ಕಣಿವೆ, ಏ. ೨೯: ಭರತ ಭೂಮಿಯ ಈ ಮಣ್ಣಿನ ಸಾರವೇ ಅಂತಹದ್ದು. ಭೂಮಿ ಸುಡುವ ಬಿರು ಬಿಸಿಲೇ ಇರಲಿ. ದೇಹವನ್ನು ಕೊರೆ ವಂತಹ ಚಳಿಯೇ ಇರಲಿ. ಕಾಲ ಮಾನಕ್ಕೆ ಅನುಗುಣವಾದಂತಹ ಹಣ್ಣು-ಕಾಯಿ, ಹೂ-ಪುಷ್ಪಗಳನ್ನು ಈ ಸೃಷ್ಟಿ ನೀಡುತ್ತಲೇ ಬಂದಿದೆ.

ಧರೆಯನ್ನೇ ದಹಿಸುವಂತಹ ಉರಿ ಬಿಸಿಲಿನಲ್ಲೂ ಬೆಂಕಿಯ ಕೆಂಡದAತೆ ಅರಳಿ ನಿಂತಿರುವ ಈ ಹೂವಿನ ಹೆಸರೇ ಮೇ ಫ್ಲವರ್. ಬೇಸಗೆಯ ಸುಡು ಬಿಸಿಲಿನ ನಡುವೆ ಆಗೊಮ್ಮೆ ಈಗೊಮ್ಮೆ ಇಣುಕಿ ಹೋಗುವ ಮೋಡಗಳಿಂದ ಉದುರಿ ಹೋಗುವ ಮಳೆಯ ಹನಿಗಳು, ಇವೆಲ್ಲಕ್ಕೂ ಹೊಂದಿಕೊAಡAತೆ ಪಳಪಳನೆ ಹೊಳೆಯುವ ಕೆಂಪನೆಯ ಹೂಗಳು ದೂರದಿಂದ ದೂರಕ್ಕೆ ಕಣ್ಮನ ಸೆಳೆಯುತ್ತವೆ. ಹತ್ತಿರ ಬಂದರೆ ಬರ ಸೆಳೆದು ಮನಕ್ಕೆ ಹಾಗೂ ಕಣ್ಣಿಗೆ ಆಹ್ಲಾದತೆ ನೀಡುವ, ಆಸರೆ ಬಯಸಿದರೆ ಮನಕ್ಕೆ ತಂಪನ್ನೀವ ಅಪೂರ್ವ ಪುಷ್ಪವೃಕ್ಷ, ತಿಂಗಳ ಹೆಸರನ್ನು ಧರಿಸಿಕೊಂಡು ಮೆರೆಯುವ ಈ ಮೇ ಫ್ಲವರ್ ಪುಷ್ಪ ಸುಂದರಿ ಹಾರಂಗಿಯ ಜಲಾಶಯದ ಒಳಗೆ ಮತ್ತು ಹೊರಗೆ ನೋಡುಗರ ಕಣ್ಮನ ಸೂರೆಗೊಳ್ಳುತ್ತಾಳೆ.

ಹಾರಂಗಿ ಜಲಾಶಯ ನಿರ್ಮಾಣದ ಬಳಿಕ ಪ್ರವೇಶ ದ್ವಾರದ ಅರ್ಧ ಭಾಗದಿಂದ ಅಣೆಕಟ್ಟೆಯ ಪ್ರವಾಸಿಮಂದಿರದವರೆಗೂ ರಸ್ತೆಯ ಇಕ್ಕೆಲಗಳಲ್ಲಿ ಈ ಮೇ ಫ್ಲವರ್ ಮರಗಳು ಕಳೆದ ಮೂರ್ನಾಲ್ಕು ಮಳೆಯ ಹದಕ್ಕೆ ತೆರೆದುಕೊಂಡು ಕಂಗೊಳಿಸುತ್ತಿವೆ. ಜಲಾಶಯದ ಒಳಭಾಗದ ನೀರಿನ ದಡದಲ್ಲಿ ಇರುವ ಈ ಪುಷ್ಪ ಸುಂದರಿ ಹೊದ್ದ ಮರಗಳು ನಿಸರ್ಗದೊಳಗೆ ಲೀನವಾದಂತೆ ಭಾಸವಾಗುವ ರೀತಿ ಇದೆಯಲ್ಲಾ ಅದನ್ನು ನೋಡೋಕೆ. ಆ ಅಂದ ಚೆಂದವನ್ನು ಕಣ್ತುಂಬಿ ಕೊಳ್ಳಲು ಎರಡು ಕಣ್ಣು ಸಾಲದು.

ಮೇ ತಿಂಗಳಲ್ಲಿ ಹೆಚ್ಚಾಗಿ ಕಂಡು ಬರುವ ಈ ಪುಷ್ಪ ರಾಶಿ ಏಪ್ರಿಲ್ ಮಾಸಾಂತ್ಯದಿAದಲೇ ಶೋಭಿಸುತ್ತಿವೆ. ಕಲ್ಯಾಣ ಮಂಟಪಗಳು ತೆರೆದುಕೊಳ್ಳದ ಮೂರ್ನಾಲ್ಕು ವಸಂತಗಳ ಹಿಂದೆ ಹಳ್ಳಿಗಳಲ್ಲೇ ನಡೆಯುತ್ತಿದ್ದ ಮದುವೆ ಮೊದಲಾದ ಶುಭ ಸಮಾರಂಭಗಳ ಚಪ್ಪರಕ್ಕೆ ಈ ಮೇ ಫ್ಲವರ್ ಪುಷ್ಪಗಳಿಂದ ಅಲಂಕಾರ ಮಾಡುವ ಪದ್ಧತಿ ಇತ್ತು. ಮದುವೆಗೆ ಬಂದ ಮಕ್ಕಳು ಈ ಹೂವಿನ ಗೆಡ್ಡೆಯನ್ನು ಕಿತ್ತು ಹುಡುಗ - ಹುಡುಗಿ ಆಟ ಆಡುತ್ತಾ ಆಟದಲ್ಲಿ ತಲ್ಲೀನ ರಾಗುತ್ತಿದ್ದುದು ಉಂಟು. ಇತ್ತೀಚಿನ ವರ್ಷಗಳಲ್ಲಿ ಈ ಮೇ ಫ್ಲವರ್ ಗಿಡಗಳನ್ನು ಬೆಳೆಸುವ ಪರಿ ಪಾಠವೇ ನಿಂತಿದೆ. ಇನ್ನಾದರೂ ಸಾಮಾಜಿಕ ಅರಣ್ಯ ಇಲಾಖೆ ಯವರು ಹೆಚ್ಚಾಗಿ ಈ ಮೇ ಫ್ಲವರ್ ಬಳ್ಳಿಗಳನ್ನು ಬೆಳೆಸಿ ಪ್ರಕೃತಿಯ ಸೌಂದರ್ಯಕ್ಕೆ ಇಂಬು ಕೊಡುವ ಕೆಲಸ ಮತ್ತೊಮ್ಮೆ ಆಗಬೇಕಿದೆ. - ಕೆ.ಎಸ್. ಮೂರ್ತಿ