ಮಡಿಕೇರಿಯಲ್ಲಿ ಅನೇಕ ವರ್ಷಗಳಿಂದ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ ಸೂರ್ಯಕುಮಾರ್ ಅವರ ಹೆಸರು ಕೇಳದವ ರಿಲ್ಲ. ತನ್ನ ವೃತ್ತಿಯಾಯಿತು, ತಾನಾಯಿತು ಎಂದು ಕಾರ್ಯನಿರ್ವಹಿಸುತ್ತಿರುವ ಡಾ. ಸೂರ್ಯಕುಮಾರ್ ಇದೀಗ ತಮ್ಮ ವೈದ್ಯಕೀಯ ಬದುಕಿನ ಕುರಿತು ಮೊಟ್ಟ ಮೊದಲ ಬಾರಿಗೆ “ವೈದ್ಯ ಕಂಡ ವಿಸ್ಮಯ” ಎಂಬ ಪುಸ್ತಕವನ್ನು ರಚಿಸಿದ್ದಾರೆ. ಅದನ್ನು ಓದುತ್ತಾ ಹೋದಂತೆ ಅವರ ಬಗ್ಗೆ ವಿಸ್ಮಯ ಮೂಡತೊಡಗಿತು. ಅವರು ಇಷ್ಟೊಂದು ಸಾಧನೆ ಮಾಡಿದರೂ ಎಂತಹ ಸರಳತೆ, ಶಾಂತ ವ್ಯಕ್ತಿತ್ವ ರೂಢಿಸಿಕೊಂಡಿದ್ದಾರೆನಿಸಿತು.

ಮಡಿಕೇರಿಯ ಜಿಲ್ಲಾ ಆಸ್ಪತ್ರ‍್ರೆಯಲ್ಲಿ ಸುಮಾರು ೧೮ ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದ ಸೂರ್ಯಕುಮಾರ್ ಹೊರ ರೋಗಿಗಳ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಮೂರು ಸಾರಿ ವರ್ಗಾವಣೆಯಾದರೂ ಅದನ್ನು ಜನರೇ ಹೋಗಿ ರದ್ದುಗೊಳಿಸಿಕೊಂಡು ಬರುತ್ತಿದ್ದರು. ಅಷ್ಟೊಂದು ಜನಪ್ರಿಯರಾಗಿದ್ದರು. ೧೯೯೦ರ ದಶಕದಲ್ಲಿ ವೈದ್ಯಕೀಯ ಕಾಲೇಜಿನಲ್ಲಿ ಬಿಟ್ಟರೆ ಇಡೀ ಕರ್ನಾಟಕದ ಆರೋಗ್ಯ ಇಲಾಖೆಯಲ್ಲಿ ಇದ್ದಂತಹ ಏಕೈಕ ವಿಧಿ ವಿಜ್ಞಾನ ತಜ್ಞರು ಇವರು. ಪೊಲೀಸ್ ಇಲಾಖೆಗೆ, ನ್ಯಾಯಾಂಗಕ್ಕೆ ಕಗ್ಗಂಟಾಗಿದ್ದ ಅಸ್ವಾಭಾವಿಕ ಸಾವು, ಆತ್ಮಹತ್ಯೆ, ಕೊಲೆ ಇಂತಹವುಗಳ ತನಿಖೆಯಲ್ಲಿ ಸಹಕರಿಸಿ ಕಗ್ಗಂಟಿನ ಪ್ರಕರಣಗಳನ್ನು ಭೇದಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಬೆಂಗಳೂರಿನಲ್ಲಿ ನಡೆದ ಗಂಗಾರಾಮ್ ಕಟ್ಟಡದ ಕುಸಿತ, ವೀನಸ್ ಸರ್ಕಸ್ ದುರಂತ, ಕಳ್ಳಭಟ್ಟಿ ದುರಂತಗಳ ಶವಗಳ ಸರಮಾಲೆಗಳನ್ನು ಸಹಾಯಕರೊಡನೆ ಶವ ಪರೀಕ್ಷೆ ನಡೆಸಿದ ಕೀರ್ತಿ ಇವರದು. ಒಂದೆಡೆ ಕೊಳೆತ ಶವ, ಇನೊಂದೆಡೆ ಅರೆಬೆಂದಶವ, ಮತ್ತೊಂದೆಡೆ ಕಳ್ಳಭಟ್ಟಿ (ರಾಸಾಯನಿಕ ಮಿಶ್ರಿತ) ವಾಸನೆಯ ಶವ, ಒಟ್ಟಿಗೆ ನೂರಾರು ಹೆಣಗಳು, ಇನ್ನೊಂದೆಡೆ ಸಾವಿರಾರು ಜನರ ಆಕ್ರಂದನ. ಇವುಗಳ ನಡುವೆ ಶವ ಪರೀಕ್ಷೆ ನಡೆಸಿದ ಇವರ ಸಾಧನೆ ನಿಜಕ್ಕೂ ಅಭಿನಂದನಾರ್ಹ.

