ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ದುರ್ಮರಣ

ಚಾಮರಾಜನಗರ, ಮೇ. ೩: ದೇಶದ ರಾಜಧಾನಿ ದೆಹಲಿಯ ಪರಿಸ್ಥಿತಿಯೇ ಕರ್ನಾಟಕಕ್ಕೂ ಬಂದಿದೆ. ಕಳೆದ ೨೪ ಗಂಟೆಗಳಲ್ಲಿ ಕೊರೊನಾ ಸೋಂಕಿತ ರೋಗಿಗಳು ಸೇರಿದಂತೆ ಒಟ್ಟು ೨೪ ರೋಗಿಗಳು ಆಕ್ಸಿಜನ್ ಕೊರತೆ ಮತ್ತು ಇತರ ಸಮಸ್ಯೆಗಳಿಂದ ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಮೈಸೂರಿನಿಂದ ನಮಗೆ ಸೂಕ್ತ ಸಮಯಕ್ಕೆ ಆಕ್ಸಿಜನ್ ಪೂರೈಕೆಯಾಗಲಿಲ್ಲ, ಇದರಿಂದ ರೋಗಿಗಳು ಮೃತಪಟ್ಟಿದ್ದಾರೆ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಎಂ.ಆರ್ ರವಿ ತಿಳಿಸಿದ್ದಾರೆ. ಕಳೆದ ರಾತ್ರಿ ೧೬ ಮಂದಿ ರೋಗಿಗಳು ಮೃತಪಟ್ಟಿದ್ದರೆ ಇಂದು ನಸುಕಿನ ಜಾವ ೪ಕ್ಕೂ ಹೆಚ್ಚು ಕೋವಿಡ್ ರೋಗಿಗಳು ಆಕ್ಸಿಜನ್ ಇಲ್ಲದೆ ನರಳಾಡಿ ಪ್ರಾಣ ಕಳೆದುಕೊಂಡಿದ್ದಾರೆ. ಆಕ್ಸಿಜನ್ ಸಿಲಿಂಡರ್ ಬರುವ ಹೊತ್ತಿಗೆ ರೋಗಿಗಳ ಪ್ರಾಣಪಕ್ಷಿ ಹಾರಿಹೋಗಿತ್ತು. ತಮ್ಮವರನ್ನು ಕಳೆದುಕೊಂಡ ಮನೆಯವರು, ಸಂಬAಧಿಕರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ದುರ್ಘಟನೆ ಬೆಳಕಿಗೆ ಬರುತ್ತಿದ್ದಂತೆ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಅವರನ್ನು ಆಸ್ಪತ್ರೆಗೆ ತೆರಳಿ ಪರಿಸ್ಥಿತಿ ಅವಲೋಕಿಸುವಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೂಚಿಸಿದ್ದಾರೆ. ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ೨೪ ರೋಗಿಗಳು ಮೃತಪಟ್ಟು ಆದ ದುರ್ಘಟನೆ ಹಿನ್ನೆಲೆಯಲ್ಲಿ ತಾ. ೪ ರಂದು ಮುಖ್ಯಮಂತ್ರಿ ಸಚಿವ ಸಂಪುಟ ಸಹೋದ್ಯೋಗಿಗಳ ತುರ್ತು ಸಭೆ ಕರೆದಿದ್ದಾರೆ. ಘಟನೆ ಬಗ್ಗೆ ಚಾಮರಾಜನಗರ ಜಿಲ್ಲಾಧಿಕಾರಿಗೆ ಕರೆ ಮಾಡಿ ಮುಖ್ಯಮಂತ್ರಿಗಳು ಮಾಹಿತಿ ಪಡೆದಿದ್ದಾರೆ. ಜಿಲ್ಲಾಡಳಿತ ಮತ್ತು ಸರ್ಕಾರದ ವೈಫಲ್ಯದಿಂದ ಸಾಮಾನ್ಯ ನಾಗರಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಆಸ್ಪತ್ರೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು.

ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚನೆ

ಬೆಂಗಳೂರು, ಮೇ. ೩: ಚಾಮರಾಜನಗರ ಆಸ್ಪತ್ರೆಯಲ್ಲಿ ರೋಗಿಗಳ ಸಾವಿನ ಪ್ರಕರಣ ಕುರಿತು ಸಮಗ್ರ ತನಿಖೆ ವರದಿ ನೀಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿರುವುದಾಗಿ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು. ಬೆಂಗಳೂರಿನಲ್ಲಿ ಸೋಮವಾರ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಹಮ್ಮಿಕೊಂಡಿದ್ದ ರಾಸಾಯನಿಕ ಸಿಂಪಡÀಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಚಾಮರಾಜನಗರದಲ್ಲಿ ಆಕ್ಸಿಜನ್ ಸಿಗದ ಹಿನ್ನೆಲೆಯಲ್ಲಿ ಕೋವಿಡ್ ರೋಗಿಗಳು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಇದೆ. ಆದರೆ ಇವರ ಸಾವಿಗೆ ನಿಜವಾಗಿಯೂ ಇದ್ದ ಕಾರಣ ಏನು ಎಂಬುದರ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದೇನೆ. ಇದು ಅತ್ಯಂತ ದುಃಖಕರ ಸಂಗತಿ. ಈ ಘಟನೆ ಸಂಭವಿಸಬಾರದಾಗಿತ್ತು ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ. ಪ್ರಕರಣದ ಕುರಿತು ಸತ್ಯಾಸತ್ಯತೆ ಏನು ಎಂಬುದನ್ನು ತಿಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ವರದಿ ನೀಡಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಟಿಎಂಸಿ ಶಾಸಕಾಂಗ ಪಕ್ಷದ ನಾಯಕಿಯಾಗಿ ಮಮತಾ ಅವಿರೋಧ ಆಯ್ಕೆ

ಕೋಲ್ಕತಾ, ಮೇ ೩: ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ತೃಣಮೂಲ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರು ತಾ.೫ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ಇಂದು ನಡೆದ ಟಿಎಂಸಿ ಶಾಸಕಾಂಗ ಸಭೆಯಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಶಾಸಕಾಂಗ ಪಕ್ಷದ ನಾಯಕಿಯಾಗಿ ಅಧಿಕೃತವಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಆ ಮೂಲಕ ಮಮತಾ ಬ್ಯಾನರ್ಜಿ ಅವರು ಸತತ ಮೂರನೇ ಬಾರಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದೇ ಮೇ ೫ರಂದು ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದ್ದು, ಮಮತಾ ಬ್ಯಾನರ್ಜಿ ಅವರೊಂದಿಗೆ ಯಾರೆಲ್ಲಾ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬುದು ತಿಳಿದುಬಂದಿಲ್ಲ. ಇದೇ ವೇಳೆ ನಂದಿಗ್ರಾಮ ಕ್ಷೇತ್ರದ ಫಲಿತಾಂಶದ ಕುರಿತು ಚುನಾವಣಾ ಆಯೋಗದ ಕ್ರಮದ ವಿರುದ್ಧ ಕೋರ್ಟ್ಗೆ ಅರ್ಜಿ ಸಲ್ಲಿಸುವುದಾಗಿ ಮಮತಾ ಘೋಷಣೆ ಮಾಡಿದ್ದು, ಫಲಿತಾಂಶ ಘೋಷಣೆಯೇ ಗೊಂದಲದಿAದ ಕೂಡಿದೆ. ಸಾಕಷ್ಟು ಮತಗಳ ಮತಎಣಿಕೆ ಬಾಕಿ ಇರುವಾಗಲೇ ಆಯೋಗ ಫಲಿತಾಂಶ ಘೋಷಣೆ ಮಾಡಿದ್ದು ಅನುಮಾನ ಮೂಡಿಸುತ್ತಿದೆ. ಹೀಗಾಗಿ ಮರು ಮತ ಎಣಿಕೆ ಕುರಿತು ಕೋರ್ಟ್ಗೆ ಅರ್ಜಿ ಸಲ್ಲಿಸುತ್ತೇವೆ ಎಂದು ಟಿಎಂಸಿ ಹೇಳಿದೆ.

