

ಆಸ್ಪತ್ರೆಯ ಓರ್ವ ವೈದ್ಯರು, ನಾಲ್ವರು ಶುಶ್ರೂಷಕಿಯರು ಹಾಗೂ ಓರ್ವ ಕಂಪ್ಯೂಟರ್ ಆಪರೇಟರ್‌ಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ಓರ್ವ ವೈದ್ಯರಲ್ಲೂ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ತಾಲೂಕಿನ ೨೧ ಶಿಕ್ಷಕರಿಗೂ ಸೋಂಕು ತಗುಲಿದೆ.

ಇತ್ತೀಚಿನ ದಿನಗಳಲ್ಲಿ ಸೋಮವಾರಪೇಟೆ ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಪ್ರಮಾಣದ ಏರಿಕೆ ಕಂಡುಬರುತ್ತಿದ್ದು, ಕಳೆದ ಮೂರು ದಿನಗಳಲ್ಲೇ ೫೩೦ ಮಂದಿಗೆ ಸೋಂಕು ದೃಢಪಟ್ಟಿದೆ. ಜನವರಿಯಿಂದ ಇಲ್ಲಿಯವರೆಗೆ ೧೪ ಮಂದಿ ಕೊರೊನಾಕ್ಕೆ ಬಲಿಯಾಗಿದ್ದಾರೆ. ತಾಲೂಕಿನಲ್ಲಿ ಸದ್ಯಕ್ಕೆ ೧೪೦೦ ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ.

ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸದ್ಯಕ್ಕೆ ೮೯ ಸಕ್ರಿಯ ಪ್ರಕರಣಗಳಿವೆ. ೩೪ ಕಂಟೈನ್‌ಮೆAಟ್ ಜೋನ್ ತೆರೆಯಲಾಗಿದ್ದು, ಹೊರ ಜಿಲ್ಲೆಯಿಂದ ಬಂದಿರುವ ೨೮ ಮಂದಿಯನ್ನು ಗುರುತಿಸಿ ಕ್ವಾರಂಟೈನ್ ಮಾಡಲು ಕ್ರಮ ವಹಿಸಲಾಗಿದೆ.

ಸೋಮವಾರಪೇಟೆ ಪ.ಪಂ. ವ್ಯಾಪ್ತಿಯಲ್ಲಿ ೬೦ ಸಕ್ರಿಯ ಪ್ರಕರಣಗಳಿದ್ದು, ೪೫ ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ. ವಾರ್ಡ್ವಾರು ಸಮಿತಿಗಳನ್ನು ರಚಿಸಿ ಹೊರಭಾಗದಿಂದ ಆಗಮಿಸಿರುವವರ ಪತ್ತೆಗಾಗಿ ಮನೆ ಮನೆ ಸಮೀಕ್ಷೆ ನಡೆಯುತ್ತಿದೆ. ಸೀಲ್‌ಡೌನ್ ಪ್ರದೇಶವನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದೆ.

ಪಟ್ಟಣದ ಮಹಿಳಾ ಸಮಾಜದಲ್ಲಿ ಸ್ವಾö್ಯಬ್ ಟೆಸ್ಟ್ ಮತ್ತು ಹೋಮಿಯೋಪತಿ ಆಸ್ಪತ್ರೆಯನ್ನು ಲಸಿಕೆ ನೀಡುವ ಕೇಂದ್ರವಾಗಿ ಪರಿವರ್ತಿಸಲಾಗಿದ್ದು, ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಂದು ವಿಭಾಗವನ್ನು ಕೋವಿಡ್ ಹೆಲ್ತ್ಕೇರ್ ಸೆಂಟರ್‌ಗೆ ಮೀಸಲಿಡಲಾಗಿದೆ.

