ಮಡಿಕೇರಿ, ಏ. ೨೮: ಕೊರೊನಾ ಆರ್ಭಟದ ಹಿನ್ನೆಲೆಯಲ್ಲಿ ಸರ್ಕಾರ ತಾ. ೧೪ರವರೆಗೆ ಘೋಷಿಸಿರುವ ಕೋವಿಡ್ ಕರ್ಫ್ಯೂಗೆ ಮೊದಲ ದಿನ ಕೊಡಗು ಜಿಲ್ಲೆಯಲ್ಲಿ ಸ್ಪಂದನ ದೊರೆಯಿತು. ಬೆಳಿಗ್ಗೆ ೬ ರಿಂAದ ೧೦ ಗಂಟೆಯವರೆಗೆ ಅಗತ್ಯ ಸಾಮಗ್ರಿಗಳ ಖರೀದಿಯೊಂದಿಗೆ ಇತರ ವ್ಯಾಪಾರ ವಹಿವಾಟಿಗೆ ಅವಕಾಶವಿತ್ತು. ೧೦ ಗಂಟೆಯ ಬಳಿಕ ಬ್ಯಾಂಕ್ , ವೈದ್ಯಕೀಯ ಸೇವೆ ಹೊರತು ಪಡಿಸಿ ಎಲ್ಲವೂ ಬಂದ್ ಆಯಿತು. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಜನರ ಅನಗತ್ಯ ಓಡಾಟಕ್ಕೆ ಪೊಲೀಸರು ಕಡಿವಾಣ ಹಾಕಿದ್ದರು. ಅಧಿಕೃತ ಗುರುತಿನ ಚೀಟಿ ಹೊಂದಿರುವವರಿಗೆ ಮಾತ್ರ ಕೆಲಸದ ನಿಮಿತ್ತ ಓಡಾಟಕ್ಕೆ ಅವಕಾಶ ನೀಡಲಾಗಿತ್ತು. ಯಾವುದೇ ಕೆಲಸವಿಲ್ಲದೆ ಅನಗತ್ಯವಾಗಿ ಓಡಾಡುತ್ತಿದ್ದ ಕೆಲವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ ಘಟನೆಯೂ ನಡೆದಿದ್ದು, ನಗರ ವ್ಯಾಪ್ತಿಯಲ್ಲಿ ಪೊಲೀಸ್ ಬಿಗಿ ಭದ್ರತೆಯೊಂದಿಗೆ ಮುಖ್ಯ ರಸ್ತೆಗಳಲ್ಲಿ ಅಲ್ಲಲ್ಲಿ ಬ್ಯಾರಿಕೇಡ್ ಅಳವಡಿಸಿ ಅನಗತ್ಯ ಸಂಚಾರಕ್ಕೆ ತಡೆಯೊಡ್ಡಲಾಗಿತ್ತು.

ವೀರಾಜಪೇಟೆ: ಇಂದು ಬೆಳಿಗ್ಗೆ ೧೦ ಗಂಟೆಯ ನಂತರ ವೀರಾಜಪೇಟೆ ಪಟ್ಟಣ ಬಂದ್ ಆಗಿತ್ತು. ಬೆಳಿಗ್ಗೆ ಯಾವುದೇ ಖಾಸಗಿ ಹಾಗೂ ಸಾರಿಗೆ ಬಸ್‌ಗಳು, ಆಟೋ ರಿಕ್ಷಾಗಳು, ಟ್ಯಾಕ್ಷಿಗಳು ಸಂಚರಿಸಲಿಲ್ಲ. ಪಟ್ಟಣದಲ್ಲಿ ಜನ ಸಂಚಾರವು ವಿರಳವಾಗಿತ್ತು.

