ಮಡಿಕೇರಿ, ಏ. ೨೧: ಗಾಳಿಬೀಡು ಸ್ನೇಹಿತರ ಯುವಕ ಸಂಘದ ೩೮ನೇ ವಾರ್ಷಿಕೋತ್ಸವ ಮತ್ತು ಯುಗಾದಿ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಕ್ರೀಡೋತ್ಸವಕ್ಕೆ ಸಂಭ್ರಮದ ತೆರೆ ಬಿದ್ದಿತು.

ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ ತಾಲೂಕು ಯುವ ಒಕ್ಕೂಟ, ಅಡ್ಕದ ಬಾಣೆ ಸ್ನೇಹಿತರ ಯುವಕ ಸಂಘ, ಶ್ರೀಮಾದುರಪ್ಪ, ಶ್ರಿನಿಧಿ ಮತ್ತು ತ್ರಿವೇಣಿ ಯುವಕ ಸಂಘದ ಆಶ್ರಯದಲ್ಲಿ ಗಾಳಿಬೀಡುವಿನ ಅಡ್ಕದ ಬಾಣೆಯಲ್ಲಿ ಕ್ರೀಡಾಕೂಟಗಳು ನಡೆದವು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಸ್ಥಾಪಕಾಧ್ಯಕ್ಷ ಕೋಳುಮುಡಿಯನ ಆರ್. ಅನಂತ್‌ಕುಮಾರ್, ಸರ್ವ ಸದಸ್ಯರು ಒಗ್ಗಟ್ಟಿನಿಂದ ಸಂಘವನ್ನು ಕಟ್ಟಿ ಬೆಳೆಸಿದ್ದು, ಇನ್ನು ಮುಂದೆಯೂ ಸಮಾಜಮುಖಿ ಕಾರ್ಯಗಳ ಮೂಲಕ ಮಾದರಿ ಸಂಘವನ್ನಾಗಿ ಮಾಡಬೇಕೆಂದು ಕರೆ ನೀಡಿದರು.

ಗಾಳಿಬೀಡು ಗ್ರಾ.ಪಂ. ಉಪಾಧ್ಯಕ್ಷ ಉಡುದೋಳಿರ ಗಿರೀಶ್ ಮಾತನಾಡಿ, ಗ್ರಾಮದಲ್ಲಿ ಒಗ್ಗಟ್ಟನ್ನು ಮೂಡಿಸಲು ಮತ್ತು ಯುವ ಜನತೆಯಲ್ಲಿ ಕ್ರೀಡಾ ಸ್ಫೂರ್ತಿಯನ್ನು ತುಂಬಲು ಕ್ರೀಡಾಕೂಟಗಳು ಸಹಕಾರಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ೧೦ನೇ ತರಗತಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ಗಾಳಿಬೀಡು ಪ್ರೌಢಶಾಲೆಯ ಇಬ್ಬರು ಸಾಧಕ ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು.

ಕ್ರೀಡಾ ವಿಜೇತರು: ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ನೇಹಿತರ ಯುವಕ ಸಂಘ ಪ್ರಥಮ ಹಾಗೂ ದ್ವಿತೀಯ ಬಹುಮಾನವನ್ನು ಗಾಳಿಬೀಡು ಇವ್ನಿಂಗ್ ಕ್ರಿಕೆಟರ್ಸ್ ತಂಡ ಪಡೆದುಕೊಂಡಿತು.

ಥ್ರೋಬಾಲ್‌ನಲ್ಲಿ ವರಡಾ ಮಹಿಳಾ ತಂಡ ಪ್ರಥಮ ಹಾಗೂ ಗಾಳಿಬೀಡು ಮಹಿಳಾ ತಂಡ ದ್ವೀತಿಯ ಸ್ಥಾನ ಪಡೆದುಕೊಂಡಿತು. ಗುಡ್ಡಗಾಡು ಓಟದಲ್ಲಿ ಕೊಂಬಾರನ ಮದನ್ ಪ್ರಥಮ ಸ್ಥಾನ ಪಡೆದುಕೊಂಡರು. ಅಲ್ಲದೆ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಪಾಲ್ಗೊಂಡು ವಿಜೇತರಾದ ಗ್ರಾಮಸ್ಥರಿಗೂ ಬಹುಮಾನ ವಿತರಿಸಲಾಯಿತು.

ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್, ಗಾಳಿಬೀಡು ಗ್ರಾ.ಪಂ. ಸದಸ್ಯ ಯಾಲದಾಳು ಎಸ್. ರಾಜಶೇಖರ್, ಮಾಜಿ ಉಪಾಧ್ಯಕ್ಷೆ ಬದಲೇರ ರಾಣಿ ಮುತ್ತಣ್ಣ, ಗಾಳಿಬೀಡು ಮಹಿಳಾ ಸಮಾಜದ ಅಚ್ಚಪಟ್ಟೀರ ಜಿ. ಕವಿತ ಹಾಗೂ ಪ್ರಮುಖರಾದ ಸುಭಾಷ್ ಚಂದ್ರ ಆಳ್ವ ಉಪಸ್ಥಿತರಿದ್ದರು.