ಸೂರ್ಯಕುಮಾರ್ ಅವರ ಹುಟ್ಟೂರು ಸೋಮವಾರಪೇಟೆ. ಇವರ ತಂದೆ ಬಾಲಕೃಷ್ಣ ಎರಡನೇ ಮಹಾಯುದ್ಧದಲ್ಲಿ ಭಾರತದ ವಾಯುಸೇನೆ ಯಲ್ಲಿದ್ದವರು. ನಂತರ ಕೊಡಗಿನ ಹಲವು ಕಡೆ ಅಧ್ಯಾಪಕರಾಗಿದ್ದವರು. ತಾಯಿ ನೀಲಮ್ಮ, ಕೊಡಗಿನ ಗೌಡ ಮಹಿಳೆಯರಲ್ಲಿ ಪ್ರಥಮ ಎಸ್.ಎಸ್. ಎಲ್.ಸಿ. ಪಾಸ್ ಮಾಡಿದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ನಂತರ ಅವರು ಕೂಡ ಕೊಡಗಿನ ಹಲವೆಡೆ ಅಧ್ಯಾಪಕಿಯಾಗಿ ಕಾರ್ಯ ನಿರ್ವಹಿಸಿದ್ದವರು. ಪೋಷಕರು ಅಧ್ಯಾಪಕರಾಗಿ ಕೊಡಗಿನ ವಿವಿಧ ಕಡೆ ಕಾರ್ಯ ನಿರ್ವಹಿಸುತ್ತಿದ್ದುದರಿಂದ ಇವರ ಬಾಲ್ಯವು ಭಾಗಮಂಡಲ, ಸಂಪಾಜೆ, ಮಡಿಕೇರಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ನಡೆಯಿತು. ನಂತರ ಪಿಯುಸಿಗೆ ಮಡಿಕೇರಿ ಸರ್ಕಾರಿ ಕಾಲೇಜಿಗೆ ಸೇರಿದರು. ಎಂ.ಬಿ.ಬಿ.ಎಸ್. ಪದವಿಯನ್ನು ಮೈಸೂರಿನ ಸರ್ಕಾರಿ ಕಾಲೇಜಿನಲ್ಲಿ ಪಡೆದರು. ಬೆಂಗಳೂರಿನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವಿಧಿ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ೧೯೭೫ರಿಂದ ವೈದ್ಯಕೀಯ ಸೇವೆ ಆರಂಭಿಸಿದ ಇವರು ೧೯೭೯ರಲ್ಲಿ ಸರ್ಕಾರಿ ಹುದ್ದೆಗೆ ಸೇರಿದರು. ವೀರಾಜಪೇಟೆ, ಸಂಪಾಜೆ, ಬೆಂಗಳೂರು ನಂತರ ೧೯೮೬ರಿಂದ ಮಡಿಕೇರಿಯಲ್ಲಿ ಸುಮಾರು ೧೮ ವರ್ಷ ವೈದ್ಯಕೀಯ ವಿಭಾಗ ಮತ್ತು ವಿಧಿವಿಜ್ಞಾನ ವಿಭಾಗದಲ್ಲಿ ಪರಿಣಿತರಾಗಿ ಕಾರ್ಯನಿರ್ವಹಿಸಿದ್ದಾರೆ. ಕೊನೆಗೆ ಸ್ವಯಂ ನಿವೃತ್ತಿ ಹೊಂದುವ ಸಮಯದಲ್ಲಿ ಪ್ರಭಾರ ಜಿಲ್ಲಾ ಶಸ್ತçಚಿಕಿತ್ಸಕರಾಗಿ ಕೆಲವು ತಿಂಗಳು ಕಾರ್ಯನಿರ್ವಹಿಸಿದರು. ಕೊಡಗು ಜಿಲ್ಲಾ ಸರ್ಕಾರಿ ವೈದ್ಯರ ಸಂಘದ ಅಧ್ಯಕ್ಷರೂ ಕೂಡ ಆಗಿದ್ದ ಇವರು ಕೊಡಗು ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷರಾಗಿ ಎರಡು ಬಾರಿ ಕಾರ್ಯ ನಿರ್ವಹಿಸಿದರು. ಈ ಸಮಯದಲ್ಲಿ ಬಳಗ ಕೊಡಗಿನ ಮೂಲೆ ಮೂಲೆಗಳಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಕೊಡಗಿನಲ್ಲಿ ನಡೆದ ಪ್ರಥಮ ಕೊಡಗು ಉತ್ಸವದಲ್ಲಿ ಲೇಖಕರ ಬಳಗ ಜಿಲ್ಲಾಡಳಿತದೊಂದಿಗಿನ ಸಹಭಾಗಿತ್ವದಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿ ಜನ ಮೆಚ್ಚುಗೆ ಗಳಿಸಿತ್ತು. ಇವರು ತಮ್ಮ ವೈದ್ಯಕೀಯ ಜೀವನದಲ್ಲಿ ಕಂಡAತಹ ಅನೇಕ ವಿಶೇಷ ಪ್ರಕರಣಗಳನ್ನು, ವಿಷಯಗಳನ್ನು ಕನ್ನಡದ ಕಥೆಗಳ ರೂಪದಲ್ಲಿ ಅನೇಕ ನಿಯತಕಾಲಿಕ ಮತ್ತು ವಾರಪತ್ರಿಕೆಗಳಿಗೆ ಬರೆಯುತ್ತಿದ್ದರು. ಮಡಿಕೇರಿ ಆಕಾಶವಾಣಿಯಲ್ಲಿ ವೈದ್ಯರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಇವರು ಬಹಳ ಆಸಕ್ತಿಯಿಂದ ಭಾಗವಹಿಸುತ್ತಿದ್ದರು.

“ವೈದ್ಯಕಂಡ ವಿಸ್ಮಯ’ದಲ್ಲಿ ತಮ್ಮ ಅನುಭವವನ್ನು ತಮ್ಮದೇ ಹಾಸ್ಯಮಿಶ್ರಿತ ಧಾಟಿಯಲ್ಲಿ ಚಿಕ್ಕದಾಗಿ ಚೊಕ್ಕವಾಗಿ ಓದಗರ ಮುಂದಿಟ್ಟಿದ್ದಾರೆ. ಸರ್ಕಾರಿ ಜೀವನದಲ್ಲಿ ಎದುರಿಸುವ ಸವಾಲುಗಳು, ಕೆಲವು ಘಟನೆಗಳಲ್ಲಿ ಕೆಲವು ಪರಿಸ್ಥಿತಿಗಳಲ್ಲಿ ನಾವೆಷ್ಟು ಅಶಕ್ತರಾಗಿರುತ್ತೇವೆಂದು ಚಿತ್ರಿಸಿದ್ದಾರೆ. ಈ ಪುಸ್ತಕದಲ್ಲಿ ಅವರ ಪ್ರತಿಭೆಯ ಪರಿಚಯವಾಗುತ್ತದೆ.

ಸರಳತೆ, ಶಿಸ್ತು, ಸಮಯಪ್ರಜ್ಞೆ ಕೂಡ ಇವರನ್ನು ನೋಡಿ ವೃತ್ತಿಪರರು ಕಲಿಯಬೇಕು. ಪ್ರಸ್ತುತ ಇವರು ಮಡಿಕೇರಿಯಲ್ಲಿ ಪುಟ್ಟ ಕ್ಲಿನಿಕ್ ಇಟ್ಟುಕೊಂಡು ಜನಸೇವೆ ಮಾಡುತ್ತಿದ್ದಾರೆ. ತಮ್ಮ ಕ್ಲಿನಿಕ್‌ನಲ್ಲಿ ಕಡಿಮೆ ಮೊತ್ತದ ಸೇವಾ ಶುಲ್ಕವನ್ನು ಪಡೆಯುವ ಇವರು ಅದರಲ್ಲೂ ಹೆಚ್ಚಿನವರಿಗೆ ಮತ್ತು ಬಡವರಿಗೆ ಉಚಿತವಾಗಿ ಚಿಕಿತ್ಸೆ ಹಾಗೂ ತಮ್ಮಲ್ಲಿರುವ ಔಷಧಿಯನ್ನು ಉಚಿತವಾಗಿ ನೀಡುವುದೇ ಅವರ ಸೇವಾ ಮನೋಭಾವಕ್ಕೆ ಸಾಕ್ಷಿ. ತಮ್ಮ ಇಳಿ ವಯಸ್ಸಿನಲ್ಲೂ ಕೆ.ವಿ.ಜಿ. ಮೆಡಿಕಲ್ ಕಾಲೇಜು, ಸುಳ್ಯ ಇಲ್ಲಿ ಕೂಡ ನಿಗದಿತ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಕಾರ್ಯ ನಿರ್ವಹಿಸುತ್ತಿದ್ದಾರೆ. ಮಡಿಕೇರಿಯಲ್ಲಿ ತಮ್ಮ ಪತ್ನಿ ಗೀತಾ ಇವರೊಂದಿಗೆ ವಾಸವಾಗಿರುವ ಸೂರ್ಯಕುಮಾರ್ ಅವರಿಗೆ ಇಬ್ಬರು ಮಕ್ಕಳು. ಮಗಳು ಶೃತಿ, ದಂತ ವೈದ್ಯೆ ಹಾಗೂ ಅಳಿಯ ಬಸವರಾಜು, ಭಾರತದ ಸೇನೆಯಲ್ಲಿ ಕರ್ನಲ್ ಆಗಿ ಹೆಲಿಕಾಪ್ಟರ್ ಪೈಲೆಟ್ ಆಗಿದ್ದಾರೆ. ಎರಡನೇ ಮಗಳು ಶ್ರಾವ್ಯ ಹಾಗೂ ಅಳಿಯ ಅಕ್ಷಯ, ಇಬ್ಬರು ಇಂಜಿನಿಯರಿAಗ್ ಉದ್ಯೋಗದಲ್ಲಿದ್ದಾರೆ. ೧೯೭೫ರಿಂದ ಆರಂಭವಾದ ಇವರ ವೈದ್ಯಕೀಯ ಸೇವೆ ಸಾಕಷ್ಟು ಏರಿಳಿತಗಳನ್ನು ಕಂಡು ಮುನ್ನಡೆಯುತ್ತಿದೆ. ಇವರು ವಿಧಿವಿಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಆಮಿಷಗಳನ್ನು, ಪ್ರಭಾವಗಳನ್ನು, ಬೆದರಿಕೆಗಳನ್ನು ಕಂಡಿದ್ದಾರೆ. ಇದ್ಯಾವುದಕ್ಕೂ ಸೊಪ್ಪು ಹಾಕದೆ ತಮ್ಮದೇ ಆದ ದಾರಿಯಲ್ಲಿ ಸಾಗಿದ್ದಾರೆ. ಇವರ ಜೀವನದಲ್ಲಿ ೪೦೦೦ದಿಂದ ೫೦೦೦ದಷ್ಟು ಶವ ಪರೀಕ್ಷೆ ಉಸ್ತುವಾರಿಯನ್ನು ಮಾಡಿದ್ದಾರೆ. ಇದು ಅವರ ದೊಡ್ಡ ಸಾಧನೆಯೇ ಸರಿ. ಇವರ ಸೇವೆ ಕೊಡಗಿನ ಜನರಿಗೆ ಇನ್ನಷ್ಟು ವರ್ಷಗಳ ಕಾಲ ಸಿಗಲಿ ಎಂದು ಹಾರೈಸೋಣ.

-ಬಾಳೆಯಡ ಕಿಶನ್ ಪೂವಯ್ಯ

ವಕೀಲರು ಮತ್ತು ನೋಟರಿ, ಮಡಿಕೇರಿ.