ಗೋಣಿಕೊಪ್ಪ : ಗೋಣಿಕೊಪ್ಪ ಸೇರಿದಂತೆ ಪೊನ್ನಂಪೇಟೆ ತಾಲೂಕು ವ್ಯಾಪ್ತಿಯಲ್ಲಿ ಬೆಳಿಗ್ಗೆ ೧೦ ಗಂಟೆಯವರೆಗೆ ಅಗತ್ಯ ವಸ್ತು ಖರೀದಿಗೆ ಹೆಚ್ಚು ಜನರು ಕಂಡು ಬಂದರು. ನಂತರ ಮನೆಗೆ ತೆರಳಿದರು. ಪೊಲೀಸ್ ಇಲಾಖೆ ಧ್ವನಿವರ್ಧಕದ ಮೂಲಕ ಜನರನ್ನು ಮನೆಗೆ

(ಮೊದಲ ಪುಟದಿಂದ) ತೆರಳುವಂತೆ ಸೂಚನೆ ನೀಡುತ್ತಿದ್ದರು. ಪಟ್ಟಣದಲ್ಲಿ ಔಷಧಿ ಸಿಂಪಡಣೆ ಮಾಡಲಾಯಿತು. ಬರೊಡಾ ಬ್ಯಾಂಕ್‌ನಲ್ಲಿ ಔಷಧ ಸಿಂಪಡಿಸಿ ಕೊರೊನಾ ಮುಂಜಾಗೃತೆ ತೆಗೆದುಕೊಳ್ಳಲಾಯಿತು.

ಪೊನ್ನಂಪೇಟೆ, ತಿತಿಮತಿ, ಬಾಳೆಲೆ, ಕಾನೂರು, ಹುದಿಕೇರಿ, ಅಮ್ಮತ್ತಿ, ಪಾಲಿಬೆಟ್ಟ ವ್ಯಾಪ್ತಿಯಲ್ಲಿ ಜನರ ಓಡಾಟ ಕಂಡು ಬರಲಿಲ್ಲ. ಪೊಲೀಸರು ಕೂಡ ಅಲ್ಲಲ್ಲಿ ನಿಂತು ಪಟ್ಟಣಕ್ಕೆ ಬರುವವರಿಂದ ಮಾಹಿತಿ ಕಲೆ ಹಾಕಿದರು ಅನಗತ್ಯ ಓಡಾಟಕ್ಕೆ ಅವಕಾಶ ನೀಡಲಿಲ್ಲ.

ಕುಶಾಲನಗರ: ಕರ್ಫ್ಯೂ ಘೋಷಣೆ ಹಿನ್ನೆಲೆ ಕುಶಾಲನಗರ ಸೇರಿದಂತೆ ತಾಲೂಕು ವ್ಯಾಪ್ತಿಯ ಗ್ರಾಮಗಳು ಸಂಪೂರ್ಣವಾಗಿ ಬಂದ್ ಆಗಿದ್ದವು.

ಸಿದ್ದಾಪುರ: ಸಿದ್ದಾಪುರದ ಪಟ್ಟಣ ಸೇರಿದಂತೆ ಬಹುತೇಕ ಪ್ರದೇಶಗಳಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದವು. ವಾಹನ ಸಂಚಾರ ಜನರ ಓಡಾಟ ಇಲ್ಲದೆ ಪಟ್ಟಣ ಬಿಕೋ ಎನ್ನುತ್ತಿತ್ತು ಸಿದ್ದಾಪುರದ ಸುತ್ತಮುತ್ತಲ ಪ್ರದೇಶಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಸಂಸ್ಥೆಯ ಕಾಫಿತೋಟದ ಕಾರ್ಮಿಕರಿಗೆ ಕೋವಿಡ್ ತಪಾಸಣೆಯನ್ನು ಸಿದ್ದಾಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಾಡಲಾಯಿತು. ಸಿದ್ದಾಪುರದ ಆಟೋ ಮಾಲೀಕರು ಹಾಗೂ ಚಾಲಕರ ಸಂಘದ ಅಧ್ಯಕ್ಷ ಎಂ ಆರ್ ಸಲೀಂ ಅವರು ಕಾರ್ಮಿಕರನ್ನು ಉಚಿತವಾಗಿ ಕರೆದುಕೊಂಡು ಬಂದು ತಪಾಸಣೆ ಮಾಡಿಸಿ ಮಾನವೀಯತೆ ಮೆರೆದರು.

