ಸೋಮವಾರಪೇಟೆ, ಏ. ೧೯: ಕರ್ನಾಟಕ ರಾಜ್ಯ ಸೀನಿಯರ್ ಕಬಡ್ಡಿ ತಂಡಕ್ಕೆ ಕೊಡಗಿನ ಗ್ರಾಮೀಣ ಪ್ರತಿಭೆ ರತನ್ ಆಯ್ಕೆಯಾಗಿ ಅತ್ಯುತ್ತಮ ಆಟಗಾರರಾಗಿ ಹೊರಹೊಮ್ಮಿದ್ದಾರೆ.
ತಾಲೂಕಿನ ಕೂತಿ ಗ್ರಾಮದ ಕೆ.ಎ. ರತನ್, ಬ್ಯಾಂಕ್ ಆಫ್ ಬರೋಡ ತಂಡದ ಆಟಗಾರರಾಗಿದ್ದು, ಈಗ ರಾಜ್ಯ ಸೀನಿಯರ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ತಾ. ೧೩ ರಿಂದ ೧೬ರ ವರೆಗೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆದ ೬೮ನೇ ಪುರುಷರ ಸೀನಿಯರ್ ನ್ಯಾಷನಲ್ ಕಬಡ್ಡಿ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ.
ರಾಜ್ಯ ತಂಡ ಕ್ವಾಟರ್ ಫೈನಲ್‌ಗೆ ತಲುಪಿದ ಹಿನ್ನೆಲೆಯಲ್ಲಿ ಮುಂಬರುವ ಫೆಡರೇಷನ್ ಕಪ್ ಹಾಗು ನ್ಯಾಷನಲ್ ಗೇಮ್ಸ್ಗೆ ಆಯ್ಕೆಗೊಂಡಿದೆ. ತಂಡದ ೧೨ ಆಟಗಾರರೆಲ್ಲರೂ ಮುಂದಿನ ಪ್ರೋ ಕಬಡ್ಡಿ ಲೀಗ್ ಹರಾಜು ಪ್ರಕ್ರಿಯೆಗೆ ಆಯ್ಕೆಗೊಂಡಿದ್ದಾರೆ. ೬೮ನೇ ಪುರುಷರ ಸೀನಿಯರ್ ನ್ಯಾಷನಲ್ ಕಬಡ್ಡಿ ಚಾಂಪಿಯನ್ ಶಿಪ್‌ನ ಪಂದ್ಯಾವಳಿಯ ಅತ್ಯುತ್ತಮ ರೈರ‍್ಸ್ ಪಟ್ಟಿಯಲ್ಲಿ ೫೫ ಅಂಕಗಳನ್ನು ಗಳಿಸಿರುವ ಕರ್ನಾಟಕ ತಂಡದ ಕೆ.ಎ. ರತನ್, ೫ನೇ ಸ್ಥಾನದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಎಲ್ಲಾ ಅರ್ಹತೆ ಗಳಿಸಿಕೊಂಡಿದ್ದಾರೆ. ೨೦೧೩ರಲ್ಲಿ ಚಿತ್ರದುರ್ಗದಲ್ಲಿ ನಡೆದ ೨ನೇ ರಾಜ್ಯ ಜೂನಿಯರ್ ಕಬಡ್ಡಿ ಚಾಂಪಿಯನ್‌ಶಿಪ್, ೨೦೧೫ರ ೪ನೇ ರಾಜ್ಯ ಜೂನಿಯರ್ ಕಬಡ್ಡಿ ಚಾಂಪಿಯನ್‌ಶಿಪ್, ೨೦೧೭ರ ದಕ್ಷಿಣ ವಲಯ ಅಂತರ ವಿಶ್ವವಿದ್ಯಾನಿಲಯ ಪಂದ್ಯಾವಳಿ, ೨೦೧೮ರಲ್ಲಿ ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದ ೧೦ನೇ ರಾಷ್ಟಿçÃಯ ಬೀಚ್ ಕಬಡ್ಡಿ ಚಾಂಪಿಯನ್‌ಶಿಪ್, ೨೦೨೦ರ ರಾಜಸ್ಥಾನದ ಜೈಪುರದಲ್ಲಿ ನಡೆದ ೬೭ನೇ ಹಿರಿಯರ ರಾಷ್ಟಿçÃಯ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಅಪಾರ ಅನುಭವ ಪಡೆದುಕೊಂಡಿದ್ದಾರೆ. ಸೋಮವಾರಪೇಟೆ ತಾಲೂಕಿನ ಕೂತಿ ಗ್ರಾಮದ ಕೃಷಿಕರಾದ ಅಪ್ಪಚ್ಚು ಮತ್ತು ಇಂದಿರಾ ದಂಪತಿಗಳ ಪುತ್ರ ರತನ್, ಬ್ಯಾಂಕ್ ಆಫ್ ಬರೋಡ ಉದ್ಯೋಗಿಯಾಗಿದ್ದಾರೆ. ಇದರೊಂದಿಗೆ ಸೋಮವಾರಪೇಟೆ ತಾಲೂಕಿನ ಗ್ರಾಮೀಣ ಭಾಗದ ಕಬಡ್ಡಿ ಪ್ರತಿಭೆಗಳಲ್ಲಿ ಹಾನಗಲ್ಲು ಗ್ರಾಮದ ಡಿ.ಕೆ. ರಂಜಿತಾ ಕರ್ನಾಟಕ ಮಹಿಳೆಯರ ಜೂನಿಯರ್ ತಂಡದ ನಾಯಕಿಯಾಗಿ, ನಂತರ ಸೀನಿಯರ್ ತಂಡವನ್ನು ಪ್ರತಿನಿಧಿಸಿದ್ದರು. ಚಿಕ್ಕತೋಳೂರು ಗ್ರಾಮದ ಯಶಸ್ವಿನಿ ಕರ್ನಾಟಕ ಸೀನಿಯರ್ ತಂಡವನ್ನು ಪ್ರತಿನಿಧಿಸಿ, ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇವರುಗಳೊಂದಿಗೆ ಇದೀಗ ರತನ್ ಸಹ ಕಬಡ್ಡಿ ಕ್ರೀಡೆಯಲ್ಲಿ ಮಿಂಚುತ್ತಿದ್ದು, ಭರವಸೆಯ ಆಟಗಾರರಾಗಿ ಹೊರಹೊಮ್ಮುತ್ತಿದ್ದಾರೆ.