ವೀರಾಜಪೇಟೆ, ಏ. ೨೯: ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯನ್ನು ಕೋವಿಡ್ ಹೆಲ್ತ್ಸೆಂಟರ್ ಆಗಿ ಪರಿವರ್ತನೆ ಮಾಡಿರುವುದಕ್ಕೆ ವೀರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ಸಿ.ಕೆ. ಪ್ರಥ್ವಿನಾಥ್ ಮತ್ತಿತರರು ವಿರೋಧ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ೨೪೦ ಹಾಸಿಗೆಯ ಸಾರ್ವಜನಿಕ ಆಸ್ಪತ್ರೆಗೆ ಕುಟ್ಟ, ಸಿದ್ದಾಪುರ, ಪಾಲಿಬೆಟ್ಟ, ಬಿ. ಶೆಟ್ಟಿಗೇರಿ, ತಿತಿಮತಿ ಸೇರಿದಂತೆ ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನ ವಿವಿಧ ಭಾಗಗಳಿಂದ ಚಿಕಿತ್ಸೆಗೆ ಬರುತ್ತಿದ್ದಾರೆ. ಒಂದು ವಾರದಲ್ಲಿ ೧೦ಕ್ಕೂ ಅಧಿಕ ವಿವಿಧ ರೀತಿಯ ಶಸ್ತçಚಿಕಿತ್ಸೆಗಳು ನಡೆಯುತ್ತಿದೆ. ೧೦ ರಿಂದ ೨೦ ಮಕ್ಕಳ ಜನನವಾಗು ತ್ತಿದೆ. ಗರ್ಭಿಣಿಯರು, ಬಾಣಂತಿಯರು ಚಿಕಿತ್ಸೆ ಪಡೆಯುತ್ತಿದ್ದಾರೆ. ಏಕಾಏಕಿ ಆಸ್ಪತ್ರೆಯನ್ನು ಕೋವಿಡ್ ಹೆಲ್ತ್ಕೇರ್ ಸೆಂಟರ್ ಆಗಿ ಪರಿವರ್ತನೆ ಮಾಡಿದರೆ ಸಾಮಾನ್ಯ ರೋಗಿಗಳ ಸ್ಥಿತಿ ಏನು ಎಂದು ಪ್ರಶ್ನಿಸಿದ್ದಾರೆ.
ಮಡಿಕೇರಿ ಜಿಲಾಸ್ಪತ್ರೆಯಲ್ಲಿ ಕೊರೊನಾ ಸೋಂಕು ರೋಗಿಗಳನ್ನು ಅಡ್ಮಿಟ್ ಮಾಡಿಕೊಂಡು ಸಂಪೂರ್ಣ ಪರೀಕ್ಷೆ ನಡೆಸಿ ಯಾವ ರೋಗಿಗೆ ಆಮ್ಲಜನಕದ ಕೊರತೆ ಇದಿಯೋ ಅಂತ ರೋಗಿಗಳನ್ನು ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹೇಳಿದ್ದಾರೆ. ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ. ವೈದ್ಯರಿಲ್ಲದೆ ಐ.ಸಿ.ಯು. ಕೋಮಸ್ಟೇಜ್‌ಗೆ ತೆರಳಿದೆ. ವೆಂಟಿಲೇಟರ್ ವ್ಯವಸ್ಥೆ ಇಲ್ಲ. ನೀರಿನ ಕೊರತೆ ಇದೆ. ಇವೆಲ್ಲದಕ್ಕೂ ಹೆಚ್ಚಾಗಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೆಂಟರ್ ಕಾರ್ಯ ನಿರ್ವಹಿಸುತ್ತಿದ್ದು ದಿನಕ್ಕೆ ಮೂರು ಪಾಳಿಯಂತೆ ೧೫ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ತಜ್ಞವೈದ್ಯರ ಪ್ರಕಾರ ಕಿಡ್ನಿ ವೈಫಲ್ಯಗೊಂಡ ರೋಗಿಗಳಿಗೆ ಅತಿ ಶೀಘ್ರವಾಗಿ ಸೋಂಕು ಹರಡುತ್ತದೆ. ರೋಗಿಯ ಜತೆ ಬರುವ ಪಾಲಕರಿಗೂ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ. ಆಕಸ್ಮಿಕವಾಗಿ ಮೃತಪಟ್ಟರೆ ಮರಣೋತ್ತರ ಪರೀಕ್ಷೆ ನಡೆಸಲು ಎಲ್ಲಿಗೆ ಹೋಗುವುದು ಎಂದು ಹೇಳಿದರು.
ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣಚ್ಚ ಮಾತನಾಡಿ, ಕೋವಿಡ್ ಹೆಲ್ತ್ಕೇರ್ ಸೆಂಟರ್ ಮಾಡುವುದರಲ್ಲಿ ನಮ್ಮ ಅಭ್ಯಂತರವಿಲ್ಲ. ಆದರೆ ಬಡವರು ಕೂಲಿ ಕಾರ್ಮಿಕರು ಹೆಚ್ಚಾಗಿ ಇರುವ ಈ ಭಾಗಗಳಲ್ಲಿ ಕೋವಿಡ್ ಅಲ್ಲದೆ ಇತರೆ ಕಾಯಿಲೆಗಳು ಬಂದರೆ ಜನಸಾಮಾನ್ಯರು ಎಲ್ಲಿಗೆ ಹೋಗುವುದು. ವಸತಿ ಶಾಲೆಗಳಲ್ಲಿ ಕೋವಿಡ್ ಕೇಂದ್ರ ತೆರೆಯಲಿ. ವೀರಾಜಪೇಟೆ ಶಾಸಕರು ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಹೇಳಿದರು. ನಗರ ಕಾಂಗ್ರೆಸ್ ಅಧ್ಯಕ್ಷ ಜಿ.ಜಿ. ಮೋಹನ್ ಜಿಲ್ಲಾಡಳಿತ ಮರು ಪರೀಶೀಲಿಸಲಿ ಎಂದು ಒತ್ತಾಯಿಸಿ ದರು. ಗೋಷ್ಠಿಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಅಗಸ್ಟಿನ್ ಬೆನ್ನಿ, ವೀರಾಜಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಉಮ್ಮರ್ ಫಾರೂಕ್, ನಗರ ಕಾಂಗ್ರೆಸ್ ಕಾರ್ಯದರ್ಶಿ ಶಶಿಧರನ್ ಉಪಸ್ಥಿತರಿದ್ದರು.