ಸುಂಟಿಕೊಪ್ಪ, ಮೇ. ೩: ಕೊರೊನಾ ಜನತಾ ಕರ್ಫ್ಯೂ ನಿಂದಾಗಿ ಊಟ ಇಲ್ಲದೆ ಅನಾಥ ವ್ಯಕ್ತಿಯೋರ್ವ ಹೊಸಕೋಟೆ ಬಸ್ ನಿಲ್ದಾಣ ದಲ್ಲಿ ಆಶ್ರಯ ಪಡೆದಿದ್ದು, ವ್ಯಕ್ತಿಗೆ ಸ್ಥಳೀಯರು ಊಟೋಪಚಾರ ನೀಡಿ ಸಂತೈಸಿದ್ದಾರೆ.

೭ನೇ ಹೊಸಕೋಟೆಯ ಮೆಟ್ನಹಳ್ಳ ಬಸ್ ತಂಗುದಾಣದಲ್ಲಿ ಆಶ್ರಯ ಪಡೆದಿದ್ದ ಅನಾಥ ವ್ಯಕ್ತಿಯೋರ್ವ ಬಸ್‌ನಿಲ್ದಾಣವನ್ನು ಕಸ ಗುಡಿಸಿ ಸ್ವಚ್ಛಮಾಡುತ್ತಿರುವುದನ್ನು ಗಮನಿಸಿದ ೭ನೇ ಹೊಸಕೋಟೆ ಆಟೋಚಾಲಕ ಶಿವಣ್ಣ ಎಂಬವರು ಸ್ಥಳೀಯ ದೃಶ್ಯವಾಹಿನಿ ವರದಿಗಾರರ ಗಮನಕ್ಕೆ ತಂದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ದೃಶ್ಯವಾಹಿನಿಯ ವರದಿಗಾರರು ಅವರ ಪೂರ್ವಾಪರ ವಿಚಾರಿಸಿ ರಾಜಸ್ಥಾನ್ ಮೂಲದವರಾಗಿದ್ದು ಅಂದಾಜು ೬೦ ವರ್ಷ ಪ್ರಾಯದವರಾಗಿದ್ದು ಅವರಿಗೆ ಊಟದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಇತರರಂತೆ ಅಶುಚಿತ್ವಗೊಳಿಸದೆ ತಾನು ತಂಗುವ ಸ್ಥಳವನ್ನು ಶುಭ್ರಗೊಳಿಸಿರುವುದನ್ನು ಮನಗಂಡ ಸಾರ್ವಜನಿಕರು ಆ ವ್ಯಕ್ತಿಯ ಶುಭ್ರತೆಯನ್ನು ಪ್ರಶಂಸಿಸಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯವರು ಇತ್ತ ಗಮನಹರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.