ಆರೋಗ್ಯ ಸೆಸ್‌ಗೆ ವಿನಾಯಿತಿ ಘೋಷಿಸಿದ ಕೇಂದ್ರ ಸರ್ಕಾರ

ನವದೆಹಲಿ, ಮೇ ೩: ಕೋವಿಡ್ ಸಂಬAಧಿತ ಪರಿಹಾರ ಸಾಮಗ್ರಿಗಳ ಆಮದಿಗೆ ಮೂಲ ಕಸ್ಟಮ್ಸ್ ಸುಂಕ ಹಾಗೂ ಆರೋಗ್ಯ ಸೆಸ್‌ಗೆ ಕೇಂದ್ರ ಸರ್ಕಾರ ತಾತ್ಕಾಲಿಕ ವಿನಾಯಿತಿ ನೀಡಿದೆ. ಈ ಸಂಬAಧ ಸಚಿವಾಲಯ ಅಧಿಸೂಚನೆ ಹೊರಡಿಸಿದ್ದು ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೋವಿಡ್ ಸಂಬAಧಿತ ಪರಿಹಾರ ಸಾಮಗ್ರಿಗಳ ಆಮದಿಗೆ ಮೂಲ ಕಸ್ಟಮ್ಸ್ ಸುಂಕ ಹಾಗೂ ಆರೋಗ್ಯ ಸೆಸ್ ಗೆ ತಾತ್ಕಾಲಿಕ ವಿನಾಯಿತಿ ನೀಡಿದೆ ಎಂದು ಹೇಳಿದೆ. ಈ ವಿನಾಯಿತಿ ತಾತ್ಕಾಲಿಕ ಮತ್ತು ಜೂನ್ ೩೦, ೨೦೨೧ ರವರೆಗೆ ಮಾಡಿದ ಎಲ್ಲಾ ನಿರ್ದಿಷ್ಟ ಆಮದುಗಳಿಗೆ ಅನ್ವಯಿಸುತ್ತದೆ. ಈ ವಿನಾಯಿತಿಯು ಈಗಾಗಲೇ ಆಮದು ಮಾಡಿಕೊಂಡ ಸರಕುಗಳನ್ನು ಒಳಗೊಳ್ಳುತ್ತದೆ ಆದರೆವಿನಾಯಿತಿ ನೀಡಲು ಪ್ರಾರಂಭವಾಗುವ ದಿನಾಂಕ ಯಾವುದೆಂದು ಸ್ಪಷ್ಟವಾಗಿಲ್ಲ.

ಜಿಲ್ಲಾಸ್ಪತ್ರೆಗಳ ಸ್ಥಿತಿಗತಿಯ ವರದಿ ಸಲ್ಲಿಸಲು ಸಿಎಂ ಸೂಚನೆ

ಬೆಂಗಳೂರು, ಮೇ. ೩: ಚಾಮರಾಜನಗರ ಜಿಲ್ಲಾಸ್ಪತ್ರೆ ಸೇರಿದಂತೆ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಒಂದೇ ದಿನ ೨೨ ಮಂದಿ ಮೃತಪಟ್ಟ ಘಟನೆಯಿಂದ ಎಚ್ಚೆತ್ತುಕೊಂಡಿರುವ ಸರ್ಕಾರ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಲಭ್ಯವಿರುವ ಔಷಧಿ ಆಕ್ಸಿಜನ್ ಸೇರಿದಂತೆ ಇತರೆ ಮಾಹಿತಿ ಸಂಗ್ರಹಕ್ಕೆ ಮುಂದಾಗಿದ್ದು ವರದಿ ತರಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ. ಅಧಿಕೃತ ನಿವಾಸ ಕಾವೇರಿಯಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಆಕ್ಸಿಜನ್ ತಯಾರಿಕೆ ಮತ್ತು ಪೂರೈಕೆ ಮಾಹಿತಿ ಸಂಬAಧ ಚರ್ಚೆ ನಡೆಸಿದರು. ಸಭೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ನೀಗಿಸಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಚಾಮರಾಜನಗರ ಜಿಲ್ಲೆಯಲ್ಲಿ ನಡೆದಂತಹ ಘಟನೆ ಬೇರೆ ಯಾವುದೇ ಜಿಲ್ಲೆಯಲ್ಲಿ ಮರುಕಳಿಸದಂತೆ ನೋಡಿಕೊಳ್ಳಬೇಕು. ಮೆಡಿಸಿನ್ ಕೊರತೆಯೂ ಎದುರಾಗದಂತೆ ಕ್ರಮ ಕೈಗೊಳ್ಳಬೇಕೆಂದು ಚರ್ಚಿಸಿದರು. ಜಿಲ್ಲಾ ಆಸ್ಪತ್ರೆಗಳ ಸ್ಥಿತಿ ಗತಿ ಬಗ್ಗೆ ವರದಿ ಸಂಗ್ರಹ ಮಾಡುವಂತೆ ಅಧಿಕಾರಿಗಳಿಗೆ ಸಭೆಯಲ್ಲಿ ಸಿಎಂ ಸೂಚನೆ ನೀಡಿದರು. ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಸೇರಿದಂತೆ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಅನುಮತಿ ಪಡೆಯದೆ ಆಸ್ಪತ್ರೆ ಬೆಡ್‌ಗಳನ್ನು ಹೆಚ್ಚಿಸದಂತೆ ಮುಖ್ಯ ಕಾರ್ಯದರ್ಶಿ ಸೂಚನೆ

