ವೀರಾಜಪೇಟೆ, ಏ. ೨೧: ಕಸ ವಿಲೇವಾರಿ ಘಟಕ ಮತ್ತು ಕಸವನ್ನು ಸಾಗಿಸಲು ಸಾಗಾಟ ವಾಹನ ಗಣ್ಯರ ಸಮ್ಮುಖದಲ್ಲಿ ಲೋಕಾರ್ಪಣೆಗೊಂಡಿತ್ತು.

ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮ ಪಂಚಾಯಿತಿಯ ಸರ್ವೆ ಸಂಖ್ಯೆ ೩೭೦/೧ ರ ಬಾರಿಕಾಡು ಎಂಬಲ್ಲಿ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳ ಗ್ರಾಮ ವಿಕಾಸ್ ಯೋಜನೆ ಅಡಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅನುದಾನ ಸುಮಾರು ರೂ. ೧೦ ಲಕ್ಷ ವೆಚ್ಚದಲ್ಲಿ ಘನ ತ್ಯಾಜ್ಯ ನಿರ್ವಹಣೆಗಾಗಿ ಸುಸಜ್ಜಿತವಾದ ಘಟಕ ಮತ್ತು ಕಸ ವಿಲೇವಾರಿ ಮಾಡಲು ಸುಮಾರು ೫ ಲಕ್ಷ ರೂಗಳ ವೆಚ್ಚದಲ್ಲಿ ಟಾಟಾಎಸ್ ವಾಹನ ಸ್ವಚ್ಛವಾಹಿನಿ ಲೋಕಾರ್ಪಣೆಗೊಂಡಿತು.

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್ ಹಿನ್ನೆಲೆ ಬಾರಿಕಾಡ್‌ವಿನಲ್ಲಿ ನಡೆಯಬೇಕಿದ್ದ ಸಮಾರಂಭವನ್ನು ಮೊಟುಕುಗೊಳಿಸಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿಕೊಂಡು ಸರಳ ರೀತಿಯಲ್ಲಿ ಕಾರ್ಯಕ್ರಮವು ಆಯೋಜನೆಗೊಂಡಿತ್ತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎನ್.ಎಂ. ಶೀಲಾ ಅವರು ಉದ್ಘಾಟಿಸಿದರು. ನಂತರದಲ್ಲಿ ಮಾತನಾಡಿದ ಶೀಲಾ ಅವರು ಪ್ರಧಾನಮಂತ್ರಿಗಳ ಸ್ವಚ್ಛ ಭಾರತದ ಕಲ್ಪನೆಗಳು ಸಹಕಾರಗೊಳ್ಳಬೇಕಾದರೆ ಗ್ರಾಮಸ್ಥರು ಗ್ರಾಮವನ್ನು ಮತ್ತು ತಮ್ಮ ಪರಿಸರವನ್ನು ಸ್ವಚ್ಛವಾಗಿರಿಸಲು ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದರು.

ತಾಲೂಕು ಸ್ವಚ್ಛ ಭಾರತ್ ಅಭಿಯಾನ ನೋಡಲ್ ಅಧಿಕಾರಿ ಅಜ್ಜಿಕುಟ್ಟಿರ ಸೂರಜ್ ಅವರು ಮಾತನಾಡಿ, ಸರ್ಕಾರದ ಆಯೋಜನೆಗಳನ್ನು ಉಪಯೋಗಿಸಿಕೊಂಡು ಸದ್ಬಳಕೆ ಮಾಡುವಲ್ಲಿ ಗ್ರಾಮ ಪಂಚಾಯಿತಿಗಳು ಕ್ರಮ ವಹಿಸಬೇಕು ಎಂದು ಹೇಳಿದರು.

ತಾಲೂಕು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಪ್ಪಣ್ಣ ಕೆ.ಪಿ. ಮಾತನಾಡಿ, ಸರ್ಕಾರದ ಅನುದಾನಗಳನ್ನು ಗ್ರಾಮ ಪಂಚಾಯಿತಿಗಳು ಸರಿಯಾದ ರೀತಿಯಲ್ಲಿ ಬಳಕೆ ಮಾಡಿದಲ್ಲಿ ಗ್ರಾಮಾಭಿವೃದ್ಧಿಯಾಗುತ್ತದೆ. ಜನಪ್ರತಿನಿಧಿಗಳು ಪಂಚಾಯಿತಿಗಳಿಗೆ ಸಹಕಾರ ನೀಡುವಂತಾಗಬೇಕು ಘಟಕದ ಮತ್ತು ವಾಹನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಘಟಕ ಉದ್ಘಾಟನೆ ವೇಳೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಎಂ.ಬಿ. ಮೀನಾಕ್ಷಿ, ಕೆದಮುಳ್ಳೂರು ಗ್ರಾಮ ಪಂಚಾಯಿತಿ ಪಿ.ಡಿ.ಓ. ಪ್ರಮೋದ್ ಪಿ.ಕೆ., ಕಾರ್ಯದರ್ಶಿ ವಿಠಲ, ಪಂಚಾಯಿತಿ ಸಿಬ್ಬಂದಿಗಳು, ಎಲ್ಲಾ ವಾರ್ಡ್ಗಳ ಗ್ರಾಮ ಪಂಚಾಯಿತಿ ಸದಸ್ಯರು, ಮಾಜಿ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.

- ಕೆ.ಕೆ.ಎಸ್.