ಸೋಮವಾರಪೇಟೆ: ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಇಂದಿನಿAದ ಜಾರಿಗೆ ತಂದಿರುವ ಕೊರೊನಾ ಕರ್ಫ್ಯೂಗೆ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತಗೊಂಡಿದ್ದು, ಬೆಳಿಗ್ಗೆ ೬ ಗಂಟೆಯಿAದ ೧೦ ಗಂಟೆಯವರೆಗೆ ತೆರೆಯಲ್ಪಟ್ಟಿದ್ದ ಅಂಗಡಿ ಮುಂಗಟ್ಟುಗಳು ನಂತರ ಬಂದ್ ಆದವು.

ಬೆಳಿಗ್ಗೆಯಿಂದಲೇ ಪಟ್ಟಣದಲ್ಲಿ ಹೆಚ್ಚಿನ ಜನ ಸಂಚಾರ ಇರಲಿಲ್ಲ. ಅಗತ್ಯ ವಸ್ತುಗಳ ಅಂಗಡಿ ಮುಂಗಟ್ಟುಗಳು ತೆರೆದಿದ್ದರೂ ಸಹ ಹೆಚ್ಚಿನ ವ್ಯಾಪಾರ ವಹಿವಾಟು ನಡೆಯಲಿಲ್ಲ. ಪಟ್ಟಣ ಸಮೀಪದ ಕೆಲ ಸಾರ್ವಜನಿಕರು ಮಾತ್ರ ಆಗಮಿಸಿ ದಿನಸಿ, ತರಕಾರಿ, ಹಾಲು ಖರೀದಿಸಿದ್ದನ್ನು ಹೊರತುಪಡಿಸಿದರೆ ಗ್ರಾಮೀಣ ಭಾಗದ ಮಂದಿ ಪಟ್ಟಣದತ್ತ ಸುಳಿಯಲಿಲ್ಲ. ೧೦ ಗಂಟೆಯವರೆಗೂ ನಿಧಾನಗತಿಯಲ್ಲಿ ನಡೆದ ವ್ಯಾಪಾರ, ೧೦ರ ನಂತರ ಸಂಪೂರ್ಣ ಸ್ತಬ್ಧಗೊಂಡಿತು.

ಸೋಮವಾರಪೇಟೆ ಪೊಲೀಸರು ಜೀಪ್‌ನಲ್ಲಿ ತೆರಳಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಸೂಚನೆ ನೀಡುತ್ತಿದ್ದರು. ಪೊಲೀಸರ ಸೂಚನೆಗೂ ಮೊದಲೇ ಬಹುತೇಕ ಅಂಗಡಿಗಳು ಮುಚ್ಚಿದ್ದವು. ಅತೀ ತುರ್ತು ಕೆಲಸ ಕಾರ್ಯಗಳು, ಆಸ್ಪತ್ರೆಗೆ ತೆರಳುವ ಮಂದಿ ಮಾತ್ರ ಪಟ್ಟಣದಲ್ಲಿ ಆಗೊಮ್ಮೆ ಈಗೊಮ್ಮೆ ಕಂಡುಬರುತ್ತಿದ್ದರು. ಪಟ್ಟಣದಲ್ಲಿ ಸಂಚರಿಸುತ್ತಿದ್ದ ಮಂದಿಯನ್ನು ಪೊಲೀಸರು ತಡೆದು ಮಾಹಿತಿ ಪಡೆದರು.

ಪಟ್ಟಣದಲ್ಲಿ ಮೆಡಿಕಲ್ ಅಂಗಡಿಗಳು ತೆರೆದಿದ್ದು, ರೋಗಿಗಳು ಹಾಗೂ ಸಂಬAಧಿಕರು ಔಷಧಿ ಖರೀದಿಸುತ್ತಿದ್ದರು. ಬ್ಯಾಂಕ್‌ಗಳು ಬೆಳಿಗ್ಗೆ ೧೦ ಗಂಟೆಯಿAದ ಮಧ್ಯಾಹ್ನ ೨ ಗಂಟೆಯವರೆಗೆ ತೆರೆದು ವಹಿವಾಟು ನಡೆಸಿದವು. ಸರ್ಕಾರಿ ಕಚೇರಿಗಳು ತೆರೆದಿದ್ದರೂ ಸಹ ಸಾರ್ವಜನಿಕರು ಕಂಡುಬರಲಿಲ್ಲ.

ಪೊನ್ನAಪೇಟೆ: ಲಾಕ್‌ಡೌನ್ ಘೋಷಣೆ ಹಿನ್ನೆಲೆ ಪೊನ್ನಂಪೇಟೆ ತಾಲೂಕು ವ್ಯಾಪ್ತಿ ಸಂಪೂರ್ಣವಾಗಿ ಬಂದ್ ಆಗಿತ್ತು. ವಾಣಿಜ್ಯ ನಗರ ಗೋಣಿಕೊಪ್ಪ ಸೇರಿದಂತೆ ಪೊನ್ನಂಪೇಟೆ, ಹುದಿಕೇರಿ, ಶ್ರೀಮಂಗಲ, ಕುಟ್ಟ, ಬಾಳೆಲೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಓಡಾಟ, ವಾಹನಗಳ ಸಂಚಾರ ಅತ್ಯಂತ ವಿರಳವಾಗಿತ್ತು.

ವೀರಾಜಪೇಟೆ ಡಿವೈಎಸ್ಪಿ ಜಯಕುಮಾರ್ ಮುಂಜಾನೆಯ ಸಮಯದಲ್ಲಿ ಆಗಮಿಸಿ ಇಲ್ಲಿನ ಕಾರ್ಯನಿರ್ವಹಣೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಬೆಳಿಗ್ಗೆ ತೆರೆಯಲ್ಪಟ್ಟ ನಿಗದಿತ ಅಂಗಡಿ ಮಳಿಗೆ, ಹೊಟೇಲ್, ಮೆಡಿಕಲ್, ಬೇಕರಿ, ತರಕಾರಿ, ಹಾಲಿನ ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ವಿರಳವಾಗಿತ್ತು. ಸರಕಾರಿ ನೌಕರರು ವಾಹನ ವ್ಯವಸ್ಥೆ ಇಲ್ಲದೆ ಸಂಕಷ್ಟ ಎದುರಿಸಿದರು. ಸಿಕ್ಕ ವಾಹನಗಳಲ್ಲಿ ಕಚೇರಿಗೆ ತೆರಳುವ ಪ್ರಯತ್ನ ಮಾಡಿದರು.

ಲಾಕ್‌ಡೌನ್ ಹಿನ್ನೆಲೆ ಪೊನ್ನಂಪೇಟೆಯಲ್ಲಿನ ಹಲವು ಸರಕಾರಿ ಕಚೇರಿಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಕಾರ್ಯ ನಿರ್ವಹಿಸಿದರು.

ಈ ವ್ಯಾಪ್ತಿಯ ಸಹಕಾರ ಸಂಘದ ಬ್ಯಾಂಕ್‌ಗಳು, ರಾಷ್ಟಿçÃಕೃತ ಬ್ಯಾಂಕುಗಳು ಕೋವಿಡ್ ನಿಯಮ ಪಾಲಿಸಿ ಕರ್ತವ್ಯ ನಿರ್ವಹಿಸಿದರು. ಗೋಣಿಕೊಪ್ಪ ಗ್ರಾಮ ಪಂಚಾಯಿತಿ ವತಿಯಿಂದ ವಿವಿಧ ಭಾಗದಲ್ಲಿ ಸ್ಯಾನಿಟೈಸ್ ಮಾಡಲಾಯಿತು. ನಗರ ಪೊಲೀಸ್ ಠಾಣಾಧಿಕಾರಿ ಸುಬ್ಬಯ್ಯ ನವರು ಆಯಕಟ್ಟು ಪ್ರದೇಶದಲ್ಲಿ ಅನಾವಶ್ಯಕವಾಗಿ ಓಡಾಟ ನಡೆಸುವ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿ, ಮನೆಗೆ ತೆರಳುವುವಂತೆ ಸೂಚನೆ ನೀಡಿದರು. ಹತ್ತು ಗಂಟೆಯ ನಂತರದಲ್ಲಿ ನಗರದಲ್ಲಿದ್ದ ಸಾಲು, ಸಾಲು ವಾಹನಗಳು ಖಾಲಿಯಾದವು. ಪೊನ್ನಂಪೇಟೆ, ಪಾಲಿಬೆಟ್ಟ, ಮೈಸೂರು ರಸ್ತೆಯಲ್ಲಿ ಬ್ಯಾರಿಕ್ಯಾಡ್ ಇಟ್ಟು ಅನಾವಶ್ಯಕವಾಗಿ ಓಡಾಡುವ ವಾಹನ ತಪಾಸಣೆ ನಡೆಸಲಾಯಿತು.

ತರಬೇತಿಗೆ ತಡೆ

ಕೊರೊನಾ ಕರ್ಫ್ಯೂ ಹಿನ್ನೆಲೆಯಲ್ಲಿ ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲವನ್ನೂ ಬಂದ್ ಮಾಡಬೇಕೆಂಬ ನಿಯಮವಿದ್ದರೂ ಕೂಡ ಅದನ್ನು ಉಲ್ಲಂಘಿಸಿ ಡಿಸಿಸಿ ಬ್ಯಾಂಕ್‌ನಲ್ಲಿ ಉದ್ಯೋಗ ನೇಮಕಾತಿ ತರಬೇತಿ ನಡೆಸುತ್ತಿದ್ದ ಬಗ್ಗೆ ದೊರೆತ ಮಾಹಿತಿಯನ್ವಯ ನಗರಸಭೆ ಅಧಿಕಾರಿಗಳು ಹಾಗೂ ಪೊಲೀಸರು ಧಾಳಿ ಮಾಡಿದ್ದಾರೆ. ಈ ಸಂದರ್ಭ ಅಲ್ಲಿ ಸುಮಾರು ೨೩ ಮಂದಿಗೆ ತರಬೇತಿ ನೀಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಅದಕ್ಕೆ ತಡೆಯೊಡ್ಡಿದೆ. ಈ ಬಗ್ಗೆ ‘ಶಕ್ತಿ’ಗೆ ಮಾಹಿತಿ ನೀಡಿರುವ ನಗರಸಭಾ ಆಯುಕ್ತ ರಾಮದಾಸ್ ಅವರು ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಸಂಬAಧಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ. ಈ ನಡುವೆ ಸಂತಮೈಕಲರ ಶಾಲೆಯಲ್ಲಿ ಕೋವಿಡ್ ವ್ಯಾಕ್ಸಿನ್ ನೀಡುವ ವ್ಯವಸ್ಥೆ ಮಾಡಲಾಗಿತ್ತಾದರೂ ವ್ಯಾಕ್ಸಿನ್ ಪಡೆಯಲು ಬಂದಿದ್ದವರು ಸಾಮಾಜಿಕ ಅಂತರ ಕಾಯ್ದುಕೊಳ್ಳದ ಬಗ್ಗೆ ದೊರೆತ ಮಾಹಿತಿ ಹಿನ್ನೆಲೆ ನಗರಸಭೆಯವರು ತೆರಳಿ ಸಾಮಾಜಿಕ ಅಂತರ ನಿಯಮ ಪಾಲನೆ ಮಾಡುವಂತೆ ಸೂಚಿಸಿದರು.