ಮಡಿಕೇರಿ, ಏ. ೨೩: ಪ್ರಸ್ತುತ ಕೊರೊನಾ ಪರಿಸ್ಥಿತಿಯನ್ನು ಎದುರಿಸಲು ರಾಜ್ಯ ಸರಕಾರ ಕೈಗೊಂಡಿರುವ ಕಠಿಣ ಕ್ರಮದ ಪರಿಣಾಮವಾಗಿ ಇಂದು ಕೊಡಗು ಜಿಲ್ಲೆಯಾದ್ಯಂತ ಇದರ ಕರಾಳತೆ ಕಂಡು ಬಂದಿತು. ಸರಕಾರ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸಬಹುದಾದ ಅಂಗಡಿ - ಮುಂಗಟ್ಟುಗಳು ಹಾಗೂ ಇತರ ಚಟುವಟಿಕೆ ಹೊರತು ಪಡಿಸಿದರೆ ಬೇರೆ ಉದ್ಯಮಗಳು ಬಹುತೇಕ ಸ್ಥಗಿತಗೊಂಡಿದ್ದವು. ಇದರಿಂದಾಗಿ ಬಹುತೇಕ ಕಡೆಗಳಲ್ಲಿ ಜನಸಂದಣಿಯೂ ಕಡಿಮೆಯಾಗಿದ್ದು ಭಾಗಶಃ ಬಂದ್‌ನ ಮಾದರಿಯ ದೃಶ್ಯ ಎದುರಾಗಿತ್ತು. ಅಲ್ಲಲ್ಲಿ ಪೊಲೀಸರೂ ಹಾಗೂ ಸಂಬAಧಿತ ಇತರ ಅಧಿಕಾರಿಗಳ ತಂಡವೂ ರಸ್ತೆಗಿಳಿದು ಈ ಬಗ್ಗೆ ಅಗತ್ಯ ಮುನ್ನೆಚ್ಚರಿಕೆ ಯೊಂದಿಗೆ ಜನಜಾಗೃತಿ ಮೂಡಿಸುತ್ತಿದ್ದರೆ.

ಮಾರ್ಗಸೂಚಿಯಲ್ಲಿನ ನಿಯಮಗಳನ್ನು ಮೀರಿ ತೆರೆಯಲ್ಪಟ್ಟಿದ್ದ ಅಂಗಡಿ - ಮುಂಗಟ್ಟುಗಳನ್ನು ಎಚ್ಚರಿಕೆಯೊಂದಿಗೆ ಮುಚ್ಚಿಸಲಾಗಿರುವ ಕುರಿತೂ ವರದಿಯಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿಯೂ ಸೇರಿದಂತೆ ತಾಲೂಕು ಕೇಂದ್ರಗಳು ಹಾಗೂ ಇತರ ಪ್ರಮುಖ ಪಟ್ಟಣಗಳಲ್ಲಿ ಇದೇ ರೀತಿಯ ಪರಿಸ್ಥಿತಿ ಕಂಡು ಬಂದಿದೆ. ರಾತ್ರಿ ೯ ರಿಂದ ಬೆಳಿಗ್ಗೆ ೬ರ

ತನಕದ ಕರ್ಫ್ಯೂ ಹಿನ್ನೆಲೆಯಲ್ಲಿ

ನಿನ್ನೆ ಸಂಜೆಯಿAದಲೇ ಬಹುತೇಕ ಚಟುವಟಿಕೆಗಳು ಸ್ಥಗಿತ ಗೊಂಡAತಾಗಿದ್ದವು. ಹೊಟೇಲ್ ಗಳಿಂದ ಮದ್ಯದಂಗಡಿ- ಬಾರ್‌ಗಳಿಂದ

(ಮೊದಲ ಪುಟದಿಂದ) ಕೇವಲ ಪಾರ್ಸಲ್ ನೀಡಲು ಮಾತ್ರ ಅವಕಾಶವಿದ್ದು, ಇಂತಹ ಕಡೆಗಳಲ್ಲಿ ಸ್ವಲ್ಪಮಟ್ಟಿಗೆ ಬಿರುಸು ಕಂಡು ಬಂದಿತು. ಮಡಿಕೇರಿ ನಗರದಲ್ಲಿ ವರ್ಕ್ಶಾಪ್‌ಗಳನ್ನೂ ಪೊಲೀಸರು ದಿಢೀರಾಗಿ ಮುಚ್ಚಿಸಿರುವ ಪ್ರಸಂಗವೂ ನಡೆದಿದೆ. ಆದರೆ ಕೆಲವೊಂದು ವರ್ಕ್ಶಾಪ್‌ಗಳು ಕಾರ್ಯನಿರ್ವಹಿಸುತ್ತಿದ್ದ ಬಗ್ಗೆ ಮುಚ್ಚಲ್ಪಟ್ಟ ಮಾಲೀಕರು ಪ್ರಶ್ನಿಸುವಂತಾಗಿತ್ತು.

ಇAದು - ನಾಳೆ ಪೂರ್ತಿ ಕರ್ಫ್ಯೂ

ಸರಕಾರದ ನಿರ್ಧಾರದಂತೆ ವಾರಾಂತ್ಯದ ದಿನಗಳಾದ ತಾ. ೨೪ರ ಶನಿವಾರ ಹಾಗೂ ತಾ. ೨೫ರ ಭಾನುವಾರದಂದು ದಿನವಿಡೀ ಕರ್ಫ್ಯೂ ಘೋಷಣೆಯಾಗಿದ್ದು, ಇಂದಿನಿAದ (ತಾ.೨೪) ಎರಡು ದಿನಗಳ ಕಾಲ ಜಿಲ್ಲೆ ಸ್ತಬ್ದಗೊಳ್ಳಲಿದೆ. ಈ ಸಂದರ್ಭ ಕೇವಲ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ವಾರಾಂತ್ಯದ ಕರ್ಫ್ಯೂ ಸಂದರ್ಭದಲ್ಲಿ ಬೆ. ೬ ರಿಂದ ೧೦ ಗಂಟೆಯವರೆಗೆ ಮಾತ್ರ ಆಹಾರ, ದಿನಸಿ, ಹಣ್ಣು ಹಂಪಲು, ತರಕಾರಿ, ಹಾಲಿನ ಉತ್ಪನ್ನ, ಮಾಂಸ - ಮೀನು ಮಾರಾಟ ಮಳಿಗೆ ತೆರೆಯಲು ಅವಕಾಶವಿದೆ. ಇತರ ಮಾರ್ಗಸೂಚಿಗಳನ್ನು ಈಗಾಗಲೇ ಜಿಲ್ಲಾಡಳಿತ ಪ್ರಕಟಿಸಿದೆ. ಶುಕ್ರವಾರ ರಾತ್ರಿ ೯ ರಿಂದಲೇ ಕರ್ಫ್ಯೂ ಜಾರಿಯಾಗಿದ್ದು, ತಾ. ೨೬ರ ಸೋಮವಾರ ಬೆಳಿಗ್ಗೆ ೬ ಗಂಟೆಯ ತನಕವೂ ಇದು ಮುಂದುವರಿಯಲಿದೆ.

ಬಾಳೆಲೆ ಸಂತೆ ರದ್ದು

ಗೋಣಿಕೊಪ್ಪ ವರದಿ: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ, ತಾ. ೨೬ ರಂದು ನಡೆಯಬೇಕಿರುವ ಬಾಳೆಲೆ ಸಂತೆಯನ್ನು ರದ್ದು ಪಡಿಸಲು ಶುಕ್ರವಾರ ಬಾಳೆಲೆ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಟಾಸ್ಕ್ಫೋರ್ಸ್ ಸಭೆಯಲ್ಲಿ ನಿರ್ಧರಿಸಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಪೋಡಮಾಡ ಸುಖೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂತೆಯನ್ನು ರದ್ದು ಪಡಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಅಗತ್ಯ ವಸ್ತು ಖರೀದಿಸಲು ಅವಕಾಶ ನೀಡುವಂತೆ ನಿರ್ಧರಿಸಲಾಯಿತು. ಸಭೆಯಲ್ಲಿ ಆಶಾ ಕಾರ್ಯಕರ್ತೆ, ಶಾಲಾ ಶಿಕ್ಷಕ ವರ್ಗ, ಪೊಲೀಸ್ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.

ಪAಚಾಯಿತಿ ಸದಸ್ಯರಾದ ಅದೇಂಗಡ ವಿನು ಉತ್ತಪ್ಪ, ಜಾನಕಿ, ಪಿಡಿಒ ಮನ್‌ಮೋಹನ್, ಸ್ಥಳೀಯ ವೈದ್ಯಾಧಿಕಾರಿ ಡಾ. ಅಶೋಕ್ ಇದ್ದರು.

ಗೋಣಿಕೊಪ್ಪಲುವಿನಲ್ಲಿ ದಂಡ

ಗೋಣಿಕೊಪ್ಪಲು: ಕೋವಿಡ್ - ೧೯ ರ ನಿಯಮಗಳನ್ನು ಉಲ್ಲಂಘನೆ ಮಾಡಿ, ಸಾಮಾಜಿಕ ಅಂತರವನ್ನು ಕಾಪಾಡದೇ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಅಂಗಡಿ ಮಳಿಗೆಗಳ ಮಾಲೀಕರಿಗೆ ಗೋಣಿಕೊಪ್ಪ ಪೋಲಿಸ್ ಠಾಣೆಯ ಎಸ್.ಐ.ಸುಬ್ಬಯ್ಯ ದಂಡ ವಿಧಿಸಿ ಎಚ್ಚರಿಕೆ ನೀಡಿದರು. ಕಾರ್ಯಾಚರಣೆಯಲ್ಲಿ ಗೋಣಿಕೊಪ್ಪ ಪಂಚಾಯತಿ ಪಿಡಿಒ ಸಿಬ್ಬಂದಿಗಳು, ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.

ವಾರದ ಸಂತೆ ರದ್ದು

ಮೇ ೪ ರವರೆಗೆ ಗೋಣಿಕೊಪ್ಪಲುವಿನಲ್ಲಿ ಸಂತೆ ವ್ಯಾಪಾರವನ್ನು ರದ್ದುಗೊಳಿಸಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ತಿಮ್ಮಯ್ಯ ಆದೇಶ ಹೊರಡಿಸಿದ್ದಾರೆ.

ವೀರಾಜಪೇಟೆ

ವೀರಾಜಪೇಟೆ: ಸರಕಾರ ಘೋಷಿಸಿರುವ ಸೆಮಿ ಲಾಕ್‌ಡೌನ್‌ನ ಮಾರ್ಗ ಸೂಚಿಯಂತೆ ಇಂದು ಇಲ್ಲಿನ ಸಮುಚ್ಚಯ ಪೊಲೀಸ್ ಠಾಣೆಗಳ ಪೊಲೀಸರು ಅಗತ್ಯ ಸೇವೆಗಳ ಅಂಗಡಿಗಳನ್ನು ಹೊರತುಪಡಿಸಿ ಇತರ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಲಾತ್ಕಾರವಾಗಿ ಮುಚ್ಚಿಸಿದರು. ಇದರಿಂದ ವೀರಾಜಪೇಟೆಯಲ್ಲಿ ಇಂದು ಪಟ್ಟಣದ ಜನ ಸಂಚಾರ ವಿರಳವಾಗಿತ್ತು.

ಸಾರಿಗೆ ಸಂಸ್ಥೆಯ ಹೊರ ಊರಿಗೆ ತೆರಳಲು ಚಾಲಕರ ಸಿಬ್ಬಂದಿಗಳ ಮುಷ್ಕರ ಸ್ಥಗಿತಗೊಂಡಿದ್ದರೂ ಸಾರಿಗೆ ಬಸ್ಸು ನಿಲ್ದಾಣ ಪ್ರಯಾಣಿಕರಿಲ್ಲದೆ ಬಣಗುಡುತ್ತಿದ್ದವು. ಬಸ್ಸು ನಿಲ್ದಾಣದಲ್ಲಿ ಹೊರ ಊರಿನ ವಿವಿಧೆಡೆಗಳಿಗೆ ತೆರಳಲು ಸಿದ್ಧವಾಗಿದ್ದರೂ ಪ್ರಯಾಣಿಕರ ಕೊರತೆಯಿಂದ ಬಸ್ಸು ನಿಂತಲ್ಲೆ ನಿಂತಿದ್ದವು. ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ಕೊಡಗಿನ ವಿವಿಧೆಡೆಗಳಿಗೆ ಬಸ್ ಸೌಲಭ್ಯವಿದ್ದರೂ ಪ್ರಯಾಣಿಕರ ಕೊರತೆಯಿಂದ ಬಸ್‌ಗಳು ಬಸ್ ನಿಲ್ದಾಣದಲ್ಲಿ ನಿಲ್ಲಬೇಕಾಯಿತು. ಖಾಸಗಿ ಬಸ್ ನಿಲ್ದಾಣದ ಸುತ್ತಮುತ್ತವಿರುವ ಅಂಗಡಿಗಳನ್ನು ಪೊಲೀಸರು ಸೆಮಿ ಲಾಕ್‌ಡೌನ್ ನಿಮಿತ್ತ ಬೆಳಿಗ್ಗೆ ಬಂದ್ ಮಾಡಿದರು.

ಸೋಮವಾರಪೇಟೆ

ಸೋಮವಾರಪೇಟೆ: ಸೋಮವಾರಪೇಟೆ ಪಟ್ಟಣದ ಹೊಟೇಲ್, ಕ್ಯಾಂಟೀನ್, ಬೇಕರಿ, ದಿನಸಿ, ತರಕಾರಿ, ಹಾರ್ಡ್ವೇರ್, ಕೃಷಿ ಯಂತ್ರೋಪಕರಣದ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಪಂಚಾಯಿತಿ ಅಧಿಕಾರಿಗಳು ಸೂಚನೆ ನೀಡಿದರು.

ಪಟ್ಟಣದಲ್ಲಿ ಸಂಚರಿಸಿದ ಅಧಿಕಾರಿಗಳು ಮೈಕ್ ಮೂಲಕ ಪರಿಷ್ಕೃತ ಆದೇಶದ ಬಗ್ಗೆ ವರ್ತಕರು ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಅದರಂತೆ ಬಟ್ಟೆ ಮಾರಾಟ ಮಳಿಗೆ, ವರ್ಕ್ಶಾಪ್‌ಗಳು, ಟೈಲರಿಂಗ್, ಚಿನ್ನಾಭರಣ ಮಳಿಗೆ, ಪಾತ್ರೆ ಅಂಗಡಿ, ಶೂ ಅಂಗಡಿಗಳು ಸೇರಿದಂತೆ ಇತರ ಅಂಗಡಿ ಮುಂಗಟ್ಟುಗಳನ್ನು ವರ್ತಕರು ಬಂದ್ ಮಾಡಿ ಮನೆಗೆ ತೆರಳಿದರು.

ಸರ್ಕಾರದ ಪರಿಷ್ಕೃತ ಆದೇಶದ ಪ್ರಕಾರ ದಿನಸಿ ಅಂಗಡಿಗಳು, ಹಣ್ಣು ಹಂಪಲು, ತರಕಾರಿ, ಹಾಲಿನ ಡೈರಿ, ಮಾಂಸ-ಮೀನು ಮಾರಾಟಕ್ಕೆ ಅವಕಾಶವಿದೆ. ಹೊಟೇಲ್ ಹಾಗೂ ತಿಂಡಿ ತಿನಿಸಿನ ಅಂಗಡಿಗಳಲ್ಲಿ ಪಾರ್ಸೆಲ್ ಮಾತ್ರ ನೀಡಬೇಕಿದೆ. ಲಾಡ್ಜ್ಗಳಲ್ಲಿ ಕೋವಿಡ್ ನಿಯಮ ಪಾಲಿಸಿ ತಂಗಲು ಅವಕಾಶವಿದೆ. ವೈನ್‌ಶಾಪ್, ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಪಾರ್ಸೆಲ್ ನೀಡಬೇಕಿದೆ. ಬ್ಯಾಂಕ್, ಇನ್ಶೂರೆನ್ಸ್ ಕಚೇರಿ, ಎಟಿಎಂಗಳು, ಕೋಲ್ಡ್ ಸ್ಟೋರೇಜ್, ಕಟ್ಟಡ ಸಾಮಾಗ್ರಿಗಳ ಅಂಗಡಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಉಳಿದಂತೆ ಸೆಲೂನ್, ಬ್ಯೂಟಿಪಾರ್ಲರ್‌ಗಳಲ್ಲಿ ಕೋವಿಡ್ ನಿಯಮಗಳಿಗೆ ಒಳಪಟ್ಟು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಷರತ್ತುಗಳಿಗೆ ಒಳಪಟ್ಟು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಇವುಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಂದಿನ ಆದೇಶದವರೆಗೆ ಬಂದ್ ಮಾಡುವಂತೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಬ್ಯಾಂಕ್‌ನಲ್ಲಿ ೩ ಮಂದಿಗೆ ಅವಕಾಶ: ಕೋವಿಡ್ ವೈರಸ್ ವ್ಯಾಪಕವಾಗಿ ಹರಡುತ್ತಿರುವುದನ್ನು ತಡೆಗಟ್ಟುವ ಉದ್ದೇಶದಿಂದ ಪಟ್ಟಣದ ಬಹುತೇಕ ಬ್ಯಾಂಕ್‌ಗಳಲ್ಲಿ ಒಂದು ಬಾರಿಗೆ ಕೇವಲ ಮೂವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಹೆಚ್ಚುತ್ತಿರುವ ಪಾಸಿಟಿವ್ ಪ್ರಕರಣ

ಸೋಮವಾರಪೇಟೆ ತಾಲೂಕಿನಲ್ಲಿ ೧೫೫ ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಪಟ್ಟಣಕ್ಕೆ ಒತ್ತಿಕೊಂಡಿರುವ ಕಪ್ಪೆಗುಂಡಿ ರಸ್ತೆ, ಹಾನಗಲ್ಲು, ಆಲೇಕಟ್ಟೆ, ದೊಡ್ಡಮಳ್ತೆ, ಕುಸುಬೂರು, ತಣ್ಣೀರುಹಳ್ಳ, ಮಸಗೋಡು, ಗಣಗೂರು ಗ್ರಾಮಗಳಿಂದ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಶನಿವಾರಸಂತೆ, ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲೂ ಹೊಸ ಪ್ರಕರಣಗಳು ಕಂಡುಬರುತ್ತಿದ್ದು, ಸಾರ್ವಜನಿಕರು ಕೊರೊನಾ ನಿಯಮಾವಳಿಗಳನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಅನುಸರಿಸುವ ಅನಿವಾರ್ಯತೆ ಬಂದೊದಗಿದೆ.

ನಾಪೋಕ್ಲುವಿನಲ್ಲಿ

ನಾಪೋಕ್ಲು: ಅಗತ್ಯ ವಸ್ತುಗಳ ಮಾರಾಟ ಹೊರತುಪಡಿಸಿ ಉಳಿದ ಎಲ್ಲಾ ಮಾರಾಟ ಮಳಿಗೆ, ಅಂಗಡಿ-ಮುAಗಟ್ಟುಗಳನ್ನು ಬೆಳಿಗ್ಗೆ ೧೦ ಗಂಟೆಯ ನಂತರ ಮುಚ್ಚಿಸಲಾಗಿದೆ. ಕೊರೊನಾ ಹಿನ್ನೆಲೆ ಪಟ್ಟಣದಲ್ಲಿ ಸಾರ್ವಜನಿಕ ಸಂಚಾರ ವಿರಳವಾಗಿತ್ತು. ಬಸ್‌ಗಳ ಸಂಚಾರ ಎಂದಿನAತಿದ್ದರೂ, ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖ ಕಂಡು ಬಂತು.

ಶನಿವಾರಸAತೆ ಪಟ್ಟಣದಲ್ಲಿ

ಮುಳ್ಳೂರು: ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ದೇವರಾಜ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ, ಮತ್ತಿತರ ಅಧಿಕಾರಿಗಳು, ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಸರಕಾರದ ಮಾರ್ಗಸೂಚಿಯನ್ನು ಪಾಲಿಸದೆ ವ್ಯಾಪಾರ ಮಾಡುತ್ತಿದ್ದ ಕೆಲವು ಅಂಗಡಿ, ಕ್ಯಾಂಟೀನು, ಇತರ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದರು. ವಾಹನ ಚಾಲಕರು ಮತ್ತು ಇನ್ನು ಮುಂದೆ ಮಾಸ್ಕ್ ಧರಿಸದೆ ತಿರುಗಾಡಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಪಟ್ಟಣದ ಕೆಆರ್‌ಸಿ ವೃತ್ತ, ಚಂಗಡಹಳ್ಳಿ ರಸ್ತೆ, ಐಬಿ ರಸ್ತೆ, ೧ನೇ ವಿಭಾಗದಲ್ಲಿ ಪೊಲೀಸರು ಮತ್ತು ಅಧಿಕಾರಿಗಳು ಕೊರೊನಾ ಹಿನ್ನೆಲೆ ಜಾಗೃತಿ ಕಾರ್ಯಾಚರಣೆ ನಡೆಸಿದರು.

ಸಿದ್ದಾಪುರ

ಸಿದ್ದಾಪುರ: ಸಿದ್ದಾಪುರದಲ್ಲಿ ಶುಕ್ರವಾರದಂದು ದಿನಸಿ ಹಾಗೂ ತರಕಾರಿ ಅಂಗಡಿಗಳು ಬಿಟ್ಟು ಬಹುತೇಕ ಅಂಗಡಿಗಳನ್ನು ಮುಚ್ಚಲಾಯಿತು. ಸಿದ್ದಾಪುರ ಪಟ್ಟಣದ ಸುತ್ತಮುತ್ತಲಿನಲ್ಲಿ ಇರುವ ಬಟ್ಟೆ ಅಂಗಡಿಗಳು ಹಾಗೂ ಎಲೆಕ್ಟಾçನಿಕ್ಸ್ ವಸ್ತುಗಳು ಮೊಬೈಲ್ ಮಾರಾಟದ ಅಂಗಡಿಗಳನ್ನು ಪೊಲೀಸರು ಮುಚ್ಚಿಸಿದರು. ಪಟ್ಟಣದ ಸುತ್ತಮುತ್ತಲ ಜನರು ಗುಂಪುಗೂಡದAತೆ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಾಸ್ಕ್ ಧರಿಸುವಂತೆ ಸೂಚನೆ ನೀಡಿದರು. ಸಿದ್ದಾಪುರ ಠಾಣಾಧಿಕಾರಿ ಮೋಹನ್‌ರಾಜ್ ನೇತೃತ್ವದಲ್ಲಿ ಪೊಲೀಸರು ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದ್ದಾರೆ.

ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಗತ್ಯ ವಸ್ತುಗಳು ಹೊರತುಪಡಿಸಿ ಬೇರೆ ಯಾವುದೇ ವ್ಯಾಪಾರ ವಹಿವಾಟುಗಳು ಮಾಡದಂತೆ ಗ್ರಾಮ ಪಂಚಾಯಿತಿ ಪ್ರಕಟಣೆಯಲ್ಲಿ ತಿಳಿಸಿದೆ. ಇದಲ್ಲದೆ ಭಾನುವಾರದಂದು ನಡೆಯುವ ಸಂತೆಯನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಲಾಗಿದೆ.

ಸುಂಟಿಕೊಪ್ಪ

ಸುAಟಿಕೊಪ್ಪ: ಸುಂಟಿಕೊಪ್ಪದಲ್ಲಿ ಬಹುತೇಕ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು. ಸುಂಟಿಕೊಪ್ಪ ನಗರದಲ್ಲಿ ಹೊಟೇಲ್‌ಗಳು ಮುಚ್ಚಿರುವುದರಿಂದ ಹೊರಗಿನಿಂದ ಬಂದ ಜನರು ಆಹಾರಕ್ಕಾಗಿ ಪರದಾಡುವಂತಾಯಿತು. ಆದರೆ ತರಕಾರಿ ಅಂಗಡಿ ದಿನಸಿ ಅಂಗಡಿಗಳಿಗೆ ಅವಕಾಶ ನೀಡಿದ ಪರಿಣಾಮ ಮುಂದಿನ ದಿನಗಳಲ್ಲಿ ಲಾಕ್‌ಡೌನ್ ಆಗಬಹುದೆಂಬ ಹೆದರಿಕೆಯಿಂದ ಜನ ಮುಗಿ ಬಿದ್ದು ತರಕಾರಿ ಆಹಾರ ಧಾನ್ಯ ಔಷಧಿಗಳನ್ನು ಖರೀದಿ ಮಾಡುವುದು ಕಂಡು ಬಂತು. ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯಿAದ ಮುನ್ನೆಚ್ಚರಿಕಾ ಕ್ರಮವಾಗಿ ಅಂಗಡಿ, ಹೊಟೇಲ್ ಹಾಗೂ ಚರಂಡಿಗಳಿಗೆ ಸ್ಯಾನಿಟೈಸರ್ ಸಿಂಪಡಿಸಿ ಸ್ವಚ್ಛಗೊಳಿಸಲಾಯಿತು.