ಗೋಣಿಕೊಪ್ಪಲು, ಏ. ೨೯: ಕೊರೊನಾ ಅಲೆ ತಡೆಗಟ್ಟಲು ಅಧಿಕಾರಿ ವರ್ಗದವರು ಹಗಲು-ರಾತ್ರಿ ಎನ್ನದೆ ಮನೆ ಬಿಟ್ಟು ದುಡಿಯುತ್ತಿದ್ದಾರೆ.
ಇಂತಹ ಸಮಯದಲ್ಲಿ ತಮ್ಮ ಕಚೇರಿಗೆ ಆಗಮಿಸಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವುದು ಅಸಾಧ್ಯವಾದ್ದರಿಂದ ಸಹಜವಾಗಿಯೇ ಇವರ ಕೊಠಡಿಯಲ್ಲಿರುವ ಕುರ್ಚಿ ಖಾಲಿಯಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವ ಕುರ್ಚಿಯಲ್ಲಿ ಅನಾಮಧೇಯ ವ್ಯಕ್ತಿ ಆಸೀನನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾನೆ ಎಂದರೇ ಯಾರಿಗೇ ತಾನೇ ಆಶ್ಚರ್ಯವಾಗದು? ಅಂತಹ ಒಂದು ಪ್ರಸಂಗ ವೀರಾಜಪೇಟೆ ತಾಲೂಕು ಕಚೇರಿಯಲ್ಲಿ ನಡೆದಿದೆ.
ಶಿರಸ್ತೆದಾರ್ ಕುಳಿತುಕೊಳ್ಳುವ ಕುರ್ಚಿಯಲ್ಲಿ ಅನಾಮಧೇಯ ವ್ಯಕ್ತಿಯೋರ್ವ ಕುಳಿತು ಕೆಲ ಸಮಯ ಗೊಂದಲ ಮೂಡಿಸಿದ ಘಟನೆ ಗುರುವಾರ ಮುಂಜಾನೆ ೯ ಗಂಟೆಯ ಸುಮಾರಿಗೆ ನಡೆದಿದೆ.
ನಾನು ಇನ್ಕಮ್ ಟ್ಯಾಕ್ಸ್ ಆಫೀಸರ್ ಎಂದು ಆಗಮಿಸಿದ ವ್ಯಕ್ತಿ ತಾಲೂಕು ಕಚೇರಿಯ ಒಳ ಪ್ರವೇಶ ಮಾಡಿ ನೇರವಾಗಿ ಶಿರಸ್ತೆದಾರ್ ಕುಳಿತುಕೊಳ್ಳುವ ಚೇರ್ನಲ್ಲಿ ಕುಳಿತು ಕೆಲಸ ನಿರ್ವಹಿಸಿದ್ದಾನೆ.! ಕಚೇರಿಯ ಸಿಬ್ಬಂದಿ ಕೊಠಡಿಗೆ ತೆರಳಿ ಇದನ್ನು ಕಂಡು ಕೆಲಕಾಲ ಗಾಬರಿಗೊಂಡಿದ್ದಾರೆ.
ನಾನು ಇಲ್ಲಿಗೆ ವರ್ಗಾವಣೆ ಗೊಂಡು ಬಂದಿರುವ ಅಧಿಕಾರಿ.! ಜನರ ಕಷ್ಟ ತಿಳಿದು ಬಂದಿರುವುದಾಗಿ ಸಮಜಾಯಿಷಿಕೆ ನೀಡಿದ್ದಾನೆ. ಮಾನಸಿಕ ಖಾಯಿಲೆಗೆ ತುತ್ತಾಗಿರುವ ಈತ ಏನೋನು ಮಾತನಾಡುತ್ತಿದ್ದುದ ರಿಂದ ಎಚ್ಚರಗೊಂಡ ಕಚೇರಿಯ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಕಚೇರಿಗೆ ಆಗಮಿಸಿದ ಪೊಲೀಸರು ಅನಾಮಧೇಯ ವ್ಯಕ್ತಿ ಯನ್ನು ವಶಕ್ಕೆ ಪಡೆದು ಕಚೇರಿಯಿಂದ ಹೊರ ಕಳುಹಿಸುವಲ್ಲಿ ಯಶಸ್ವಿ ಯಾಗಿದ್ದಾರೆ. - ಹೆಚ್.ಕೆ. ಜಗದೀಶ್