ಕುಶಾಲನಗರ, ಏ. ೨೫: ಕೇಂದ್ರ ,ರಾಜ್ಯ ಸರಕಾರಗಳು ಹೊರಡಿಸಿದ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ತಮ್ಮ ಶಿಬಿರವನ್ನು ಕೊರೊನಾ ಸೋಂಕು ಮುಕ್ತವಾಗಿರಿಸುವಲ್ಲಿ ಪೂರ್ಣ ಪ್ರಮಾಣದಲ್ಲಿ ಯಶಸ್ಸು ಕಂಡ ಬೈಲ್ಕೊಪ್ಪ ಟಿಬೆಟನ್ ಬೌದ್ಧ ಭಿಕ್ಷುಗಳ ಕೇಂದ್ರ ವಿಶ್ವದ ಎಲ್ಲೆಡೆಯ ಗಮನ ಸೆಳೆಯುತ್ತಿದೆ.ಬೈಲಕೊಪ್ಪ ನಿರಾಶ್ರಿತರ ಶಿಬಿರದ ಲಾಮಾ ಕ್ಯಾಂಪ್ನಲ್ಲಿ ಕಳೆದ ೪೦೦ ದಿನಗಳಿಂದ ಶಿಬಿರದ ಒಳಗೆ ಮತ್ತು ಹೊರತೆರಳುವ ತಮ್ಮ ಜನರ ಬಗ್ಗೆ ದಿನದ ೨೪ ಗಂಟೆಗಳ ಕಾಲ ನಿಗಾ ವಹಿಸುವುದರ ಮೂಲಕ ಕೊರೊನಾ ಸೋಂಕು ಶಿಬಿರ ಪ್ರವೇಶಿಸದಂತೆ ಕಟ್ಟುನಿಟ್ಟಾದ ಎಚ್ಚರ ಮುಂದುವರೆದಿದೆ.
೨೦೨೦ ರ ಮಾರ್ಚ್ ೧೮ ರಿಂದ ಬೈಲ್ಕೊಪ್ಪ ಟಿಬೆಟಿಯನ್ ನಿರಾಶ್ರಿತರ ಶಿಬಿರಕ್ಕೆ ಯಾವುದೇ ವಿದೇಶಿ ಪ್ರವಾಸಿಗರ ಭೇಟಿಗಾಗಲಿ, ಹೊರ ರಾಜ್ಯದ ಭಿಕ್ಷುಗಳಿಗೆ ಶಿಬಿರಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಬೌದ್ಧ ವಿಶ್ವ ವಿದ್ಯಾಲಯದ ಪ್ರಮುಖರು ತಿಳಿಸಿದ್ದಾರೆ. ಶಿಬಿರದ ಪ್ರಮುಖ ದ್ವಾರದಲ್ಲಿ ೩ ಪಾಳಿಯಲ್ಲಿ ಶಿಬಿರದ ಸ್ವಯಂಸೇವಕರು ಕಾವಲು ಕಾಯುತ್ತಿದ್ದು, ಕಟ್ಟುನಿಟ್ಟಾಗಿ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಮಾಡುವಲ್ಲಿ ಯಶಸ್ಸು ಕಂಡಿದ್ದಾರೆ. ಇದರ ಪರಿಣಾಮ ಶಿಬಿರದ ಒಳಭಾಗದಲ್ಲಿ ನೆಲೆಸಿರುವ ಬೌದ್ಧ ಭಿಕ್ಷುಗಳು, ಧರ್ಮ ಗುರುಗಳು ಇದುವರೆಗೆ ಕೊರೊನಾ ಸೋಂಕು ಮುಕ್ತರಾಗಲು ಕಾರಣವಾಗಿದೆ ಎನ್ನುತ್ತಾರೆ ಶಿಬಿರದ ಪ್ರಮುಖರಾದ ಫಾಲ್ಡೇನ್ ರಿಂಪೊಚೆ.
ಶಿಬಿರದ ಬಹುತೇಕ ಭಿಕ್ಷುಗಳು ಕೋವಿಡ್ ಲಸಿಕೆ ಕೂಡಾ ಹಾಕಿಸಿಕೊಂಡಿದ್ದು
(ಮೊದಲ ಪುಟದಿಂದ) ಈ ಬಗ್ಗೆ ಕೂಡ ಮಂಚೂಣಿಯಲ್ಲಿರುವುದಾಗಿ ಬೈಲ್ಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ ಟಿಬೆಟಿಯನ್ ಆಂತರಿಕ ಸರಕಾರದ ಪ್ರತಿನಿಧಿಗಳ ಚುನಾವಣೆ ನಡೆದಿದ್ದು, ಈ ಅವಧಿಯಲ್ಲೂ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿತ್ತು. ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೊರೊನಾ ಸೋಂಕು ತಡೆಗಟ್ಟಲು ಸಾಧ್ಯ ಎಂಬದನ್ನು ದೃಢಪಡಿಸಿರುವ ನಿರಾಶ್ರಿತ ಟಿಬೆಟನ್ ನಾಗರಿಕರು ಇತರರಿಗೆ ಮಾದರಿಯಾಗಿದ್ದಾರೆ ಎಂದರೆ ತಪ್ಪಾಗಲಾರದು. -ಚಂದ್ರಮೋಹನ್