ಆತ್ಮವಿಶ್ವಾಸದಿಂದ ಸೇವೆ: ಮತ್ತೊಂದು ವಿಭಾಗದಲ್ಲಿ ತುರ್ತು ಚಿಕಿತ್ಸೆ ಮತ್ತು ಹೆರಿಗೆ ಘಟಕ ತೆರೆಯಲಾಗಿದ್ದು, ಆಸ್ಪತ್ರೆಯ ವೈದ್ಯರು, ಶುಶ್ರೂಷಕಿಯರು, ಸಿಬ್ಬಂದಿಗಳು ತಮ್ಮ ಶಕ್ತಿ ಮೀರಿ ಸಾರ್ವಜನಿಕರಿಗೆ ಸೇವೆ ಒದಗಿಸುತ್ತಿದ್ದಾರೆ. ಕೆಲಸದ ಅವಧಿಯನ್ನೂ ಲೆಕ್ಕಿಸದೇ ಸೇವೆ ಸಲ್ಲಿಸುತ್ತಿರುವ ಆಸ್ಪತ್ರೆಯ ಕೊರೊನಾ ವಾರಿಯರ್ಸ್ಗಳು ಸ್ಯಾನಿಟೈಸರ್ ಹೆಚ್ಚು ಬಳಸುತ್ತಿರುವದರಿಂದ ಕೈಗಳು ಉರಿಯಲಾರಂಭಿಸಿವೆ.

‘ಕಳೆದ ಒಂದು ವರ್ಷದಿಂದಲೂ ಕೊರೊನಾ ಸಂಬAಧಿತ ಸೇವೆ ಸಲ್ಲಿಸುತ್ತಿರುವ ನಾವು ಪ್ರತಿದಿನ ಹೆಚ್ಚು ಸ್ಯಾನಿಟೈಸರ್ ಬಳಸುತ್ತಿರುವುದರಿಂದ ಕೈಗಳ ಚರ್ಮ ಮೃದುವಾಗಿದೆ. ಕೈಯಿಂದ ಬಿಸಿ ಅನ್ನ ಮುಟ್ಟಲೂ ಸಹ ನಮಗೆ ಕಷ್ಟವಾಗುತ್ತಿದೆ. ಆದರೆ ಜನರು ಕೊರೊನಾ ವೈರಸ್‌ನ ಭೀಕರತೆಯನ್ನು ಅರಿಯುತ್ತಿಲ್ಲ. ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುತ್ತಿಲ್ಲ’ ಎಂದು ಆಸ್ಪತ್ರೆಯ ಶುಶ್ರೂಷಕಿ ಅನಿತಾ ವಿಷಾದಿಸುತ್ತಿದ್ದಾರೆ.

ಸರ್ಕಾರಿ ಆಸ್ಪತ್ರೆಯ ೬ ಮಂದಿಗೆ ಕೊರೊನಾ ಸೋಂಕು ದೃಢಪಟ್ಟರೂ ಯಾವುದೇ ಆತಂಕ, ಭಯವಿಲ್ಲದೇ ಉಳಿದ ವೈದ್ಯರು, ಶುಶ್ರೂಷಕಿಯರು, ಸಿಬ್ಬಂದಿಗಳು ಸಾರ್ವಜನಿಕ ಸೇವೆ ಸಲ್ಲಿಸುತ್ತಿದ್ದಾರೆ. ಎರಡನೇ ಅವಧಿಯ ಲಸಿಕೆ ನೀಡುವುದು, ಸಾಮಾನ್ಯ ರೋಗಿಗಳ ಆರೈಕೆ, ಮಕ್ಕಳು, ಮಹಿಳೆಯರು, ಗರ್ಭಿಣಿ, ಬಾಣಂತಿಯರ ಆರೋಗ್ಯ ಸೇವೆಯೊಂದಿಗೆ ಕೊರೊನಾ ಸೋಂಕಿತರ ಸೇವೆಯನ್ನೂ ಮಾಡುವ ಮೂಲಕ ನಿಜವಾದ ಕೊರೊನಾ ವಾರಿಯರ್ಸ್ಗಳಾಗಿದ್ದಾರೆ.

- ವಿಜಯ್ ಹಾನಗಲ್