ಬೆಂಗಳೂರು, ಮೇ. ೩: ರಾಜ್ಯದಲ್ಲಿ ಈಗಿರುವ ಬೆಡ್‌ಗಳಿಗೆ ಅಗತ್ಯವಿರುವಷ್ಟು ಆಮ್ಲಜನಕ ಮಾತ್ರ ಲಭ್ಯವಿದ್ದು, ಅನುಮತಿ ಪಡೆಯದೇ ಬೆಡ್‌ಗಳನ್ನು ಅಥವಾ ಕೋವಿಡ್-೧೯ ರೋಗಿಗಳಿಗೆ ಅಗತ್ಯವಿರುವ ವೈದ್ಯಕೀಯ ಮೂಲಸೌಕರ್ಯವನ್ನು ಹೆಚ್ಚಿಸದಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೂ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಪತ್ರದಲ್ಲಿ ತಿಳಿಸಿದ್ದಾರೆ. ರಾಜ್ಯದಲ್ಲಿ ಆಕ್ಸಿಜನ್ ಸಹಿತ ಬೆಡ್ ಗಳ ಸಂಖ್ಯೆ ಹೆಚ್ಚಾದಲ್ಲಿ ಈಗಿರುವ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಪೂರೈಕೆ ಮೇಲೆ ಒತ್ತಡ ಬೀಳಲಿದ್ದು, ಅಲಭ್ಯತೆ ಕಾಡುತ್ತದೆ. ಆದ್ದರಿಂದ ಇರುವ ಬೆಡ್‌ಗಳಲ್ಲೇ ಪರಿಸ್ಥಿತಿ ನಿಭಾಯಿಸಬೇಕೆಂದು ಪತ್ರದಲ್ಲಿ ಜಿಲ್ಲಾಧಿಕಾರಿಗಳಿಗೆ ರವಿಕುಮಾರ್ ಮಾಹಿತಿ ನೀಡಿದ್ದಾರೆ. ಈಗಿರುವ ಪರಿಸ್ಥಿತಿಯಲ್ಲಿ ಹೆಚ್ಚುವರಿ ಪೂರೈಕೆ ಸಾಧ್ಯವಿಲ್ಲ. ಒಂದು ವೇಳೆ ಬೆಡ್ ಗಳನ್ನು ಹೆಚ್ಚಿಸಬೇಕಾದ ಅನಿವಾರ್ಯತೆ ಉಂಟಾದಲ್ಲಿ ಹೆಚ್ಚುವರಿ ಮುಖ್ಯಕಾರ್ಯದರ್ಶಿ (ಎಸಿಎಸ್) ಗೆ ಮಾಹಿತಿ ನೀಡಿ ಅನುಮತಿ ಪಡೆದು, ಆಕ್ಸಿಜನ್ ಸರಿದೂಗಿಸುವುದಕ್ಕೆ ತಕ್ಕಂತೆ ಹೆಚ್ಚಿಸಬೇಕೆಂಬ ಸೂಚನೆ ನೀಡಲಾಗಿದೆ.