ನಾಪೋಕ್ಲು, ಏ. ೨೦: ಸಮೀಪದ ಕಿರುಂದಾಡು ಗ್ರಾಮದ ಶ್ರೀ ವಿಷ್ಣುತಿರಿಕೆ ದೇವಾಲಯದ ಜೀರ್ಣೋದ್ಧಾರಕ್ಕೆ ನಾಲ್ಕು ಕುಟುಂಬದವರು ಮುಂದಾಗಿದ್ದು ಭಕ್ತರ ನಾಡಿನ ದಾನಿಗಳ ನೆರವನ್ನು ಕೋರಿದ್ದಾರೆ. ಕಿರುಂದಾಡು ಗ್ರಾಮದ ವಿಷ್ಣುತಿರಿಕೆ ದೇವಾಲಯದ ಜೀರ್ಣೋದ್ಧಾರಕ್ಕೆ ಗ್ರಾಮದ ಬಿಟ್ಟೀರ, ಬಾದಮಂಡ, ಅಪ್ಪನೆರವಂಡ ಮತ್ತು ಎಳ್ತಂಡ ಕುಟುಂಬಗಳ ಸಮಿತಿ ರಚನೆ ಮಾಡಲಾಗಿದೆ.
ಕಿರುಂದಾಡಿನ ಅದಿದೇವ ಶ್ರೀ ಭಗವತಿ ಅನ್ನಪೂರ್ಣೇಶ್ವರಿ ದೇವಿಯು ಸುಮಾರು ೧೨೦೦ ವರ್ಷಗಳ ಹಿಂದೆ ಇಲ್ಲಿ ಬಂದು ನೆಲೆಸಿರುವ ಪ್ರತೀತಿ ಇದೆ. ಈ ತಾಯಿಯ ಶಕ್ತಿಗೆ ಪೂರಕವಾಗಿ ನಾಲ್ಕು ದಿಕ್ಕುಗಳಲ್ಲಿ ಶಕ್ತಿ ದೇವರುಗಳೆಂದೇ ಪ್ರತೀತಿ ಪಡೆದ ದೇವಾಲಯಗಳಲ್ಲಿ ಒಂದಾದ ಶ್ರೀವಿಷ್ಣು ದೇವಾಲಯವು ಗ್ರಾಮದ ಮೇಕಟ್ಟು ಕೇರಿಯ ಅಪ್ಪನೆರವಂಡ ಕುಟುಂಬಸ್ಥರ ಜಾಗದಲ್ಲಿ ಪುರಾತನ ಕಾಲದಲ್ಲಿ ಇದ್ದ ಶಕ್ತಿ ದೇವರಾಗಿದ್ದಾರೆ. ಈ ದೇವರಿಗೆ ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆ ನಡೆಯುವುದು ವಾಡಿಕೆ. ಈ ದೇವರ ಗುಡಿ ಪಾಳು ಬಿದ್ದಿದೆ. ಇದರ ಜೀರ್ಣೋದ್ಧಾರಕ್ಕೆ ಮುನ್ನುಡಿ ಇಡಲು ಸಂಬAಧಪಟ್ಟ ಕುಟುಂಬಗಳ ಸಭೆ ಹಾಗೂ ಜೀರ್ಣೋದ್ಧಾರ ಸಭೆ ನಡೆದಿದ್ದು, ಇದೀಗ ಗರ್ಭಗುಡಿ ಪುನರ್ ನಿರ್ಮಾಣ, ಭಗ್ನಗೊಂಡ ವಿಷ್ಣುದೇವರ ಮೂರ್ತಿ ನಿರ್ಮಾಣ ಮತ್ತು ಪುನರ್ಪ್ರತಿಷ್ಠೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.
ಊರಿನ ತಾಯಿ ಭಗವತಿ, ಇಗ್ಗುಮ್ಮ ತಾಯಿ, ಬೊಟ್ಲಪ್ಪ ದೇವರು ಮತ್ತು ಊರಿನ ಅಜ್ಜಪ್ಪ ದೇವರ ತಾಣ ಜೀರ್ಣೋದ್ಧಾರಗೊಂಡಿದ್ದು ವಿಷ್ಣುತಿರಿಕೆ ದೇವಾಲಯ ಜೀರ್ಣೋದ್ಧಾರ ಅಗತ್ಯವಾಗಿ ಆಗಬೇಕಿದೆ. ಊರಿನ ಹಿರಿಯರ ಪ್ರಕಾರ ಟಿಪ್ಪು ಧಾಳಿಗೆ ಒಳಗಾಗಿ ದೇವರ ಮೂರ್ತಿ ತುಂಡಾಗಿದೆ. ಇದಕ್ಕೆ ಪೂಜೆ ಪುನಸ್ಕಾರಗಳನ್ನು ಮಾಡುತ್ತ ಬರಲಾಗಿದೆ. ಭಗ್ನಗೊಂಡ ಮೂರ್ತಿಗೆ ಪೂಜೆ, ಧಾರ್ಮಿಕ ವಿಧಿವಿಧಾನಗಳು ನೆರವೇರಿಸುವುದು ಸರಿಯಲ್ಲವೆಂದು ಕಂಡುಬAದಿರುವುದರಿAದ ಜೀರ್ಣೋದ್ಧಾರಕ್ಕೆ ನಿರ್ಧರಿಸಲಾಗಿದೆ ಎಂದು ನಾಲ್ಕು ಕುಟುಂಬಗಳ ಸಮಿತಿ ಸದಸ್ಯರು ತಿಳಿಸಿದರು. ಕಿರುಂದಾಡು ಗ್ರಾಮದ ನಾಲ್ಕು ಕುಟುಂಬಸ್ಥರು ಒಟ್ಟಾಗಿ ದೇವಾಲಯದ ಜೀರ್ಣೋದ್ಧಾರಕ್ಕೆ ಮುಂದಾಗಿದ್ದೇವೆ. ಸುಮಾರು ೮೦೦ ವರ್ಷಗಳ ಹಿಂದೆ ಟಿಪ್ಪು ದೇವಾಲಯವನ್ನು ಭಗ್ನಗೊಳಿಸಿದ್ದಾಗಿ ಹಿರಿಯರು ಹೇಳುತ್ತಾರೆ. ಪುರಾತನ ಕಾಲದ ದೇವಾಲಯವನ್ನು ಅಭಿವೃದ್ಧಿಪಡಿಸುವ ಗುರಿಯಿದ್ದು ಊರಿನ ಒಳಿತಿಗಾಗಿ ಜೀರ್ಣೋದ್ದಾರ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ಬಿಟ್ಟೀರ ಅಪ್ಪಾಜಿ ತಿಳಿಸಿದರು.