ಆಲೂರು-ಸಿದ್ದಾಪುರ, ಏ. ೨೦: ‘ದೇಶದಲ್ಲಿ ಮಹಿಳೆಯರು ಪುರುಷರಿಗೆ ಸರಿ ಸಮಾನರಾಗಿ ಪ್ರತಿಯೊಂದು ಕ್ಷೇತ್ರದಲ್ಲಿ ತಮ್ಮ ಚಾಪು ಮೂಡಿಸುತ್ತಿದ್ದರೂ ಕೆಲವು ಮಹಿಳೆಯರು ಸಮಾನತೆಯಲ್ಲಿ ಹಿಂದುಳಿದಿದ್ದಾರೆ’ ಎಂದು ಅಂಕನಹಳ್ಳಿ ಸರಕಾರಿ ಪ್ರೌಢಶಾಲಾ ಶಿಕ್ಷಕಿ ಮತ್ತು ಸಂಪನ್ಮೂಲ ವ್ಯಕ್ತಿ ಮೀರಾ ಸುಮನ್ ಕ್ಯಾಲಿಸ್ತ ಅಭಿಪ್ರಾಯಪಟ್ಟರು.

ಆಲೂರು-ಸಿದ್ದಾಪುರ ಸರ್ಕಾರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಮಹಿಳಾ ಜಾಗೃತಿ ಶಿಬಿರದಲ್ಲಿ ಮಹಿಳಾ ಸಬಲೀಕರಣ ಕುರಿತು ಮಾತನಾಡುತ್ತಿದ್ದರು. ಈಗಿನ ಬದಲಾದ ಕಾಲಘಟ್ಟದಲ್ಲಿ ಮಹಿಳೆಯರು ಪುರುಷರಿಗೆ ಸರಿ ಸಮಾನರಾಗಿ ಪ್ರತಿಯೊಂದು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಕೂಡುಮಂಗಳೂರು ವಿಜಯನಗರ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿ ನವಿನಾ ಮಾತನಾಡಿ, ಎರಡೂ ಕೈ ಸೇರಿದರೆ ಚಪ್ಪಾಳೆಯಾಗುವಂತೆ ಮಹಿಳೆಯರು ಸಬಲರಾಗಬೇಕಾದರೆ ಪುರುಷರ ಪ್ರೋತ್ಸಾಹ, ಸಹಕಾರ ಬೇಕಾಗುತ್ತದೆ ಎಂದರು.

ಆಲೂರುಸಿದ್ದಾಪುರ ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರುತಿ ಮಾತನಾಡಿ-ಮಹಿಳೆಯರಿಂದ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿ ಮುನ್ನುಗ್ಗುತ್ತಿದ್ದಾರೆ, ಸಮಾಜದಲ್ಲಿ ಹಿಂದುಳಿದ ಮಹಿಳೆಯರು ಪ್ರಗತಿ ಸಾಧಿಸಬೇಕಾದರೆ ಮಹಿಳಾ ಜಾಗೃತಿ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕಾಗಿದೆ ಎಂದರು.

ಭಾರತ ಸೇವಾದಳದ ಕುರಿತು ತಾಲೂಕು ಸೇವಾದಳದ ಸಂಘಟಕ ಡಿ.ವಿ. ಗಣೇಶ್, ಆಲೂರು-ಸಿದ್ದಾಪುರ ಸರಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರಾಜಶೇಖರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಕಾಂತರಾಜ್ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ಗ್ರಾ.ಪಂ. ಸದಸ್ಯ ಪಿ.ಎಸ್. ಸತೀಶ್, ಭಾರತ ಸೇವಾದಳ ಜಿಲ್ಲಾ ಸಮಿತಿ ಸಂಘಟಕ ಎಂ. ಉಮೇಶ್, ಸೋಮವಾರಪೇಟೆ ತಾಲೂಕು ಸಂಘಟಕ ಹೆಚ್.ಪಿ. ಕರುಂಬಯ್ಯ, ಸೇವಾದಳದ ಸದಸ್ಯ ರಂಗಸ್ವಾಮಿ, ಅಂಗನವಾಡಿ ಶಿಕ್ಷಕಿ ಜ್ಯೋತಿ, ಶಿಕ್ಷಕರಾದ ಕುಮಾರ್, ರಾಧ, ಪ್ರಭಾಮಣಿ ಮುಂತಾದವರಿದ್ದರು.