ಸುಂಟಿಕೊಪ್ಪ, ಏ. ೨೧: ಉಲುಗುಲಿ ಪನ್ಯ ಗ್ರಾಮದ ಗ್ರಾಮದೇವತೆಯಾದ ಶ್ರೀ ಬೆಳ್ಳಾರಿಕಮ್ಮ ದೇವರ ವಾರ್ಷಿಕೋತ್ಸವ ಹಾಗೂ ಮಹಾಪೂಜೆ, ಎತ್ತು ಪೋರಾಟ್, ಚೌರಿಕುಣಿತವನ್ನು ಶೃದ್ಧಾಭಕ್ತಿಯಿಂದ ದೇವಾಸ್ಥಾನದಲ್ಲಿ ನೆರವೇರಿಸುವ ಮೂಲಕ ಶ್ರೀ ಬೆಳ್ಳಾರಿಕಮ್ಮ ದೇವರ ವಾರ್ಷಿಕೋತ್ಸವಕ್ಕೆ ತೆರೆಯೆಳೆಯಲಾಯಿತು.

ಉಲುಗುಲಿ ಪನ್ಯ ಗ್ರಾಮದ ಗ್ರಾಮ ದೇವತೆಯಾದ ಬೆಳ್ಳಾರಿಕಮ್ಮ ಉತ್ಸವದ ಅಂಗವಾಗಿ ಕಳೆದ ೬ ದಿನಗಳ ಕಾಲ ಸುಂಟಿಕೊಪ್ಪ ಉಲುಗುಲಿ ಆಂಜನಗೇರಿ ಬೆಟ್ಟಗೇರಿ, ಹರದೂರು ಗ್ರಾಮದ ಜನರು, ಗ್ರಾಮಸ್ಥರು ವ್ರತಾಚರಣೆಯ ಅಂಗವಾಗಿ ವಿಶೇಷ ಪೂಜೆಯಲ್ಲಿ ಭಾಗಿಯಾದರು. ದೇವಾಲಯದ ಸುತ್ತ ಚೌರಿಕುಣಿತ ನಡೆಸುತ್ತ ದೇವಿಗೆ ಪೂಜೆಯನ್ನು ಅರ್ಪಿಸುವುದು ದೇವಸ್ಥಾನ ಮತ್ತು ಗ್ರಾಮದ ವಾಡಿಕೆಯಾಗಿದೆ. ಕೊನೆಯ ದಿನವಾದ ಸೋಮವಾರ ಕೊಡವ ಮತ್ತು ಗೌಡ ಮನೆತನದ ಪುರುಷರು ಮತ್ತು ಯುವಕರು ಕೊಡಗಿನ ಸಾಂಪ್ರ‍್ರದಾಯಿಕ ಉಡುಪು ಧರಿಸಿ ದೇವಾಲಯದ ಭಂಡಾರವನ್ನು ಗ್ರಾಮದ ಮಂದನ ರಮೇಶ್ ಅವರ ಮನೆಯಿಂದ ಎತ್ತಿನ ಮೇಲೆ ಇರಿಸುವ ಮೂಲಕ ವಾದ್ಯಗೋಷ್ಠಿಯೊಂದಿಗೆ ದೇವಾಲಯಕ್ಕೆ ಮೆರವಣಿಗೆಯೊಂದಿಗೆ ತಂದು ದೇವಾಲಯದಲ್ಲಿ ಭಂಡಾರವನ್ನು ಸಮರ್ಪಿಸಿದರು. ಗ್ರಾಮದ ಜನತೆಯಿಂದ ಈಡುಗಾಯಿ, ಎತ್ತುಪೋರಾಟ್, ಮೇದಕುಟ್ಟಿಗೆ ಬೆಳಕಾಟ್ ಹಾಗೂ ಚೌರಿಕುಣಿತದಲ್ಲಿ ಪುರುಷರು-ಯುವಕರು ಪಾಲ್ಗೊಂಡರು. ನಂತರ ದೇವಿಗೆ ಪೂಜೆ ಮಹಾಮಂಗಳಾರತಿ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆಯನ್ನು ನಡೆಸಲಾಯಿತು.

ಪೂಜಾ ಕೈಂಕರ್ಯಗಳನ್ನು ಅರ್ಚಕರಾದ ಗಣೇಶ್‌ಶರ್ಮ, ಮಂಜುನಾಥ ಉಡುಪ, ಉದಯಭಟ್ ನೆರವೇರಿಸಿದರು. ವಿವಿಧ ಭಾಗಗಳಿಂದ ನೂರಾರು ಸಂಖ್ಯೆಯಲ್ಲಿ ಗ್ರಾಮದ ಜನತೆಯು ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದರು.