ಕಣಿವೆ, ಏ. ೨೧: ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳ ಪೋಷಕರ ಸಭೆ ನಡೆಯಿತು.

ಶಾಲಾ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್ ಈ ಸಂದರ್ಭ ಪೋಷಕರೊಂದಿಗೆ ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರಷ್ಟೇ ಪೋಷಕರು ಕೂಡ ಜವಾಬ್ದಾರಿ ವಹಿಸಬೇಕು.

ಶಾಲೆಯಲ್ಲಿ ಶಿಕ್ಷಕರು ಕಲಿಸಿದ್ದನ್ನು ಮಕ್ಕಳು ಮನೆಯಲ್ಲಿ ಕಲಿಯುವಂತಹ ಪೂರಕ ವಾತಾವರಣವನ್ನು ಪೋಷಕರು ಕಲ್ಪಿಸಬೇಕಿದೆ. ಈ ಕಳೆದ ಎರಡು ವರ್ಷಗಳಿಂದ ಇಡೀ ಮನುಕುಲವನ್ನು ಕಾಡುತ್ತಿರುವ ಕೊರೊನಾ ಸಂಕಷ್ಟದ ನಡುವೆಯೂ ಸರ್ಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಧಕ್ಕೆಯಾಗದಂತೆ ಎಲ್ಲಾ ಅನುಕೂಲತೆಗಳನ್ನು ಒದಗಿಸುತ್ತಿದೆ.

ಹತ್ತನೇ ತರಗತಿ ಮಕ್ಕಳಿಗೆ ಶಾಲೆಯಲ್ಲಿ ಸಂಜೆ ಪಾಠವನ್ನು ಹೇಳಿಕೊಡುವ ಮೂಲಕ ಜೂನ್ ತಿಂಗಳಲ್ಲಿ ನಡೆಯುವ ವಾರ್ಷಿಕ ಪರೀಕ್ಷೆಗೆ ಅಣಿಗೊಳಿಸಲು ನಮ್ಮ ಪ್ರಯತ್ನಕ್ಕೆ ಪೋಷಕರು ಸಹಕಾರ ನೀಡಬೇಕೆಂದು ಪ್ರೇಮಕುಮಾರ್ ಇದೇ ಸಂದರ್ಭ ಕೋರಿದರು.ಇದೇ ಸಂದರ್ಭ ವಿಷಯವಾರು ಶಿಕ್ಷಕರಿಂದ ಮಕ್ಕಳ ಕಲಿಕೆ ಹಾಗೂ ಅಂಕ ಗಳಿಕೆಯ ಬಗ್ಗೆ ಪೋಷಕರು ಮಾಹಿತಿ ಪಡೆದರು.ಶಿಕ್ಷಕರಾದ ಅನ್ಸೀಲಾ ರೇಖಾ, ಕೆ. ಗೋಪಾಲಕೃಷ್ಣ, ರಮೇಶ್, ಅನಿತಾ ಕುಮಾರಿ, ರಮ್ಯಾ, ಗೀತಾ ಹಾಗೂ ದಯಾನಂದಪ್ರಕಾಶ್ ಇದ್ದರು.