ಮಡಿಕೇರಿ, ಏ. ೨೯: ಮೇ ೧ನೇ ತಾರೀಕಿನಿಂದ ದೇಶದಾದ್ಯಂತ ೧೮ ರಿಂದ ೪೪ ವಯೋಮಿತಿಯವರಿಗೆ ಲಸಿಕೆ ನೀಡುವ ಕಾರ್ಯ ಆರಂಭವಾಗಬೇಕಿದ್ದು, ಫಲಾನುಭವಿಗಳು ನೋಂದಣಿ ಮಾಡಿಕೊಳ್ಳಲು seಟಜಿಡಿegisಣಡಿಚಿಣioಟಿ.ಛಿoತಿiಟಿ.gov.iಟಿ ವೆಬ್ಸೈಟ್ ಮೂಲಕ ಅವಕಾಶ ಕಲ್ಪಿಸಲಾಗಿದೆ. ತಾ. ೨೮ ರಂದು ನೋಂದಣಿ ಕಾರ್ಯ ಆರಂಭವಾಗಿದ್ದು, ಬಹಳಷ್ಟು ಮಂದಿ ನೋಂದಣಿ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ತಾ. ೨೮ ರ ಸಂಜೆ ನೋಂದಣಿ ಮಾಡಲು ಅತ್ಯಧಿಕ ಮಂದಿ ಮುಂದಾದ ಕಾರಣ ವೆಬ್ಸೈಟ್ ತಾಂತ್ರಿಕ ದೋಷಗಳಿಂದಾಗಿ ಕೆಲಕಾಲ ಸ್ಥಗಿತಗೊಂಡ ಪ್ರಸಂಗ ಎದುರಾಯಿತು. ಬಹಳಷ್ಟು ಮಂದಿಗೆ ಒ.ಟಿ.ಪಿ. ಬರದೆ ನೋಂದಣಿ ಮಾಡಲು ಸಾಧ್ಯವಾಗಲಿಲ್ಲ. ನೋಂದಣಿ ಮಾಡಲು ಯಶಸ್ವಿಯಾದವರಿಗೆ ಲಸಿಕೆ ಪಡೆದುಕೊಳ್ಳುವ ಸ್ಥಳ ಹಾಗೂ ಸಮಯ ನಿಗದಿಪಡಿಸಲು ಅಸಾಧ್ಯವಾಗಿದೆ.
ಕನಿಷ್ಟ ವಯಸ್ಸು ೪೫...!
ಚಿತ್ರದಲ್ಲಿರುವಂತೆ, ನೋಂದಣಿ ಮಾಡಲು ಯಶಸ್ವಿಯಾದವರು ತಾವು ಲಸಿಕೆ ಪಡೆಯಲು ಸ್ಥಳ, ಸಮಯ ನಿಗದಿಪಡಿಸಲೆಂದು ಹೊರಟರೆ ಕನಿಷ್ಟ ವಯಸ್ಸು ೪೫ ಆಗಿರಬೇಕೆಂಬ ಸಂದೇಶ ವೆಬ್ಸೈಟ್ನಲ್ಲಿ ಪ್ರದರ್ಶಿಸಲಾಗಿದೆ. ೧೮ ರಿಂದ ೪೪ ವಯಸ್ಸಿನವರಿಗೆ ಲಸಿಕೆ ನೀಡಬೇಕಾಗಿರುವುದಾದರೂ ಕನಿಷ್ಟ ವಯಸ್ಸು ೧೮ರ ಬದಲು ೪೫ ತೋರಿಸುತ್ತಿರುವ ಕಾರಣ ಗೊಂದಲ ಸೃಷ್ಟಿಯಾಗಿದೆ. ತಾ. ೨೯ ರ ಸಂಜೆಯವರೆಗೂ ವೆಬ್ಸೈಟ್ನಲ್ಲಿ ಕನಿಷ್ಟ ವಯಸ್ಸು ೪೫ ಇರುವುದನ್ನು ೧೮ ಕ್ಕೆ ಇನ್ನೂ ಬದಲಾಯಿಸಲಾಗಿರಲಿಲ್ಲ. ನಾಳೆ (ಮೇ ೧) ರಂದು ೧೮ ರಿಂದ ೪೪ ವಯಸ್ಸಿನವರಿಗೆ ಲಸಿಕೆ ನೀಡಲು ಆರಂಭವಾಗಬೇಕಿದ್ದು, ನೋಂದಣಿ ಮಾಡಿದವರಿಗೆ ಲಸಿಕಾ ಕೇಂದ್ರಗಳು ನಿಗದಿ ಯಾಗದೆ ಇರುವುದರಿಂದ ಲಸಿಕಾ ಕೇಂದ್ರಗಳಲ್ಲಿ ಜನಜಂಗುಳಿ ಎದುರಾಗುವ ಸಾಧ್ಯತೆ ಹೆಚ್ಚಿದೆ.