ಕುಶಾಲನಗರ, ಏ. ೨೯: ಹಾರಂಗಿ ಅಣೆಕಟ್ಟು ಹಿನ್ನೀರು ಪ್ರದೇಶದಲ್ಲಿ ಪ್ರವಾಸಿಗರ ಮೋಜು-ಮಸ್ತಿಗೆ ತಡೆಹಾಕಲು ಕಾವೇರಿ ನೀರಾವರಿ ನಿಗಮ ಕ್ರಮ ಕೈಗೊಂಡಿದೆ.

ಕೃಷಿ ಚಟುವಟಿಕೆಗಳಿಗೆ ಒತ್ತು ನೀಡಿ ನಿರ್ಮಾಣಗೊಂಡಿರುವ ಹಾರಂಗಿ ಅಣೆಕಟ್ಟು ಒಂದೆಡೆ ನಿರ್ವಹಣೆ ಕೊರತೆ ಎದುರಿಸುವು ದರೊಂದಿಗೆ, ಇನ್ನೊಂದೆಡೆ ಹಿನ್ನೀರು ಪ್ರದೇಶದಲ್ಲಿ ಪ್ರವಾಸಿಗರ ಮೋಜು-ಮಸ್ತಿ ಅಧಿಕವಾಗಿತ್ತು. ಪ್ರವಾಸಿಗರ ಒತ್ತಡದ ಜೊತೆಗೆ ಬಾಟಲಿ ತ್ಯಾಜ್ಯಗಳ ವಿಲೇವಾರಿ ಕೇಂದ್ರದAತೆ ನಿರಂತರವಾಗಿ ಪರಿವರ್ತನೆಯಾಗುತ್ತಿದೆ. ಶಕ್ತಿ ಈ ಬಗ್ಗೆ ವರದಿ ಕೂಡ ಪ್ರಕಟ ಮಾಡಿತ್ತು. ಇದೀಗ ವರದಿಗೆ ಸ್ಪಂದನ ದೊರೆತಿದ್ದು, ಕಾವೇರಿ ನೀರಾವರಿ ನಿಗಮದ ಮೂಲಕ ಕ್ರಮ ಕೈಗೊಂಡು, ಪ್ರವಾಸಿಗರ ಮೋಜು-ಮಸ್ತಿಗೆ ನಿರ್ಬಂಧ ಹೇರುವುದರ ಜತೆಗೆ ಹಿನ್ನೀರು ವ್ಯಾಪ್ತಿಯಲ್ಲಿ ಭಾರೀ ಕಂದಕಗಳ ನಿರ್ಮಾಣ ಕಾಮಗಾರಿ ಮಾಡಲು ಪ್ರಾರಂಭಮಾಡಲಾಗಿದೆ.

ಒAದೆಡೆ ಅಣೆಕಟ್ಟು ಮುಂಭಾಗ ಕಟ್ಟುನಿಟ್ಟಿನ ಪೊಲೀಸ್ ಭದ್ರತೆ ಕಂಡುಬರುತ್ತಿದ್ದರೆ ಇನ್ನೊಂಡೆಡೆ ಹಾರಂಗಿ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಯಾವುದೇ ಭದ್ರತೆಯ ವ್ಯವಸ್ಥೆ ಕೂಡ ಕಂಡುಬರುತ್ತಿಲ್ಲ. ಇದಕ್ಕೆಲ್ಲ ಕೂಡಲೇ ಕಡಿವಾಣ ಹಾಕುವ ಮೂಲಕ ಜಲಾಶಯದ ಭದ್ರತೆಗೆ ಒತ್ತು ನೀಡಬೇಕೆಂದು ಸ್ಥಳೀಯವಾಗಿ ಮನವಿ ಮಾಡಿದ ಬೆನ್ನಲ್ಲೇ ಸ್ಪಂದನ ದೊರೆತಿದ್ದು, ಹಾರಂಗಿ ಅಣೆಕಟ್ಟಿನ ಹಿನ್ನೀರಿನ ಪ್ರದೇಶಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಕಾವೇರಿ ನೀರಾವರಿ ನಿಗಮದ ಮೂಲಕ ಇದಕ್ಕೆ ಶಾಶ್ವತ ಪರಿಹಾರ ಕ್ರಮಕ್ಕೆ ಮುಂದಾಗಿರುವುದಾಗಿ ಹಾರಂಗಿ ಅಣೆಕಟ್ಟು ವಿಭಾಗದ ಅಧಿಕಾರಿ ಮಹೇಂದ್ರ ಕುಮಾರ್ ತಿಳಿಸಿದ್ದಾರೆ. ಈ ಮೂಲಕ ಹಾರಂಗಿ ಹಿನ್ನೀರು ಪ್ರದೇಶ ಬಹುತೇಕ ಪ್ರವಾಸಿಗರಿಂದ ತ್ಯಾಜ್ಯಮಯ ಕೇಂದ್ರವಾಗೋದು ತಪ್ಪಿದಂತಾಗಿದೆ.