ಪೊನ್ನಂಪೇಟೆ, ಏ. ೨೯: ಪಟ್ಟಣ ಪ್ರದೇಶದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಕೊರೊನಾ ಸೋಂಕು ಇಂದು ಸಾರ್ವಜನಿಕರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯಿಂದಾಗಿ ಹಳ್ಳಿಗಳ ಕಡೆಗೂ ತನ್ನ ಕರಾಳ ಹಸ್ತ ಚಾಚುವ ಮೂಲಕ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುತ್ತಿದೆ. ಇಂದು ಪೊನ್ನಂಪೇಟೆ ಸಮೀಪದ ಕಿರುಗೂರು ಗ್ರಾಮದ ಎರಡು ಕುಟುಂಬಗಳಲ್ಲಿ ಕೊರೊನಾ ಸೋಂಕು ಕಾಣಿಸಿ ಕೊಂಡಿದೆ. ಒಂದು ಕುಟುಂಬದ ೪ ಜನ ಮತ್ತು ಅವರ ಇಬ್ಬರು ಕಾರ್ಮಿಕರು ಹಾಗೂ ಮತ್ತೊಂದು ಕುಟುಂಬದ ೩ ಜನ ಸೇರಿ ಒಟ್ಟು ೯ ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕಿತರಲ್ಲಿ ಒಬ್ಬರು ಕಿರುಗೂರು ಸರ್ಕಾರಿ ಶಾಲಾ ಮೈದಾನದಲ್ಲಿ ವಾಲಿಬಾಲ್ ಆಟ ಆಡುತ್ತಿದ್ದರು ಹಾಗೂ ಜಿಮ್‌ಗೂ ಹೋಗುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ. ಸೋಂಕಿತ ವ್ಯಕ್ತಿಯೊಬ್ಬನ ಜೊತೆ ಸುಮಾರು ಮೂವತ್ತಕ್ಕಿಂತಲೂ ಹೆಚ್ಚು ಜನರು ಪ್ರಾಥಮಿಕ ಸಂಪರ್ಕವಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಕೊರೊನಾ ಲಕ್ಷಣಗಳು ಇದ್ದ ಕಾರಣ ತಾ. ೨೬ ರಂದು ಕೊರೊನಾ ಪರೀಕ್ಷೆ ಮಾಡಿಸಲಾಗಿತ್ತು. ಇಂದು ಪರೀಕ್ಷಾ ವರದಿ ಬಂದಿದ್ದು, ಕೊರೊನಾ ಸೋಂಕು ದೃಢಪಟ್ಟಿದೆ. ಕೊರೊನಾ ಲಕ್ಷಣಗಳು ಇದ್ದರೂ ಕೂಡ ಪರೀಕ್ಷಾ ವರದಿ ಬರುವ ಮುನ್ನ ಇಬ್ಬರು ಸೋಂಕಿತ ವ್ಯಕ್ತಿಗಳು ಸಾರ್ವಜನಿಕರ ಸಂಪರ್ಕದಲ್ಲಿದ್ದರು. ಬೆಂಗಳೂರಿನಿAದ ಬಂದಿದ್ದ ವ್ಯಕ್ತಿಯೊಬ್ಬರಿಂದ ಸೋಂಕು ಹರಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಕಿರುಗೂರಿನಲ್ಲಿ ಆತಂಕ ಮನೆಮಾಡಿದೆ.
ಸೀಲ್‌ಡೌನ್: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಎ. ಗಯಾ ಹಾಗೂ ಕಂದಾಯ ಅಧಿಕಾರಿ ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಗ್ರಾಮಲೆಕ್ಕಿಗ ಮಾಳಪ್ಪ, ಬಿಲ್‌ಕಲೆಕ್ಟರ್ ರವಿ, ಗ್ರಾಮ ಸಹಾಯಕ ಚಂದ್ರ, ಗ್ರಾಮ ಪಂಚಾಯಿತಿ ಸಿಬ್ಬಂದಿ ರೀನಾ ಶಾಂತಿ, ಎಂ.ಬಿ. ಹರೀಶ್, ರವಿ, ಆರೋಗ್ಯ ಕಾರ್ಯಕರ್ತೆ ರೂಪ , ಆಶಾ ಕಾರ್ಯಕರ್ತೆ ಸುಮನ ಇವರುಗಳು ಸೋಂಕಿತ ವಲಯಕ್ಕೆ ತೆರಳಿ ಸೀಲ್ ಡೌನ್ ಮಾಡಿದರು. ಗ್ರಾಮ ಪಂಚಾಯಿತಿ ವತಿಯಿಂದ ಸೋಂಕಿತ ವಲಯಕ್ಕೆ ಸ್ಯಾನಿಟೈಸ್ ಮಾಡಲಾಯಿತು.
ಮಹಿಳಾ ಸಮಾಜದಲ್ಲಿ ಪರೀಕ್ಷೆ: ಕೊರೊನಾ ಸೋಂಕು ದೃಢಪಟ್ಟಿರುವ ವ್ಯಕ್ತಿಗಳ ಜೊತೆಗೆ ಕಿರುಗೂರಿನ ಗ್ರಾಮಸ್ಥರು ಸಂಪರ್ಕದಲ್ಲಿ ಇದ್ದುದ್ದರಿಂದ ತಾ. ೩೦ ರಂದು (ಇಂದು) ಕಿರುಗೂರು ಗ್ರಾಮ ಪಂಚಾಯಿತಿ ಸಮೀಪವಿರುವ ಮಹಿಳಾ ಸಮಾಜದಲ್ಲಿ ಕೊರೊನಾ ಪರೀಕ್ಷೆ ಮಾಡಿಸಲಾಗುತ್ತದೆ. ಸೋಂಕಿತರ ಸಂಪರ್ಕವಿರುವವರು ಹಾಗೂ ಕೊರೊನಾ ಲಕ್ಷಣಗಳಿರು ವವರು ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಕಿರುಗೂರು ಗ್ರಾ.ಪಂ. ಅಧ್ಯಕ್ಷ ಪಿ.ಡಿ. ಜೀವನ್ ಹಾಗೂ ಕೊರೊನಾ ಕಾರ್ಯಪಡೆ ಅಧ್ಯಕ್ಷ ಚೆಪ್ಪುಡಿರ ರಾಖೇಶ್ ದೇವಯ್ಯ, ಆಶಾಕಾರ್ಯ ಕರ್ತೆ ಸುಮನ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
- ಚನ್ನನಾಯಕ