ಸೋಮವಾರಪೇಟೆ,ಮೇ ೩: ಜಿಲ್ಲೆಯಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಸರ್ಕಾರದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿ ಎಂದು ತಾಲೂಕಿನ ಪೊಲೀಸ್, ಕಂದಾಯ ಹಾಗೂ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಿಗೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಸೂಚಿಸಿದರು.

ಇಲ್ಲಿನ ಚನ್ನಬಸಪ್ಪ ಸಭಾಂಗಣ ದಲ್ಲಿ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊರೊನಾ ಸೋಂಕು ವ್ಯಾಪಿಸಿದ ಜಿಲ್ಲೆಗಳ ಪಟ್ಟಿಯಲ್ಲಿ ಕೊಡಗು ಜಿಲ್ಲೆ ದೇಶದಲ್ಲೇ ನಂ. ೧ ಸ್ಥಾನದಲ್ಲಿರುವುದು ನೋವಿನ ಸಂಗತಿ. ಜಿಲ್ಲೆಯನ್ನು ಕೋವಿಡ್ ಕೇಂದ್ರವಾಗಿಸಲು ಬಿಡಬಾರದು. ಈ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಹೆಚ್ಚಿನ ಶ್ರಮವಹಿಸಿ ಸರ್ಕಾರದ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸಲು ಕಾರ್ಯೋನ್ಮುಖ ವಾಗಬೇಕು ಎಂದರು.

ಹೊರ ಜಿಲ್ಲೆ, ರಾಜ್ಯದಿಂದ ಬಂದವರಿಗೆ ಕಡ್ಡಾಯವಾಗಿ ಸೀಲ್ ಹಾಕಬೇಕು. ಅವರುಗಳು ಹೊರಗಡೆ ಓಡಾಡಿದರೆ ಕ್ವಾರಂಟೈನ್ ಸೆಂಟರ್‌ಗೆ ಸಾಗಿಸಬೇಕು. ಕಾರ್ಮಿಕರು ಬೆಳಿಗ್ಗೆ ೮ ಕ್ಕೆ ತೆರಳಿ ಸಂಜೆ ೫ರ ನಂತರವೇ ವಾಪಸ್ ಆಗಬೇಕು. ಮಧ್ಯದಲ್ಲಿ ಓಡಾಡಿದರೆ ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡು ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಗಡಿಭಾಗದ ಚೆಕ್‌ಪೋಸ್ಟ್ಗಳನ್ನು ಬಿಗಿಗೊಳಿಸಬೇಕು ಎಂದು ಶಾಸಕರು ತಿಳಿಸಿದರು.

ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ಯಾವುದೇ ಮುಲಾಜಿಲ್ಲದೇ ಮುಟ್ಟುಗೋಲು ಹಾಕಿಕೊಳ್ಳಿ. ಯಾವುದೇ ಒತ್ತಡಕ್ಕೂ ಮಣಿಯಬೇಡಿ ಎಂದು ಪೊಲೀಸ್ ಇಲಾಖೆಗೆ ಸೂಚಿಸಿದ ರಂಜನ್, ಎಲ್ಲರೂ ಎರಡೆರಡು ಮಾಸ್ಕ್ಗಳನ್ನು ಕಡ್ಡಾಯವಾಗಿ ಬಳಸಿ. ತಮ್ಮ ಆರೋಗ್ಯದತ್ತ ಗಮನ ಹರಿಸಿ ಕೋವಿಡ್ ನಿಗ್ರಹಕ್ಕೆ ಸಹಕರಿಸುವಂತೆ ಮನವಿ ಮಾಡಿದರು.

ಕ್ಲಿನಿಕ್‌ಗಳನ್ನು ಸೀಜ್ ಮಾಡಿ: ಕೊರೊನಾ ರೋಗ ಲಕ್ಷಣಗಳಿದ್ದರೂ ಹಲವಷ್ಟು ಮಂದಿ ಸರ್ಕಾರಿ ಅಸ್ಪತ್ರೆಗಳಿಗೆ ತೆರಳದೇ ಖಾಸಗಿ ಕ್ಲಿನಿಕ್‌ಗಳಿಗೆ ಭೇಟಿ ನೀಡುತ್ತಿದ್ದಾರೆ. ಕೆಲ ಖಾಸಗಿ ಕ್ಲಿನಿಕ್‌ಗಳ ವೈದ್ಯರು ಇವರುಗಳ ಬಗ್ಗೆ ವರದಿ ನೀಡದೇ ಚಿಕಿತ್ಸೆ ಕೊಡುತ್ತಿದ್ದಾರೆ. ಅಂತಹವರು ಮತ್ತೆ ಗ್ರಾಮದಲ್ಲಿ ಓಡಾಡಿಕೊಂಡು ಹೆಚ್ಚಿನ ಮಂದಿಗೆ ಸೋಂಕು ಹರಡಿಸುತ್ತಿದ್ದಾರೆ ಎಂದು ವರ್ತಕರ ಸಂಘದ ಅಧ್ಯಕ್ಷ ಮನುಕುಮಾರ್ ಸಭೆಯ ಗಮನ ಸೆಳೆದರು.

