ಬೆಂಗಳೂರು, ಏ. ೨೯: ರಾಜ್ಯದಲ್ಲಿ ೩ ಲಕ್ಷಕ್ಕೂ ಅಧಿಕ ಕೊರೊನಾ ಸೋಂಕಿತರಿದ್ದು ಕೊರೊನಾ ಎರಡನೇ ಅಲೆ ತೀವ್ರತೆಯನ್ನು ತಗ್ಗಿಸಲು ರಾಜ್ಯ ಸರ್ಕಾರ ಮೇ ೧೨ರ ವರೆಗೆ ಕೊರೊನಾ ಕರ್ಫ್ಯೂವನ್ನು ಹೇರಿದೆ. ಮಂಗಳವಾರ ರಾತ್ರಿ ೯ ಗಂಟೆಯಿAದ ೧೪ ದಿನಗಳ ಕಾಲ ಜಾರಿಗೆ ಬಂದಿರುವ ಕೊರೊನಾ ಕರ್ಫ್ಯೂ ಯಾವ ರೀತಿ ನಡೆಯುತ್ತಿದೆ ಎಂಬ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ತಜ್ಞರೊಂದಿಗೆ ವೀಡಿಯೋ ಸಂವಾದ ನಡೆಸಿದರು.
ಸಭೆಯಲ್ಲಿ ಸೋಂಕು ನಿಯಂತ್ರಣ ಕ್ರಮಗಳು, ಸೋಂಕಿತರಿಗೆ ಚಿಕಿತ್ಸೆ, ಆಕ್ಸಿಜನ್, ಐಸಿಯು, ಹಾಸಿಗೆಗಳು, ಇತರ ಅಗತ್ಯ ಔಷಧಗಳ ಬಗ್ಗೆ ಮಾಹಿತಿ ಪಡೆಯಲಾಯಿತು. ಹಾಗೆಯೇ, ಲಸಿಕೆ ವಿತರಣೆ ಬಗ್ಗೆಯೂ ಚರ್ಚೆ ನಡೆಸಿ ಅಗತ್ಯ ಸೂಚನೆಗಳನ್ನು ಸಿಎಂ ನೀಡಿದ್ದಾರೆ.
ಸಭೆಯಲ್ಲಿ ಮುಖ್ಯಮಂತ್ರಿಗಳು ಕೋವಿಡ್-೧೯ ಎರಡನೇ ಅಲೆ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ (ಮೊದಲ ಪುಟದಿಂದ) ಮುಖ್ಯಮಂತ್ರಿ ಸೂಚಿಸಿದ್ದಾರೆ. ಬೆಂಗಳೂರು ಸೇರಿದಂತೆ ಜಿಲ್ಲೆಗಳಲ್ಲಿ ಯಾವ ರೀತಿ ಕೊರೊನಾ ಕರ್ಫ್ಯೂ ನಿಯಮವನ್ನು ಜನರು ಪಾಲಿಸುತ್ತಿದ್ದಾರೆ, ವಾಹನಗಳು, ಜನರ ಸಂಚಾರ ಯಾವ ರೀತಿ ಇದೆ, ಕರ್ಫ್ಯೂವನ್ನು ಜನರು ಗಂಭೀರವಾಗಿ ತೆಗೆದುಕೊಂಡಿದ್ದಾರೆಯೇ ಎಂದು ಮಾಹಿತಿ ಪಡೆದುಕೊಂಡಿದ್ದಾರೆ. ಬೆಂಗಳೂರು ಸೇರಿದಂತೆ ಜಿಲ್ಲೆಗಳಲ್ಲಿ ಜನರು ಈ ಬಾರಿ ನಿರ್ಬಂಧವನ್ನು ಬೇಕಾಬಿಟ್ಟಿ ತೆಗೆದುಕೊಂಡಿದ್ದಾರೆ, ರಸ್ತೆಗಳಲ್ಲಿ ಜನರು ಆರಾಮಾಗಿ ಓಡಾಡುತ್ತಿದ್ದಾರೆ ಎಂಬ ಸುದ್ದಿಗಳು ವಾಹಿನಿಗಳಲ್ಲಿ ಬರುತ್ತಿವೆ. ಅಧಿಕಾರಿಗಳು, ಪೊಲೀಸರು ಏನು ಮಾಡುತ್ತಿದ್ದಾರೆ, ಜಿಲ್ಲೆಗಳಲ್ಲಿ ಸರಿಯಾಗಿ ತಪಾಸಣೆ ಮಾಡುತ್ತಿಲ್ಲವೇ ಎಂದು ಅಧಿಕಾರಿಗಳನ್ನು ಸಭೆಯಲ್ಲಿ ಮುಖ್ಯಮಂತ್ರಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.
ಮೇ ೧೨ರ ವರೆಗೆ ಕೊರೊನಾ ಕರ್ಫ್ಯೂವನ್ನು ಕಟ್ಟುನಿಟ್ಟಾಗಿ ಪಾಲಿಸಿ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರಲೇಬೇಕು. ಇಲ್ಲದಿದ್ದರೆ ಕರ್ಫ್ಯೂವನ್ನು ವಿಸ್ತರಿಸಬೇಕಾಗುತ್ತದೆ. ಅದು ಅಧಿಕಾರಿಗಳು ಮತ್ತು ಜನರ ಕೈಯಲ್ಲಿದೆ ಎಂದು ಮುಖ್ಯಮಂತ್ರಿಗಳು ಸಭೆಯಲ್ಲಿ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಜಿಲ್ಲಾಡಳಿತಗಳ ಜವಾಬ್ದಾರಿ: ಕೋವಿಡ್-೧೯ ನಿಯಂತ್ರಣಕ್ಕೆ ಜಾರಿಗೊಳಿಸಿರುವ ಕೊರೊನಾ ಕರ್ಫ್ಯೂವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಜವಾಬ್ದಾರಿ ಜಿಲ್ಲಾಡಳಿತಕ್ಕೆ ಬಿಟ್ಟಿದ್ದು. ಬೆಳಿಗ್ಗೆ ೬ ರಿಂದ ೧೦ ಗಂಟೆವರೆಗೆ ಮಾತ್ರ ಜನರು ಮನೆಬಿಟ್ಟು ಹೊರಬರುತ್ತಾರೆಯೇ, ಅದರಿಂದಾಚೆ ಹೊರಗೆ ಸುಮ್ಮನೆ ಜನರು ಓಡಾಡುತ್ತಾರೆಯೇ, ಕೊರೊನಾ ನಿಯಮ, ಮಾರ್ಗಸೂಚಿ ಪಾಲಿಸುತ್ತಾರೆಯೇ ಎಂದು ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಭೆಯಲ್ಲಿ ಆದೇಶ ಹೊರಡಿಸಿದ್ದಾರೆ.
ಕೆಲವು ಜಿಲ್ಲೆಗಳಲ್ಲಿ ಇನ್ನೂ ಕೋವಿಡ್ ಕೇರ್ ಸೆಂಟರುಗಳನ್ನು ತೆರೆದಿಲ್ಲ, ಅಂತಹ ಜಿಲ್ಲೆಗಳಲ್ಲಿ ಕೋವಿಡ್ ಕೇರ್ ಸೆಂಟರುಗಳನ್ನು ಆದ್ಯತೆಯ ಮೇರೆಗೆ ತೆರೆಯುಬೇಕು, ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ತಾಲೂಕು ಕೇಂದ್ರಗಳಲ್ಲಿ ಕೋವಿಡ್ ಕೇರ್ ಸೆಂಟರಗಳನ್ನು ತೆರೆಯಬೇಕು. ಇದಕ್ಕಾಗಿ ವಸತಿ ಶಾಲೆಗಳು, ಹಾಸ್ಟೆಲ್‌ಗಳನ್ನು ಬಳಸಿಕೂಳ್ಳಲು ಸೂಚಿಸಲಾಗಿದೆ. ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ತಾಲೂಕುಗಳಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಿ ರೋಗಿಗಳಿಗೆ ಹಳ್ಳಿಗಳಲ್ಲಿ ಸರಿಯಾದ ಕಾಳಜಿ ವಹಿಸಬೇಕು. ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಹಣ ಬಿಡುಗಡೆ ಆಗಿದ್ದು, ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆಯುತ್ತಿರುವವರಿಗೆ ಮೆಡಿಕಲ್ ಕಿಟ್‌ಗಳನ್ನು ವಿತರಿಸಲು ಕ್ರಮ ವಹಿಸುವಂತೆ ಹಾಗೂ ಇವರ ಆರೋಗ್ಯ ಮೇಲ್ವಿಚಾರಣೆಗಾಗಿ ತಂಡಗಳನ್ನು ರಚಿಸಬೇಕು. ಪರೀಕ್ಷೆಗಳನ್ನು ಕೇವಲ ರೋಗಲಕ್ಷಣ ಇದ್ದವರಿಗೆ ಸೀಮಿತ ಮಾಡಿ ಮತ್ತು ಪರೀಕ್ಷಾ ಫಲಿತಾಂಶ ೨೪ ಗಂಟೆಗಳಲ್ಲಿ ಕೊಡುವ ವ್ಯವಸ್ಥೆ ಮಾಡಬೇಕು. ಬಾಕಿ ಇರುವ ಪರೀಕ್ಷೆಗಳನ್ನು ಕೂಡಲೇ ಪೂರ್ಣಗೊಳಿಸಬೇಕು. ಎಲ್ಲಾ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆ ಸರಿಯಾದ ಸಮಯದಲ್ಲಿ ತಲುಪುವಂತೆ ಮಾಡಬೇಕು. ಪ್ರತಿ ಆಸ್ಪತ್ರೆಯಲ್ಲಿ ರೆಮ್‌ಡಿಸಿವರ್ ಔಷಧ ಹಾಗೂ ಆಕ್ಸಿಜನ್ ಬಗ್ಗೆ ಆಡಿಟ್ ಆಗಬೇಕು. ಯಾರು ಯಾರಿಗೆ ಅತೀ ಅವಶ್ಯವಿದೆಯೋ ಅವರಿಗೆ ಕೊಡುವ ವ್ಯವಸ್ಥೆಯಾಗಬೇಕು ಎಂದು ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ.
ರೆಮ್‌ಡಿಸಿವಿರ್ ಮತ್ತು ಆಕ್ಸಿಜನೇಟೆಡ್ ಬೆಡ್‌ಗಳ ವಿವೇಚನಾರಹಿತ ಬಳಕೆಯಾಗದಂತೆ ತಡೆಗಟ್ಟಬೇಕು. ಅಗತ್ಯವಿರುವವರಿಗೆ ಮಾತ್ರ ಈ ಇಂಜೆಕ್ಷನ್ ಹಾಗೂ ಆಕ್ಸಿಜನೇಟೆಡ್ ಬೆಡ್‌ಗಳನ್ನು ಒದಗಿಸುವ ಮೂಲಕ ಕೃತಕ ಅಭಾವ ಸೃಷ್ಟಿಯಾಗದಂತೆ ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಅಂತೆಯೇ ವೆಂಟಿಲೇಟರ್ ಬೆಡ್‌ಗಳನ್ನು ಸಹ ಅತ್ಯಂತ ವಿವೇಚನೆಯಿಂದ ಬಳಸಬೇಕು ಎಂದರು.
ಯಾವುದಾದರೂ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಾದರೆ, ತುರ್ತು ಸಂದರ್ಭದಲ್ಲಿ ನೆರೆಯ ಜಿಲ್ಲೆಯಿಂದ ಪಡೆದುಕೊಳ್ಳಿ, ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಹಾಗೂ ಇತರೆ ಸಂಪನ್ಮೂಲಗಳನ್ನು ಕೋವಿಡ್ ನಿರ್ವಹಣೆಗಾಗಿ ಬಳಸಿಕೊಳ್ಳುವಂತೆ ಸೂಚಿಸಲಾಯಿತು.