ಅಂತಹ ಕ್ಲಿನಿಕ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಸಕರು ತಾಲೂಕು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು. ಖಾಸಗಿಯಾಗಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಅವಕಾಶವಿಲ್ಲ. ರೋಗ ಲಕ್ಷಣಗಳಿದ್ದರೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಇದನ್ನು ಮೀರುವ ಕ್ಲಿನಿಕ್‌ಗಳನ್ನು ಸೀಜ್ ಮಾಡಲಾಗುವುದು ಎಂದು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್ ಹೇಳಿದರು.

ಡಿವೈಎಸ್‌ಪಿ ಶೈಲೇಂದ್ರ ಮಾತನಾಡಿ, ಬೆಂಗಳೂರು ಸೇರಿದಂತೆ ಹೊರ ಜಿಲ್ಲೆ, ರಾಜ್ಯಗಳಿಂದ ಆಗಮಿಸುವ ಮಂದಿಗೆ ಚೆಕ್‌ಪೋಸ್ಟ್ ನಲ್ಲಿಯೇ ಸೀಲ್ ಹಾಕಿ, ಅವರುಗಳ ವಿವರ ನೋಂದಾಯಿಸಿಕೊಳ್ಳುವAತಾಗ ಬೇಕು ಎಂದು ಸಲಹೆ ನೀಡಿದರು.

ತಹಶೀಲ್ದಾರ್ ಗೋವಿಂದರಾಜು ಮಾಹಿತಿ ನೀಡಿ, ಸ್ಥಳೀಯವಾಗಿ ಟಾಸ್ಕ್ ಫೋರ್ಸ್ ರಚಿಸಲಾಗಿದ್ದು, ಈಗಾಗಲೇ ಕಾರ್ಯೋನ್ಮುಖವಾಗಿದೆ. ಹೊರ ಜಿಲ್ಲೆಯಿಂದ ಬಂದವರ ಬಗ್ಗೆ ನಿಗಾ ವಹಿಸಬೇಕು. ಶಾಂತಳ್ಳಿ ವ್ಯಾಪ್ತಿಯಲ್ಲೇ ೪೮ ಮಂದಿ ಬಂದಿರುವ ಮಾಹಿತಿ ಇದೆ. ಇವರುಗಳಿಗೆ ಕಡ್ಡಾಯವಾಗಿ ಸೀಲ್ ಹಾಕಿ ಕ್ವಾರಂಟೈನ್ ಮಾಡಿಸುವ ಕೆಲಸ ಸಮಿತಿಯಿಂದ ಆಗಬೇಕು ಎಂದರು.

ಹೊರಭಾಗದಲ್ಲಿ ಲಸಿಕೆ ಕೇಂದ್ರ: ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಯುತ್ತಿದ್ದ ಲಸಿಕೆ ನೀಡಿಕೆ ಕೇಂದ್ರವನ್ನು ಆಯುಷ್ ಇಲಾಖೆಯ ಹೋಮಿಯೋಪತಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸ್ವಾö್ಯಬ್ ಟೆಸ್ಟ್ ಘಟಕವನ್ನು ಮಹಿಳಾ ಸಮಾಜದಲ್ಲಿ ತೆರೆಯಲಾಗಿದೆ. ಎಲ್ಲಾ ಇಲಾಖೆಗಳು ಹೆಚ್ಚಿನ ಮುತುವರ್ಜಿಯಿಂದ ಕೆಲಸ ನಿರ್ವಹಿಸಬೇಕು ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್ ಮಾತನಾಡಿ, ತಾಲೂಕಿನಲ್ಲಿ ೪೧೩೯ ಮಂದಿ ಸೋಂಕಿತರಿದ್ದು, ಜನವರಿಯಿಂದ ಇಲ್ಲಿಯವರೆಗೆ ೨೨೯೦ ಪ್ರಕರಣ ದಾಖಲಾಗಿವೆ. ಏಪ್ರಿಲ್ ಮಾಹೆಯಲ್ಲೇ ೧೫೩೮ ಪ್ರಕರಣ ಪತ್ತೆಯಾಗಿದೆ. ೧೪೦೦ ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ. ಈವರೆಗೆ ೪೬ ಮಂದಿ ಸಾವನ್ನಪ್ಪಿದ್ದಾರೆ. ಕೂಡಿಗೆ, ಕುಶಾಲನಗರ, ಶನಿವಾರಸಂತೆ, ಕೊಡ್ಲಿಪೇಟೆ, ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಕರಣಗಳಿವೆ ಎಂದು ಮಾಹಿತಿಯಿತ್ತರು.

ಸಭೆಯಲ್ಲಿ ಪೊಲೀಸ್ ವೃತ್ತ ನಿರೀಕ್ಷಕರಾದ ಎಂ. ಮಹೇಶ್, ಬಿ.ಜಿ. ಮಹೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ. ಪಾಂಡು, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಜಯಣ್ಣ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯು ಕುಮಾರ್, ಸೋಮವಾರಪೇಟೆ ಹಾಗೂ ಕುಶಾಲನಗರ ಪ.ಪಂ. ಮುಖ್ಯಾಧಿಕಾರಿಗಳು, ಎಲ್ಲಾ ಗ್ರಾ.ಪಂ.ಗಳ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು.